_1781460821507.webp?w=480&auto=format%2Ccompress&fit=max)
_1781460821507.webp?w=480&auto=format%2Ccompress&fit=max)
ಹೇ ರಾಜ! ಶುದ್ಧವಿಜ್ಞಾನ (ಚೈತನ್ಯ) ಸ್ವರೂಪಿಯಾಗಿರುವ ನೀನು ಸರ್ವಾತ್ಮಕನಾದ್ದರಿಂದ ಶ್ರೇಷ್ಠವಾದ ಮಹಾಮಣಿಯಂತೆ ಅಥವಾ ಪ್ರಖರವಾದ ಸೂರ್ಯಾದಿ ತೇಜಃಪುಂಜದಂತೆ ಬೆಳಗುತ್ತಿದ್ದೀಯೆ. ಅಂದರೆ ಸದಾ ಬೆಳಗುತ್ತಿರುವ ಸ್ವಯಂಪ್ರಕಾಶ ಚೇತನಜ್ಯೋತಿಯೇ ನೀನಾಗಿದ್ದೀಯೆ. ಆ ಚೇತನಜ್ಯೋತಿಯೇ ಪರಮಾರ್ಥ ಸತ್ಯ. ವಸ್ತುತಃ ಅದೊಂದೇ ಇರುವುದು. ಈ ಸಾಮ್ರಾಜ್ಯ ಸತ್ಯವಲ್ಲ. ಅಲ್ಲದೇ ನೀನು ವಸ್ತುತಃ ವಿದೂರಥನಲ್ಲ. ವಿದೂರಥನೆಂಬ ಹೆಸರಿನ ದೇಹವನ್ನು ಧರಿಸಿರುವೆ. ಈ ಗಿರಿ, ಗ್ರಾಮ, ಪರಿಜನರು, ಶತ್ರುಗಳು ಸತ್ಯವಲ್ಲ. ಇವೆಲ್ಲವೂ ಮಿಥ್ಯ. ಅಲ್ಪತರವಾದ ಆಕಾಶದಲ್ಲಿ ಮಹತ್ತರವಾದ ದೃಶ್ಯಗಳು ಗೋಚರಿಸುತ್ತಿವೆ. ಆ ಗಿರಿಗ್ರಾಮ ನಿವಾಸಿ ವಿಪ್ರನ ಮಂಡಪಾಕಾಶದಲ್ಲಿ ಪದ್ಮಮಹಾರಾಜನ ಮತ್ತು ಲೀಲಾದೇವಿಯ ಜಗತ್ತು ಶೋಭಾಯಮಾನವಾಗಿದೆ. ಅನೇಕ ಭವನಗಳಿಂದ ಅಲಂಕರಿಸಲ್ಪಟ್ಟ ರಾಜಧಾನಿ ಗೋಚರಿಸುತ್ತಿದ್ದದ್ದು ಆ ವಿಪ್ರನ ಮಂಡಪಾಕಾಶದಲ್ಲಿಯೇ ಆಗಿದೆ. ಅದೇ ಆಕಾಶದ ಒಳಗೆ ಜಗತ್ತೆಲ್ಲವೂ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈಗ ನಾವು ಇಂತಹ ಜಗತ್ತಿನಲ್ಲಿಯೇ ಇರುವ ಈ ಅರಮನೆಯಲ್ಲಿ ಇರುವದು ಗೋಚರಿಸುತ್ತಿದೆ.
ಈ ಎಲ್ಲ ಮಂಡಪಗಳ ಆಕಾಶಗಳು ಆಕಾಶಾದಿ ಪಂಚ ಮಹಾಭೂತಗಳಿಗಿಂತ ವಿಭಿನ್ನವಾದ ಬ್ರಹ್ಮವೆಂಬ ಆಕಾಶವಾಗಿದೆ. (ಅಂದರೆ ಗಿರಿಗ್ರಾಮ ನಿವಾಸಿ ವಿಪ್ರನ ಅಂತಃಕರಣವೆಂಬ ಮಂಟಪದ ಒಳಗಿರುವ ಆಕಾಶವೂ ಬ್ರಹ್ಮವೇ. ಹಾಗೆಯೇ ಪದ್ಮ ಮಹಾರಾಜನ ರಾಜ್ಯಕ್ಕೆ ಆಧಾರವಾಗಿರುವ ಮತ್ತು ವಿದೂರಥನ ರಾಜ್ಯಕ್ಕೆ ಆಧಾರವಾಗಿರುವ ಚೈತನ್ಯವೂ ಬ್ರಹ್ಮವೇ.) ಈ ಮಂಟಪ ಗಳಲ್ಲಿರುವ ಬ್ರಹ್ಮದಲ್ಲಿ ಇವೆಲ್ಲವೂ ತೋರುತ್ತಿದ್ದರೂ ಪರಮಾರ್ಥತಃ ಇಲ್ಲ. ಈ ಭೂಮಿ, ಪಟ್ಟಣ, ವನ, ಪರ್ವತ, ಮೋಡ- ನದಿ- ಸಮುದ್ರ ಇವು ಯಾವವೂ ಪರಮಾರ್ಥತಃ ಇಲ್ಲ. ಈ ಜನರು ನೋಡುತ್ತಿರುವಂತೆ ಕಾಣುತ್ತಿರುವಾಗಲೇ ವಸ್ತುತಃ ನೋಡುತ್ತಿಲ್ಲ ಹಾಗೆಯೇ ಈ ರಾಜರು ನೋಡುತ್ತಿಲ್ಲ.
