ಆನೇಕಲ್​ನಲ್ಲಿ ಒಣ ಕರಗದ ಸೊಬಗು / ANEKAL

ಅಂಬೇಡ್ಕರ್​ ಕಾಲನಿ ಬಳಿ ಕರಗ ವೀಕ್ಷಣೆಗೆ ಜಮಾಯಿಸಿದ್ದ ಜನ.
ಅಂಬೇಡ್ಕರ್​ ಕಾಲನಿ ಬಳಿ ಕರಗ ವೀಕ್ಷಣೆಗೆ ಜಮಾಯಿಸಿದ್ದ ಜನ.
Published on
ಆನೇಕಲ್​ : ಪಟ್ಟಣದ ಪಾರ್ಥಸಾರಥಿ ಭಜನೆ ಮನೆಯಲ್ಲಿ ವಹ್ನಿಕುಲ ಸೇವಾ ಸಂಘದಿಂದ ಆಯೋಜಿಸಿದ್ದ ಒಣ ಕರಗ ಉತ್ಸವ ಅದ್ದೂರಿಯಾಗಿ ನೆರವೇರಿತು. ಹಸಿ ಕರಗ ಉತ್ಸವದ ಮೂರನೇ ದಿನ ಗುಣಾಕಾರದ ಉತ್ಸವ ನಡೆಯುವುದು ಇಲ್ಲಿ ವಿಶೇಷ. ಸೋಮವಾರ ಮುಂಜಾನೆ 2.35ಕ್ಕೆ ಪಾರ್ಥಸಾರಥಿ ಭಜನೆ ಮನೆಯಿಂದ ಕರಗ ಹೊತ್ತು ಪೂಜಾರಿ ಚಂದ್ರಪ್ಪ ದೇವಾಲಯದಿಂದ ಹೊರಗೆ ಬರುತ್ತಿದ್ದಂತೆ ವೀರ ಕುಮಾರರು ಅಲಗು ಸೇವೆ ಮೂಲಕ ಕರಗ ಬರಮಾಡಿಕೊಂಡರು.
ತಿಗಳರ ಬೀದಿ ಮೂಲಕ ಸಂತೆ ಮಾಳದಲ್ಲಿ ನಿಮಾರ್ಣ ಮಾಡಿದ್ದ ಕೊಂಡವನ್ನು ಹಾಯ್ದ ಚಂದ್ರಪ್ಪ, ನಂತರ ಪಕ್ಕದಲ್ಲಿ ನಿಮಾರ್ಣ ಮಾಡಿದ್ದ ವೀರ ವಸಂತ ಮೂರ್ತಿಯ ಎದುರು ನರ್ತಿಸಿದರು. ಈ ವೇಳೆ ಶಿರಚ್ಛೇಧ ಮಾಡುವ ರೀತಿಯಲ್ಲಿ ಮೊದಲೇ ನಿಮಾರ್ಣ ಮಾಡಿದ್ದ ವೀರ ವಸಂತನ ಮೂರ್ತಿಯನ್ನು ಕೆಡವಲಾಯಿತು.
ಬಳಿಕ ಕರಗ ಉತ್ಸವ ತಿಲಕ್​ ವೃತ್ತದಲ್ಲಿ ಮೂರು ಸುತ್ತು ಮೂಡಿ ರಾಗಕ್ಕೆ ಹೆಜ್ಜೆ ಹಾಕುತ್ತಾ ಮುಂದೆ ಸಾಗಿತು. ಆನೇಕಲ್​ನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಲನಿ ಬಳಿ ಇರುವ ಅಂಬೇಡ್ಕರ್​ ಪ್ರತಿಮೆ ಬಳಿ ಅದ್ದೂರಿಯಾಗಿ ಕರಗವನ್ನು ಸ್ವಾಗತಿಸಲಾಯಿತು. ಅಂಬೇಡ್ಕರ್​ ಪ್ರತಿಮೆ ಬಳಿ ಸಾವಿರಾರು ಭಕ್ತರು ಜಮಾಯಿಸಿದ್ದರು. ಕರಗ ಹೊತ್ತ ಚಂದ್ರಪ್ಪ 20 ನಿಮಿಷಕ್ಕೂ ಹೆಚ್ಚು ಕಾಲ ನರ್ತಿಸಿ ಗಮನ ಸೆಳೆದರು.
ಬಳಿಕ ಆನೇಕಲ್​ನ ಹೊಸೂರು ಬಾಗಿಲು ರಸ್ತೆಯ ಮೂಲಕ ದೇವರಕೊಂಡಪ್ಪ ವೃತ್ತ, ಕೆಇಬಿ ಕಚೇರಿ ಹಾಗೂ ಶ್ರೀರಾಮ ದೇವಾಲಯದ ಬಳಿ ನಾದಸ್ವರಕ್ಕೆ ನರ್ತನ ಮಾಡಿತು. ಬಳಿಕ ತಾಲೂಕು ಕಚೇರಿ ಮಾರ್ಗವಾಗಿ ದೇವಾಲಯಕ್ಕೆ ಬೆಳಗ್ಗೆ 5.5 ನಿಮಿಷಕ್ಕೆ ಮರಳಿತು.
