ಜೆಡಿಎಸ್ ಮೇಜರ್ ಸರ್ಜರಿ ಹಿಂದೆ ಇದೆ ಹತ್ತಾರು ಲೆಕ್ಕಾಚಾರ!

ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್‌ನಲ್ಲಿ ಭಾರಿ ಬದಲಾವಣೆ ಪರ್ವ ಪ್ರಾರಂಭ
  • ಚುನಾವಣೆಗಳ ಮುನ್ನ ಪಕ್ಷ ಸಂಘಟನೆಗೆ ಆದ್ಯತೆ
  • ಕೋರ್ ಕಮಿಟಿ ಅಷ್ಟೇ ಅಲ್ಲ, ಹಲವು ಸಮಿತಿಗಳನ್ನು ಪುನಾರಚನೆ
ಶಿವಾನಂದ ತಗಡೂರು, ಬೆಂಗಳೂರು: ದೀಪಾವಳಿ ಬಳಿಕ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡಬೇಕು ಎಂದು ಸ್ಪಷ್ಟ ಗುರಿ ಇಟ್ಟುಕೊಂಡು ಸರ್ಕಸ್ ಮಾಡುತ್ತಿದ್ದ ಜೆಡಿಎಸ್ ವರಿಷ್ಠರು, ಈ ನಿಟ್ಟಿನಲ್ಲಿ ದಿಟ್ಟ ನಿರ್ಣಯ ಮಾಡಿರುವುದನ್ನು ಅವರ ನಡೆಯ ಮೂಲಕ ಧೃಢಪಡಿಸಿದ್ದಾರೆ.
ಕೋರ್ ಕಮಿಟಿ ಅಷ್ಟೇ ಅಲ್ಲ, ಪ್ರಚಾರ ಸಮಿತಿ ಸೇರಿದಂತೆ ಹಲವು ಸಮಿತಿಗಳನ್ನು ಪುನಾರಚನೆ ಮಾಡುವ ಮೂಲಕ, ಪಕ್ಷ ಸಂಘಟನೆಗೆ ಮುಂದಾಗಿರುವುದು ಹೊಸ ಬೆಳವಣಿಗೆ.
ಜೆಡಿಎಸ್‌ನಲ್ಲಿ ಇನ್ನು ಸುಮ್ಮನೆ ಕುಳಿತರೆ ನಾಯಕರಾಗಲು ಸಾಧ್ಯವಿಲ್ಲ. ನೀವು ಜನರನ್ನು ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು ಎನ್ನುವ ಸಂಗತಿಯನ್ನು ಜೆಡಿಎಸ್ ವರಿಷ್ಠರು ರವಾನಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮತ್ತು ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ ಎನ್ನುವುದು ದಳಪತಿಗಳಿಗೆ ಗೊತ್ತಿರುವ ಸಂಗತಿ. ಹಾಗಾಗಿಯೇ ಎಲ್ಲಾ ಲೆಕ್ಕಾಚಾರಗಳನ್ನು ಅಳೆದು ತೂಗಿರುವ ಗೌಡರು, ರಾಜಕೀಯ ವ್ಯವಹಾರಗಳ ಸಮಿತಿ ಸಾರಥ್ಯವನ್ನು ತಮ್ಮ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಹಿಸಿದ್ದಾರೆ.
ಪಕ್ಷದೊಳಗಿನ ಹಲವು ಹುದ್ದೆಗಳ ಬದಲಾವಣೆಗೆ ಹಲವರು ಪಟ್ಟು ಹಿಡಿದಿದ್ದು ನಿಜ. ಇನ್ನು ಕೆಲವರು ಈಗಿರುವ ವ್ಯವಸ್ಥೆಯಲ್ಲಿಯೇ ಎಲ್ಲವನ್ನೂ ಮುಂದುವರಿಸಿಕೊಂಡು ಹೋಗೋಣ ಎಂದಿದ್ದರು. ಆದರೆ ಇದೆಲ್ಲವನ್ನೂ ದಾಟಿ ಪಕ್ಷಕ್ಕೆ ಹೊಸ ರೂಪ ಕೊಡಲೇಬೇಕು ಎಂದು ನಿರ್ಣಯಿಸಿರುವುದು ವಿಶೇಷ.
ಜೆಡಿಎಸ್‌ನಲ್ಲಿ ಈಗ ಭಾರಿ ಬದಲಾವಣೆ ಪರ್ವ ಪ್ರಾರಂಭವಾಗಿದೆ ಎನ್ನುವುದಂತೂ ನಿಜ. ಎಂದೋ ಆಗಬೇಕಾಗಿದ್ದ ಸರ್ಜರಿ ಕೆಲಸ ನಾನಾ ಕಾರಣಕ್ಕಾಗಿ ಮುಂದಕ್ಕೆ ಹೋಗಿತ್ತು. ಒಮ್ಮೆ ಕುಮಾರಸ್ವಾಮಿ ಅವರಿಗೆ, ಮತ್ತೊಮ್ಮೆ ದೇವೇಗೌಡರಿಗೆ ಆರೋಗ್ಯ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸೇರಿದಂತೆ ನಾನಾ ಸಮಿತಿಗಳ ರಚನೆ ನನೆಗುದಿಗೆ ಬಿದ್ದಿತ್ತು. ಈಗ ಆ ಎಲ್ಲಾ ಸಮಿತಿಗಳ ಪುನಾರಚನೆ ಪ್ರಕ್ರಿಯೆ ಮುಗಿಸಿದಂತಾಗಿದೆ. ಶಾಸಕರು ಮತ್ತು ಮಾಜಿ ಶಾಸಕರು ಹಾಗೂ ಪಕ್ಷ ನಿಷ್ಠವಾಗಿರುವ ಮುಖಂಡರುಗಳಿಗೆ ಹಲವು ಹುದ್ದೆಗಳ ಸ್ಥಾನ ಮಾನ ನೀಡಲಾಗಿದೆ.
ಹೊಸದಾಗಿ ರಚನೆ ಆಗಿರುವ ಗ್ರೇಟರ್ ಬೆಂಗಳೂರು ಐದು ಪಾಲಿಕೆಗಳ ಉಸ್ತುವಾರಿಗಳನ್ನು ನೇಮಕ ಮಾಡುವ ಮೂಲಕ ಮುಂಬರಲಿರುವ ಚುನಾವಣೆಗೆ ಪಕ್ಷವನ್ನು ಸಜ್ಜು ಮಾಡುವ ಜವಬ್ದಾರಿಯನ್ನು ಹೊರಿಸಲಾಗಿದೆ.

ಕೋರ್ ಕಮಿಟಿ ಲೆಕ್ಕಾಚಾರ:

ಉತ್ತರ ಕರ್ನಾಟಕದ ಮಾಜಿ ಸಚಿವರೊಬ್ಬರನ್ನು ಕೋರ್ ಕಮಿಟಿಗೆ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎನ್ನುವ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಹರಿದಾಡಿದ್ದವು. ಈ ನಿಟ್ಟಿನಲ್ಲಿ ಬಿಸಿ ಬಿಸಿ ಚರ್ಚೆಯೂ ನಡೆದಿತ್ತು. ಆದರೆ, ಇದಕ್ಕೆ ತದ್ವಿರುದ್ದವಾದ ತೀರ್ಮಾನವನ್ನು ವರಿಷ್ಠರು ತೆಗೆದುಕೊಂಡಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲೆಯನ್ನು ಭದ್ರಪಡಿಸಿಕೊಳ್ಳೋಣ ಎನ್ನುವ ನಿರ್ಣಯಕ್ಕೆ ಬಂದಿರುವ ಅವರು, ಎಂ.ಕೃಷ್ಣಾರೆಡ್ಡಿ ಅವರನ್ನು ಆ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಅಖಂಡ ಕೋಲಾರ ಭಾಗಕ್ಕೂ ಹೆಚ್ಚಿನ ಒತ್ತು ನೀಡಿದ್ದಾರೆ.

ಮತ್ತೆ ವೈಎಸ್‌ವಿ ದತ್ತ ಮುನ್ನೆಲೆಗೆ:

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾನಸ ಪುತ್ರನಾಗಿ ಗಮನ ಸೆಳೆದಿದ್ದ, ವೈಎಸ್‌ವಿ ದತ್ತ ಕಡೂರು ಕ್ಷೇತ್ರದಿಂದ ಶಾಸಕರಾಗಿದ್ದವರು. ವಿಧಾನ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದವರು. ನಾನಾ ಕಾರಣಕ್ಕಾಗಿ ಅವರಿಗೆ ಜೆಡಿಎಸ್‌ನಲ್ಲಿ ಮಹತ್ವದ ಜವಬ್ದಾರಿ ನೀಡಿರಲಿಲ್ಲ. ಈಗ ಮತ್ತೆ ವೈಎಸ್‌ವಿ ದತ್ತ ಅವರಿಗೆ ಮಣೆ ಹಾಕಿರುವ ದಳಪತಿಗಳು ಪ್ರಚಾರ ಸಮಿತಿಯ ಹೊಣೆಯನ್ನು ಹೊರಿಸುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಜೆಡಿಎಸ್ ಪಕ್ಷಕ್ಕೆ ಹೊಸ ರೂಪ ನೀಡಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದವು. ಕೋರ್ ಕಮಿಟಿ ಸೇರಿದಂತೆ ಹಲವು ಸಮಿತಿಗಳಿಗೆ ಅಧ್ಯಕ್ಷರುಗಳನ್ನು ನೇಮಕ ಮಾಡುವ ತೀರ್ಮಾನವನ್ನು ವರಿಷ್ಠರಾದ ದೇವೇಗೌಡರು ತೆಗೆದುಕೊಂಡಿದ್ದಾರೆ. ಅಂತಿಮವಾಗಿ ಎಲ್ಲರೂ, ಪಕ್ಷಕ್ಕೆ ಶಕ್ತಿ ತುಂಬುವ ಮತ್ತು ಸಂಘಟನೆಯನ್ನು ಚುರುಕಾಗಿಸುವ ಕೆಲಸವನ್ನು ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net