ಶ್ರೀದೇವಿಯ ಮಾತನ್ನು ಕೇಳಿ ವಿದೂರಥನಿಗೆ ಪ್ರಶ್ನೆ ಹುಟ್ಟಿಕೊಂಡಿತು- ಹೇ ದೇವಿ! ಹಾಗಾದರೆ ನನ್ನ ಈ ಅನುಚರರೆಲ್ಲಾ ಇಲ್ಲಿ ಇದ್ದಾರಲ್ಲ ಇವರು ಯಾರೂ ನೋಡುತ್ತಿಲ್ಲವೇ ಈ ಮಂತ್ರಿಗಳು ಭೃತ್ಯರೇ ಮೊದಲಾದವರು ಸ್ವಪ್ನದಲ್ಲಿ ಕಂಡ ಜನರಂತೆ ಆಗಲು ಸಾಧ್ಯವೇ? ಇದು ಅಸಂಭವವಲ್ಲವೇ? ಇವರೆಲ್ಲ ತಮ್ಮೊಳಗೆ ಜೀವಶಕ್ತಿಯಿಂದ ಕೂಡಿರುವರೋ, ಸ್ವಪ್ನದಲ್ಲಿ ಕಾಣುವ ಮನುಷ್ಯರಂತೆ ನಿರ್ಜೀವರೋ? ಇವರೆಲ್ಲ ಸ್ವಪ್ನದಲ್ಲಿ ಕಾಣುವ ಮನುಷ್ಯಾದಿ ಗಳಂತೆ ಕಾಣುತ್ತಿದ್ದಾರೆ. ಆದರೆ ಇದು ಹೇಗೆ ಸಾಧ್ಯ ಇವರೆಲ್ಲ ತಮ್ಮ ನಿಜಸ್ವರೂಪದಲ್ಲಿ ಸತ್ಯರೋ, ಅಸತ್ಯರೋ?
ಶ್ರೀ ಸರಸ್ವತಿ ಉತ್ತರಿಸಿದಳು- ಹೇ ರಾಜ! ನೀನು ಅಜ್ಞಾನಿಗಳ ದೃಷ್ಟಿಯಿಂದ ಜೀವಭಾವದಿಂದ ಇವರ ಸತ್ಯತೆಯನ್ನು ಕೇಳುತ್ತಿದ್ದೀಯೋ? ತತ್ವಜ್ಞಾನಿಗಳ ದೃಷ್ಟಿಯಿಂದ ಕೇಳುತ್ತಿದ್ದೀಯೋ? ಅಜ್ಞಾನಿಗಳ ದೃಷ್ಟಿಯಿಂದ ಕೇಳುತ್ತಿರುವುದಾದರೆ ಆ ಸತ್ಯತೆ ನಿನಗೂ ಇಲ್ಲ. ಯಾಕೆಂದರೆ ಜೀವಭಾವ ಸತ್ಯವಲ್ಲ. ತತ್ವಜ್ಞಾನಿಗಳ ದೃಷ್ಟಿಯಿಂದ ಕೇಳುತ್ತಿರುವುದಾದರೆ ತತ್ವಜ್ಞಾನಿಗಳು ಅಧಿಷ್ಠಾನ ಚೈತನ್ಯವನ್ನು ಮಾತ್ರವೇ ಗಮನಿಸುವವರಾದ್ದರಿಂದ ಅಧಿಷ್ಠಾನ ಚೈತನ್ಯದ ಸತ್ಯತೆ ನಿನಗೂ ಸೇರಿದಂತೆ ಈ ಎಲ್ಲರಿಗೂ ಇದೆ. ಯಾಕೆಂದರೆ ಅಧಿಷ್ಠಾನ ಚೈತನ್ಯ ಎಲ್ಲರ ಮೂಲಸ್ವರೂಪ. ಸರ್ವಜ್ಞ ರಾಗಿರುವ, ತತ್ವಜ್ಞಾನಿಗಳ ದೃಷ್ಟಿಯಲ್ಲಿ ಜಗತ್ತಿಗೆ ಸಂಬಂಧಿಸಿದ ಯಾವುದೂ ಸತ್ಯಸ್ವರೂಪವಲ್ಲ. ಈ ಜಗದ್ಭ›ಮೆಯು ಯಾವ ಕಾರಣದಿಂದ ತೋರಿಬರಲು ಸಾಧ್ಯ? ಉದಾಹರಣೆಗೆ ಹಗ್ಗದಲ್ಲಿ ಕಂಡಿರುವ ಹಾವಿನ ಭ್ರಾಂತಿ ವಸ್ತುಸ್ಥಿತಿ ಅರಿವಿನಿಂದ ಪರಿಹಾರವಾದ ನಂತರ ಮತ್ತೆ ಅಲ್ಲಿ ಹಾವಿನ ಅನುಭವ ಬರುತ್ತದೆಯೇ? ಹಾಗೆಯೇ ಈ ಜಗತ್ತು ಪರಮಾರ್ಥ ಸತ್ಯವಲ್ಲ ಎಂಬುದು ಅನುಭವದಿಂದ ಗೋಚರವಾದಾಗ ಮತ್ತೆ ಜಗದ್ಭಾ›ಂತಿಯಲ್ಲಿ ಸತ್ಯತೆ ಉಳಿಯುವುದೇ? ತಾನು ಬದುಕಿರುವೆನೆಂಬ ಅರಿವು, ಎಚ್ಚರಾಗುವಿಕೆಯ ನಂತರ ಗೊತ್ತಾದಾಗ, ಸ್ವಪ್ನದಲ್ಲಿ ಕಂಡಿರುವ ತಾನು ನಿಜವಾಗಿಯೂ ಸತ್ತೆನೆಂಬ ಅನುಭವ ಮತ್ತೆ ಬರುತ್ತದೆಯೇ? ಮರಣಹೊಂದದೇ ಬದುಕಿರುವವನಿಗೆ ತಾನೆ ಕಾಣುವ ಸ್ವಪ್ನದಲ್ಲಿ ಭಯ ಹುಟ್ಟಿಸುವ ತನ್ನ ಮರಣವು ಗೋಚರಿಸುತ್ತದೆ. ನೋಡುವ ತಾನು ಇಲ್ಲದಿದ್ದರೆ ಸ್ವಪ್ನದಲ್ಲಿ ಮರಣದ ದರ್ಶನವೇ ಆಗುವುದಿಲ್ಲ.
ಅನುಭವಾತ್ಮಕ ಅರಿವಿಂದ ಅಜ್ಞಾನವೆಂಬ ಮೋಡದ ಆವರಣ ನಾಶವಾದಾಗ, ಮನಸ್ಸು ನಿರ್ಮಲವಾಗಿ ಆತ್ಮತತ್ವದ ಜ್ಞಾನ ಕಿರಣಗಳಿಂದ ಮನಸ್ಸು ವ್ಯಾಪಿಸಲ್ಪಟ್ಟಿರುತ್ತದೆ. ಆತ್ಮತತ್ವದ ಏಕರಸತೆಯಿಂದ ಮನಸ್ಸು ಅತಿ ವಿಸ್ತಾರಗೊಂಡು ಪೂರ್ಣತೆ ಪಡೆದಿರುತ್ತದೆ. ಅಂತಹ ಶುದ್ಧ ತತ್ವಜ್ಞಾನಿಗೆ, ಜ್ಞಾನಿಗಳ ದೃಷ್ಟಿಗೆ ಗೋಚರಿಸುವ ನಾನು ಎಂಬ ಮತ್ತು ಇದು ಜಗತ್ತು ಎಂಬ ಅಲ್ಪ ಪದಾರ್ಥವೇ ಇರುವುದಿಲ್ಲ. ಯಾಕೆಂದರೆ ಇವೆಲ್ಲವೂ ಕೇವಲ ವಾಚಿಕಗಳು. ಕೇವಲ ಮಾತಿನಿಂದ ಇವೆ. ಉಪನಿಷತ್ತು ಇದನ್ನೇ ಹೇಳುತ್ತದೆ. ಶ್ರೀ ವಸಿಷ್ಠರು ಹೀಗೆ ಹೇಳುತ್ತಿರಲು ಹಗಲು ಮುಕ್ತಾಯಗೊಂಡಿತು. ಮುನಿಶ್ರೇಷ್ಠರು ಸಾಯಂಕಾಲದ ಅನುಷ್ಠಾನಕ್ಕಾಗಿ ಸ್ನಾನಕ್ಕೆ ತೆರಳಿದರು. ಅವರು ತೆರಳುತ್ತಿರುವಾಗ ಸಭೆಯು ನಮಸ್ಕರಿಸುತ್ತಾ ವಿಸರ್ಜನೆಗೊಂಡಿತು. ಇಲ್ಲಿಗೆ ಐದನೇ ದಿನವು ಮುಕ್ತಾಯಗೊಂಡಿದೆ.