ದಂಡಕ್ಕಿಂತ ಟೋಯಿಂಗ್ ಶುಲ್ಕವೇ ದುಬಾರಿ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದಂಡದ ಮೊತ್ತ 500 ರೂ., ವಾಹನ ಹೊತ್ತೊಯ್ಯಲು 650 ರೂ. ನಿಗದಿ
  • ಟೋಯಿಂಗ್ ಶುಲ್ಕ ಪರಿಷ್ಕರಿಸುವಂತೆ ವಾಹನ ಸವಾರರ ಆಗ್ರಹ

ಸುನೀಲ್ ಹರಿಹರ

ಬೆಂಗಳೂರು: ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ಪುನರ್ ಆರಂಭಿಸಿರುವ ‘ಟೋಯಿಂಗ್’ ವ್ಯವಸ್ಥೆ ಬಗ್ಗೆ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದರೆ 1150 ರೂ. ದಂಡ ಹಾಕಲಾಗುತ್ತಿದೆ. 1150 ರೂ.ನಲ್ಲಿ 500 ರೂ. ದಂಡದ ಮೊತ್ತವಾದರೆ ಇದಕ್ಕಿಂತ ಹೆಚ್ಚು ಅಂದರೆ 650 ರೂ. ಟೋಯಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ. ದಂಡಕ್ಕಿಂತ ಟೋಯಿಂಗ್ ಶುಲ್ಕವೇ ದುಬಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಂಚಾರ ನಿಯಮ ಉಲ್ಲಂಘಿಸಿ ವಾಹನ ನಿಲ್ಲಿಸಿದಾಗ ವಿಧಿಸುವ ದಂಡದ ಮೊತ್ತ ಸರ್ಕಾರದ ನಿಯಮಕ್ಕನುಗುಣವಾಗಿರುತ್ತದೆ. ಆದರೆ, ವಾಹನ ಟೋಯಿಂಗ್ ಮಾಡಿದಾಗ ಪಾವತಿಸಬೇಕಾದ ಹಣವು ದಂಡದ ಮೊತ್ತ ಮೀರಿಸುತ್ತಿದೆ. ವಾಹನ ಎತ್ತಿದ ಸೇವೆಗಾಗಿ ವಿಧಿಸುವ ಈ ಶುಲ್ಕವು ಮಧ್ಯಮ ವರ್ಗದ ಜನರ ಆರ್ಥಿಕತೆಯ ಮೇಲೆ ನೇರ ಹೊಡೆತ ನೀಡುತ್ತಿದೆ. ಬೈಕ್‌ಗೆ 650 ರೂ. ಟೋಯಿಂಗ್ ಶುಲ್ಕ ವಿಧಿಸಿದರೆ, ಕಾರಿಗೆ 1 ಸಾವಿರ ರೂ. ವಿಧಿಸುತ್ತಾರೆ. ಇವೆರಡರ ವ್ಯತ್ಯಾಸ ಕೇವಲ 350 ರೂ. ಇದೆ.

ಶುಲ್ಕ ಪರಿಷ್ಕರಣೆಯಾಗಲಿ

ಒಂದು ಟೋಯಿಂಗ್ ವಾಹನದಲ್ಲಿ ಒಂದೇ ಕಾರು ಒಯ್ಯಲು 1 ಸಾವಿರ ರೂ. ಶುಲ್ಕ ವಿಧಿಸಲಾಗುತ್ತದೆ. ಆದರೆ ಒಂದೇ ವಾಹನದಲ್ಲಿ 4 ಬೈಕ್‌ಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದ್ದರಿಂದ ಬೈಕ್‌ನ ಟೋಯಿಂಗ್ ಶುಲ್ಕ ಪರಿಷ್ಕರಣೆ ಆಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಜ್ಞರ ಪ್ರಕಾರ, ಕೇವಲ ದಂಡ ವಿಧಿಸುವುದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯುವುದಿಲ್ಲ. ದಂಡ ಎನ್ನುವುದು ತಿದ್ದುಪಡಿಗಾಗಿ ಇರಬೇಕೇ ಹೊರತು, ಇದನ್ನೇ ಬಂಡವಾಳ ಮಾಡಿಕೊಳ್ಳಬಾರದು. ನಗರದಾದ್ಯಂತ ಅಗ್ಗದ ದರದ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಜಾರಿ ತರುವ ವರೆಗೂ ಇಂತಹ ಟೋಯಿಂಗ್ ದಂಧೆ ನಿಲ್ಲುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಮಸ್ಯೆಗಳು ಆದಾಯದ ಮೂಲವಾಗದಿರಲಿ

ಸಾರ್ವಜನಿಕರ ಸಮಸ್ಯೆಗಳನ್ನು ಆದಾಯದ ಮೂಲವನ್ನಾಗಿ ನೋಡಬಾರದು. ಆದ್ದರಿಂದ ಯಾವುದೇ ಯೋಜನೆಯಾಗಲಿ ನಾಗರಿಕ ಸ್ನೇಹಿಯಾಗಿರಬೇಕೇ ಹೊರತು, ‘ದಂಡ ಸ್ನೇಹಿ’ಯಾಗಿರಬಾರದು. ಈ ದುಬಾರಿ ಟೋಯಿಂಗ್ ವ್ಯವಸ್ಥೆ ಹೀಗೆ ಮುಂದುವರಿದರೆ, ಆಡಳಿತ ವ್ಯವಸ್ಥೆಯ ಮೇಲೆ ನಾಗರಿಕರು ನಂಬಿಕೆ ಕಳೆದುಕೊಳ್ಳಲಿದ್ದಾರೆ.

ಟೋಯಿಂಗ್ ವ್ಯವಸ್ಥೆ ಅವೈಜ್ಞಾನಿಕ?

ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಯಿಂಗ್ ಸಿಬ್ಬಂದಿ, ಸಂಚಾರ ಸುಧಾರಣೆಗಿಂತ ತಮ್ಮ ದೈನಂದಿನ ‘ಟಾರ್ಗೆಟ್’ ಪೂರೈಸುವುದಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳು ಈಗಲೂ ಕೇಳಿಬರುತ್ತಿವೆ. ಇನ್ನು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆಯೇ ನೋ-ಪಾರ್ಕಿಂಗ್ ಫಲಕ ಅಳವಡಿಸಿ ವಾಹನ ಎತ್ತುತ್ತಿರುವುದು ಅವೈಜ್ಞಾನಿಕ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟೋಯಿಂಗ್‌ಗೆ ಈ ಹಿಂದೆ ಬ್ರೇಕ್ ಬಿದ್ದಿತ್ತು..!
ಹಳೆಯ ವ್ಯವಸ್ಥೆಯಲ್ಲಿ ಖಾಸಗಿ ಆಪರೇಟರ್‌ಗಳು ಟೋಯಿಂಗ್ ನಿಭಾಯಿಸುತ್ತಿದ್ದರು. ಇವರ ಕಿರುಕುಳ ಹೆಚ್ಚಾಗಿದ್ದರಿಂದ ಸರ್ಕಾರ ಈ ಇದಕ್ಕೆ ಬ್ರೇಕ್ ಹಾಕಿತ್ತು. ಆದರೀಗ ಪುನರ್ ಆರಂಭವಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವಾಹನಗಳನ್ನು ನೀಡಿದ್ದು, ಜತೆಗೆ ಟೋಯಿಂಗ್ ಶುಲ್ಕವನ್ನೂ ನಿಗದಿ ಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net