ಅಂದಾಜು 1.20 ಕೋಟಿ ರೂ. ಮೌಲ್ಯದ 60 ಕೆಜಿಗೂ ಅಧಿಕ ಬೆಳ್ಳಿ ಪೂಜಾ ಸಾಮಗ್ರಿಗಳ ಕಳವು
ಸಿಸಿ ಕ್ಯಾಮರಾ ಬಂದ್‌ಮಾಡಿ ಕೃತ್ಯ
ಢವಳಗಿ: ಸಮೀಪದ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗಿನ ಜಾವ ಸುಮಾರು 60 ಕೆಜಿಗೂ ಅಧಿಕ ಪ್ರಮಾಣದ ಪೂಜಾ ಸಾಮಗ್ರಿಗಳ ಕಳ್ಳತನವಾಗಿರುವ ಘಟನೆ ನಡೆದಿದೆ.
ದೇವಸ್ಥಾನದಲ್ಲಿ ಅಂದಾಜು 35 ಕೆಜಿ ಶ್ರೀ ಬಸವೇಶ್ವರರ ಬೆಳ್ಳಿ ಮುಖ ಕವಚ, ದಿನ ನಿತ್ಯ ಪೂಜೆಗೆ ಬಳಸುತ್ತಿದ್ದ 10 ಕೆಜಿ ಬೆಳ್ಳಿ ಮೂರ್ತಿ ಹಾಗೂ ಇನ್ನಿತರ ಬೆಳ್ಳಿ ಆಭರಣಗಳು ಕಳ್ಳತನವಾಗಿವೆ.
ಬೆಳ್ಳಿಯ ಆಭರಣಗಳ ಒಟ್ಟು ಮೌಲ್ಯವು 1.20 ಕೋಟಿ ರೂ. ಗೂ. ಅಧಿಕ ಎಂದು ಅಂದಾಜಿಸಲಾಗಿದೆ. ಕಳುವಾಗಿದ್ದ ಬೆಳ್ಳಿಯ ಮುಖ ಕವಚ ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು 2013-14ರಲ್ಲಿ ಕಾಣಿಕೆಯಾಗಿ ನೀಡಿದ್ದರು.
ದೇವಸ್ಥಾನದಲ್ಲಿ ರಾತ್ರಿ ಸಾಧು-ಸಂತರೂ ಅಲ್ಲಿಯೇ ಮಲಗಿದ್ದರೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಕಳ್ಳತನದ ಸಮಯದಲ್ಲಿ ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮರಾಗಳು ಬಂದ್ ಆಗಿರುವುದು ಸಂಶಯಕ್ಕೆ ಕಾರಣವಾಗಿದ್ದು, ಕಳ್ಳರು ಮುಂಚಿತವಾಗಿಯೇ ಯೋಜನೆ ರೂಪಿಸಿಕೊಂಡೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ವಿಜಯಪುರದ ಶ್ವಾನ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.