ವಿಬಿಜಿ ರಾಮ್​ ಜಿ ಯೋಜನೆ ಗ್ರಾಮೀಣಾಭಿವೃದ್ಧಿಗೆ ಪೂರಕ

The VBJ RAM-G scheme supports rural development.
The VBJ RAM-G scheme supports rural development.
Published on

ಗೌರಿಬಿದನೂರು:

ವಿಬಿಜಿ ರಾಮ್​ ಜಿ ಯೋಜನೆ ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದು, ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ನವೀನ್​ ಭಟ್​ ಹೇಳಿದರು.

ತಾಲೂಕಿನ ನಕ್ಕಲಹಳ್ಳಿ ಗ್ರಾಪಂ ವ್ಯಾಪ್ತಿಯ ನರಸಾಪುರ ಗ್ರಾಮದಲ್ಲಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿ ಮಾತನಾಡಿ, ಈ ಮೊದಲು ಇದ್ದ ನರೇಗಾ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿ ವಿಬಿಜಿ ರಾಮ್​ ಜಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ಯೋಜನೆಯಡಿ ವಾರ್ಷಿಕ 125 ದಿನಗಳ ಕಾಲ ಕೂಲಿ ಸಿಗಲಿದೆ. ಕೂಲಿಯನ್ನು ಸರಾಸರಿ 327ಕ್ಕೆ ಹೆಚ್ಚಳ ಮಾಡಲಾಗಿದೆಯಲ್ಲದೆ 15 ದಿನಗಳಿಗೆ ಬದಲಾಗಿ ವಾರಕ್ಕೊಮ್ಮೆ ಕೂಲಿ ದೊರೆಯಲಿದೆ. ಯೋಜನೆಯಡಿ ಕೆರೆ, ಕಾಲುವೆ, ಮಳೆ ಕೋಯ್ಲು, ಗ್ರಾಮೀಣ ರಸ್ತೆ, ಚೆಕ್​ ಡ್ಯಾಂ, ಗ್ರಾಮೀಣ ಸಂತೆ, ದನದ ಕೊಟ್ಟಿಗೆ ನಿರ್ಮಾಣ ಸೇರಿ ಹತ್ತಾರು ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಮಾಡಬಹುದಾಗಿದೆ. ಇದರಿಂದ ವೈಯಕ್ತಿಕ ಜತೆಗೆ ಸಮುದಾಯದ ಅಭಿವೃದ್ಧಿ ಕಾಣಬಹುದು. ಆದ್ದರಿಂದ ಗ್ರಾಪಂಗಳ ವ್ಯಾಪ್ತಿಯಲ್ಲಿ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದರು.
ತಾಪಂ ಇಒ ಜಿ.ಕೆ.ಹೊನ್ನಯ್ಯ ಮಾತನಾಡಿ, ಈ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ ಮಾದರಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ವಿಬಿಜಿ ರಾಮ್​ ಜಿ ಯೋಜನೆಯಡಿ ಕೂಡ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕೂಲಿ ಕಾರ್ಮಿಕರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದ ಜಿಪಂ ಸಿಇಒ ನಂತರ ನರಸಾಪುರ ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಡುಗೆ ಆಹಾರ ಧಾನ್ಯ ಪರಿಶೀಲಿಸಿ ಸಲಹೆಗಳನ್ನು ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net