ತಮ್ಮ ರಂಗ ಪಯಣದ ಕುರಿತು ಮಾತನಾಡಿದ ಅರುಂಧತಿ ನಾಗ್ ಅವರು, ನನ್ನ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿನ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮರಾಠಿ, ಗುಜರಾತಿ, ಹಿಂದಿ ಹಾಗೂ ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಒಮ್ಮೆ ತಿಂಗಳಿಗೆ 42 ಪ್ರದರ್ಶನ ನೀಡಿದ ದಾಖಲೆಯೂ ಇದೆ, ಎಂದು ನೆನಪು ಮಾಡಿಕೊಂಡರು. ಶಂಕರನಾಗ್ ಅವರೊಂದಿಗಿನ ಪರಿಚಯ, ವಿವಾಹ ಹಾಗೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ದಿನಗಳನ್ನು ಮೆಲುಕು ಹಾಕಿದರು.