ಸದ್ಯಕ್ಕಿಲ್ಲ ರಸಗೊಬ್ಬರ ಅಭಾವ

ಸಿಂಧನೂರಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಚೇರಿ ಹೊರನೋಟ.
ಸಿಂಧನೂರಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಚೇರಿ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಬೇಡಿಕೆಗಿಂತ ಹೆಚ್ಚು ಪೂರೈಕೆ
  • ಜುಲೈನಲ್ಲಿ ಭತ್ತ ನಾಟಿ ವೇಳೆ ಸಮಸ್ಯೆ ?
  • ರೈತರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
ಸಿಂಧನೂರು: ರಸಗೊಬ್ಬರ ಎಕರೆಗೆ ಒಂದು ಚೀಲ ವಿತರಿಸಲು ಸರ್ಕಾರ ಮುಂದಾಗಿದ್ದು, ಜೂನ್ ಅಂತ್ಯದವರೆಗೆ ದಾಸ್ತಾನಿಗೆ ಕೊರತೆಯಿಲ್ಲ. ಜುಲೈನಲ್ಲಿ ಭತ್ತ ನಾಟಿ ಆರಂಭವಾಗಲಿದ್ದು, ರಸಗೊಬ್ಬರ ಅಭಾವ ಹಾಗೂ ದರ ಏರಿಕೆ ಬಿಸಿ ಈಗಿನಿಂದಲೇ ಕಾಡತೊಡಗಿದೆ. 
ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ತಾಲೂಕಿಗೆ ಪೂರೈಕೆಯಾಗಿದೆ. 17,929 ಟನ್ ಗೊಬ್ಬರ ಬೇಡಿಕೆ ಇದ್ದು, 25 ಸಾವಿರ ಟನ್ ಗೊಬ್ಬರ ಬಂದಿದೆ. ಈಗಾಗಲೇ 6 ಸಾವಿರ ಟನ್ ವಿತರಣೆಯಾಗಿದ್ದು, 19 ಸಾವಿರ ಟನ್ ದಾಸ್ತಾನಿದೆ. 
ಯೂರಿಯಾ ಮತ್ತು ಡಿಎಪಿ ದರದಲ್ಲಿ ಭಾರಿ ಏರಿಕೆಯಾಗಿದ್ದರೂ, ಕೇಂದ್ರ ಸರ್ಕಾರ ಸಬ್ಸಿಡಿ ನೀಡುವ ಮೂಲಕ ದರ ನಿಯಂತ್ರಣದಲ್ಲಿಟ್ಟಿದೆ. ಪೋಟ್ಯಾಷ್, ಕಾಂಪ್ಲೆಕ್ಸ್ ರಸಗೊಬ್ಬರದ ನಿಯಂತ್ರಣವಿಲ್ಲದ ಕಾರಣ ತಿಂಗಳಲ್ಲಿ ಎರಡು ಸಲ ದರ ಏರಿಕೆ ಕಂಡಿದೆ. ಮೇ ಆರಂಭದಲ್ಲಿ 50 ಕೆಜಿಗೆ 1400 ರೂ. ಬೆಲೆ ಇತ್ತು. ಈಗ 1700 ರೂ. ಏರಿಕೆಯಾಗಿದೆ. 
ಹೊಸ ದಾಸ್ತಾನಿಗೆ 2,200 ರೂ. ಕೊಡಬೇಕಿದೆ. ಪೋಟ್ಯಾಷ್ 1800 ರೂ.ಯಿಂದ 1975 ರೂ.ಗೆ ಜಿಗಿದಿದೆ. ಡಿಎಪಿ 1,350 ರೂ. ಇದ್ದು ವ್ಯತ್ಯಾಸವಾಗಿಲ್ಲ. ಎನ್‌ಪಿಕೆ 1350 ರೂ.ಯಿಂದ 1,550ಕ್ಕೆ ಏರಿದೆ. 
ಬೆಲೆ ಏರಿಕೆ ನಿಯಂತ್ರಣಕ್ಕಿಲ್ಲ ಕ್ರಮ: ರಸಗೊಬ್ಬರ ಬೆಲೆ ಏರಿಕೆಯಲ್ಲಿ ನಿಯಂತ್ರಣ ಇಲ್ಲದಂತಾಗಿದೆ. ಆಯಾ ಕಂಪನಿಗಳು ವಿಭಿನ್ನವಾಗಿ ದರ ಏರಿಕೆ ಮಾಡುತ್ತಿದ್ದು, ರೈತರಿಗೆ ಬಿಸಿ ತಟ್ಟಿದೆ. ಪೋಟ್ಯಾಷ್, ಕಾಂಪ್ಲೆಕ್ಸ್ ರಸಗೊಬ್ಬರಗಳಿಗೂ ಸಬ್ಸಿಡಿ ನೀಡಲಾಗುತ್ತಿದ್ದು  ಸಬ್ಸಿಡಿ ಕಡಿಮೆಯಿದೆ. ದರ ಏರಿದಾಗ ಸಬ್ಸಿಡಿ ಹೆಚ್ಚಿಸುವುದಿಲ್ಲ ಎಂಬುದು ರೈತರ ಅಳಲಾಗಿದೆ. 