ಜನರ ಮೆಚ್ಚುಗೆ : ಆನೇಕಲ್​ನ ಅರ್ಚಕರ ಕಡೆಯವರು ಕರಗ ಉತ್ಸವ ಮಾಡಿದ ಬಳಿಕ ಎರಡನೇ ಕರಗವನ್ನು ವಹ್ನಿಕುಲ ಕರಗ ಉತ್ಸವಕ್ಕೆ ಕಡಿಮೆ ಜನ ಸೇರಬಹುದೆನ್ನುವ ಮಾತುಗಳಿದ್ದವು. ಆದರೆ, ಕರಗ ನೋಡಲು ಜನ ಸಾಗರವೇ ಸೇರಿತ್ತು. ಕಟ್ಟಡದ ಮೇಲೆಲ್ಲ ಕುಳಿತು ಜನ ಕರಗ ಉತ್ಸವ ಕಣ್ತುಂಬಿಕೊಂಡರು. ಪೂಜಾರಿ ಚಂದ್ರಪ್ಪ ನೆರೆದಿದ್ದ ಜನರಿಗೆ ಕುಣಿತದ ಹಬ್ಬದೂಟವನ್ನೇ ಉಣಬಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.
ಎದೆಗೆ ಕತ್ತಿ ಬಡಿದುಕೊಂಡ ವೀರಕುಮಾರರು : ಒಣ ಕರಗ ಸಂಚಾರ ಮಾಡುವ ಮಾರ್ಗ ಬದಲಾವಣೆ ಆನೇಕಲ್​ ಕರಗದ ವಿಶೇಷ. ಪ್ರತಿ ಬೀದಿಗಳಿಗೂ ಹೋಗಿ ಮನೆ ಮುಂದೆ ಮುತೆದೆಯರು ಆರತಿ ಎತ್ತುವ ಸಂದರ್ಭದಲ್ಲಿ ಅವರಿಂದ ಮಡಿಲಕ್ಕಿ ಪಡೆದು ಕರಗ ಮುಂದೆ ಸಾಗಿತು. ಕರಗ ಸಾಗುತ್ತಿದ್ದ ರಸ್ತೆಗಳಲ್ಲಿ ನೂರಾರು ವೀರ ಕುಮಾರ ಕತ್ತಿಯನ್ನು ಹಿಡಿದು ಎದೆಗೆ ಬಡಿದುಕೊಂಡು ಡಿಕ್​ ಡಿ ಎಂದು ಕೂಗುತ್ತಾ ಮುಂದೆ ಸಾಗಿದು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು.
ಗೋವಿಂದ ನಾಮಸ್ಮರಣೆ : ಕರಗ ಹೊತ್ತ ಪೂಜಾರಿ ಚಂದ್ರಪ್ಪ ದೇವಾಲಯಕ್ಕೆ ಮರಳಿ ಪೂಜೆ ಸಲ್ಲಿಸಿ ಹೊರಗೆ ಬರುತ್ತಿದ್ದಂತೆ ನೆರೆದಿದ್ದ ಜನ "ಗೋವಿಂದ ಗೋವಿಂದ' ನಾಮಸ್ಮರಣೆ ಮಾಡಿದರು. ಕರಗ ಉತ್ಸವದ ಅಂಗವಾಗಿ ಆನೇಕಲ್​ನಲ್ಲಿ ಶ್ರೀ ರಾಮ ದೇವಾಲಯ ಹಾಗೂ ತಿಲಕ್​ ಸರ್ಕಲ್​ನಲ್ಲಿ ಪಲ್ಲಕ್ಕಿ ಉತ್ಸವ ಮಾಡಲಾಗಿತ್ತು. ತಿಲಕ್​ ಸರ್ಕಲ್​ನಲ್ಲಿ ಕರಗ ಉತ್ಸವಕ್ಕೂ ಮುನ್ನ ವೇದಿಕೆಯಲ್ಲಿ ಸಾಂಸತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಮೊದಲ ಬಾರಿಗೆ ಭಜನೆ ಮನೆಯ ಕರಗ ಉತ್ಸವ ಆನೇಕಲ್​ನಲ್ಲಿ ಅದ್ದೂರಿಯಾಗಿ ನೆರವೇರಿಸಲಾಗಿದ್ದು, ಸಾಕಷ್ಟು ಜನರ ಮೆಚ್ಚುಗೆ ಪಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net