2024ರ ನ.25ರಿಂದ 2024ರ ಡಿ.9ವರೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 300 ರೂ. ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ.ಶುಲ್ಕ ನಿಗದಿಪಡಿಸಲಾಗಿತ್ತು. ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್ಟಿ) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರಲಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ 23,500 ರೂ.ನಿಂದ 47,650 ರೂ.ವೇತನ ನಿಗದಿಪಡಿಸಲಾಗಿತ್ತು. ಈ ವೇಳೆ ಸಾಮಾನ್ಯ ವರ್ಗ ಸೇರಿ ಇತರ ವರ್ಗದ ಲಕ್ಷಾಂತರ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ನಿಗದಿಯಂತೆ ನೇಮಕಾತಿ ಪರೀಕ್ಷೆ ನಡೆಸಬೇಕಿತ್ತು. ಆದರೆ, ಕೆಲ ತಿಂಗಳ ಬಳಿಕ ಆಯೋಗ, ಏಕಾಏಕಿ ಪರೀಕ್ಷೆ ರದ್ದುಪಡಿಸಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಹಗಲಿರಳು ಓದಿ ಪರೀಕ್ಷೆಗೆ ತಯಾರಿ ನಡೆಸಿದ ಲಕ್ಷಾಂತರ ಅಭ್ಯರ್ಥಿಗಳು ನಿರಾಸೆಯಾಗಿದೆ. ಅರ್ಜಿ ಶುಲ್ಕ ರೂಪದಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಬಂದಿದೆ. ಆದರೆ, ಈ ಹಣವನ್ನು ನೀಡದ ಕೆಪಿಎಸ್ಸಿ, ಅಭ್ಯರ್ಥಿಗಳನ್ನು ಸತಾಯಿಸುತ್ತಿದೆ.