ಎಫ್‌ಐಡಿ ಬೇಕೇ ಬೇಕು!

ಯೂರಿಯಾ ಮತ್ತು ಇತರ ರಸಗೊಬ್ಬರ ಖರೀದಿಸಲು ಎಫ್‌ಐಡಿ ಕಡ್ಡಾಯ ಮಾಡಲಾಗಿದೆ. ಎಫ್‌ಐಡಿ ಹೊಂದಿದ ರೈತರಿಗೆ, ಕೆ- ಕಿಸಾನ್ ಆ್ಯಪ್ ಮೂಲಕ ನೋಂದಣಿ ಮಾಡಿ, ಎಕರೆಗೆ ಕೇವಲ 1 ಚೀಲ ರಸಗೊಬ್ಬರ ನೀಡಲಾಗುತ್ತದೆ. ರೈತರು ಹೆಚ್ಚಾಗಿ ರಸಗೊಬ್ಬ ಬಳಕೆ ಮಾಡಬಾರದೆಂಬ ಕಾರಣದಿಂದ ಈ ತೀರ್ಮಾನ ಸರ್ಕಾರ ಕೈಗೊಂಡಿದೆ ಎನ್ನಲಾಗಿದೆ. ಭತ್ತ ನಾಟಿ ಆರಂಭಗೊಂಡರೆ ಮಾತ್ರ ತಾಲೂಕಿನಲ್ಲಿ ರಸಗೊಬ್ಬರದ ಅಭಾವ ತಲೆದೋರುವ ಲಕ್ಷಣಗಳಿವೆ. 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ನಡೆಯಲಿದ್ದು, ಎಫ್‌ಐಡಿ ಮೂಲಕ ರಸಗೊಬ್ಬರ ವಿತರಣೆ ತೊಡಕಾಗಿ ಪರಿಣಮಿಸಲಿದೆ. 

ಸದ್ಯ ರಸಗೊಬ್ಬರ ತೊಂದರೆ ಇಲ್ಲ. ಜೂನ್‌ನಲ್ಲಿ ವಿತರಿಸಲು ಅಗತ್ಯ ದಾಸ್ತಾನು ಇದೆ. ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ಸಂಗ್ರಹವಿದ್ದು, ತೊಂದರೆ ಇಲ್ಲ. ಯೂರಿಯಾ ಬಳಕೆಗೆ ನಿಯಂತ್ರಣವಿದ್ದು ಎಕರೆಗೆ 1 ಚೀಲ ಗೊಬ್ಬರ ವಿತರಿಸಲಾಗುವುದು. ರೈತರು ಪರ್ಯಾಯ ಗೊಬ್ಬರ ಬಳಕೆಗೆ ಮುಂದಾಗಬೇಕು.

— ರುದ್ರಗೌಡ ಪಾಟೀಲ್ ಎಡಿ, ಕೃಷಿ ಇಲಾಖೆ, ಸಿಂಧನೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net