ಹೇಮಾವತಿ ಯೋಜನೆಗಾಗಿ ತ್ಯಾಗ ಮಾಡಿದ ರೈತರ ಕಣ್ಣೀರ ಕಥೆ: ಪೋಡಿ ಮಾಡುತ್ತಿಲ್ಲ, ಪಹಣಿ ಸಿಗುತ್ತಿಲ್ಲ, ನಿತ್ಯ ಅಲೆಯುವುದು ತಪ್ಪಿಲ್ಲ

HD DEVAGOWDA
HD DEVAGOWDA
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರವೇ ನೀಡಿರುವ ಭೂಮಿಗೆ ಇನ್ನೂ ಪೋಡಿಯಾಗಿಲ್ಲ.
  • ರಾಜ್ಯಪಾಲರು, ರಾಷ್ಟ್ರಪತಿ, ಪ್ರಧಾನಿಗೂ ಪತ್ರ
  • ಭೂ ಮಂಜೂರಿಗೆ 1972ರಲ್ಲಿ ಗೆಜೆಟ್ ನೋಟಿಫಿಕೇಷನ್
ಶಿವಾನಂದ ತಗಡೂರು, ಬೆಂಗಳೂರು: 
ಹೇಮಾವತಿ ಜಲಾಶಯ ನಿರ್ಮಾಣವಾಗಿ ಅರ್ಧ ಶತಮಾನ ಕಳೆದರೂ, ಹೇಮಾವತಿ ಮುಳುಗಡೆ ಸಂತ್ರಸ್ತರ ಕಣ್ಣೀರಿನ ಕಥೆ ಮುಗಿಯುತ್ತಲೇ ಇಲ್ಲ. ನಾಡಿನ ಹಿತ ದೃಷ್ಟಿಯಿಂದ ದೊಡ್ಡ ಯೋಜನೆಗೆ ತಮ್ಮ ಪೂರ್ವಜನರು ಬದುಕಿ ಬಾಳಿದ ಮನೆ, ತೋಟ, ಹೊಲ, ಗದ್ದೆ ಸೇರಿದಂತೆ ಸರ್ವಸ್ವವನ್ನು ತ್ಯಾಗ ಮಾಡಿದ ಸಂತ್ರಸ್ತರ ಕೂಗು ಸರ್ಕಾರಕ್ಕೆ ಕೇಳದಾಗಿದ್ದು, ಅವರ ಬದುಕು ನಿತ್ಯವೂ ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ.
ಭೂಮಿ ಕಳೆದುಕೊಂಡಿರುವುದಕ್ಕೆ ಪರ್ಯಾಯವಾಗಿ ನೀಡಿರುವ ಭೂಮಿಯಲ್ಲಿ ಸಂತ್ರಸ್ತರು ತಮ್ಮ ಬದುಕು ಕಟ್ಟಿಕೊಂಡು ನೆಲೆಯಾಗಿದ್ದಾರೆ. ಸರ್ಕಾರವೇ ನೀಡಿರುವ ಭೂಮಿಗೆ ಇನ್ನೂ ಪೋಡಿಯಾಗಿಲ್ಲ. ಖಾತೆ, ಪಹಣಿ ಇಲ್ಲದೆ ನಿತ್ಯವೂ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. 
ನೀವೇ ಹಂಚಿಕೆ ಮಾಡಿರುವ ಜಮೀನಿನಲ್ಲಿ ನಾವಿದ್ದೇವೆ. ನಮ್ಮ ಜಮೀನು ದುರಸ್ತು ಮಾಡಿಕೊಡಿ ಎಂದು ಹೇಮಾವತಿ ಯೋಜನೆ ಸಂತ್ರಸ್ತರು ಐದು ದಶಕಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಕೊಡುತ್ತಲೇ ಬಂದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ರಾಜ್ಯಪಾಲರು, ರಾಷ್ಟ್ರಪತಿ, ಪ್ರಧಾನಿಗೂ ಪತ್ರ ಬರೆದಿದ್ದಾರೆ. ಆದರೂ ತಳಮಟ್ಟದ ಅಧಿಕಾರಿಗಳು ಹರ ಶಿವ ಎನ್ನುತ್ತಿಲ್ಲ.
ಪರಿಹಾರ ರೂಪದಲ್ಲಿ ಒಂದು ಕುಟಂಬಕ್ಕೆ 4 ಎಕರೆ ಭೂಮಿಯಂತೆ ನೀಡಿದ್ದ ಜಾಗದಲ್ಲಿಯೇ ಮುಳುಗಡೆ ಸಂತ್ರಸ್ತರು ಭೂಮಿ ಸಾಗುವಳಿ ಮಾಡುತ್ತಿದ್ದು, ಅಲ್ಲಿಯೇ ನೆಲೆಯಾಗಿದ್ದಾರೆ. ಅವರ ಮಕ್ಕಳು, ಮೊಮ್ಮಕ್ಕಳಿಗೆ ಭಾಗ ಮಾಡಿಕೊಡಲು ಸಂತ್ರಸ್ತರಿಗೆ ಸಾಧ್ಯವಾಗದೆ ನಿಜವಾದ ಸಂತ್ರಸ್ತರಾಗಿಯೇ ಉಳಿದಿದ್ದಾರೆ. 
ಹೋರಾಟದ ಹಾದಿ ಹಿಡಿದು, ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದ ಹೋರಾಟಗಾರರ ಬದುಕು ಉಸಿರುಗಟ್ಟಿದಂತಾಗಿದೆ. ಮುಳುಗಡೆ ಸಂತ್ರಸ್ತರಲ್ಲಿ ಹಲವರು ಮೃತಪಟ್ಟಿದ್ದರೂ, ಆ ಕುಟುಂಬಗಳಿಗೆ ಜಮೀನಿನ ವಿಷಯದಲ್ಲಿ ಇನ್ನೂ ನ್ಯಾಯ ಮಾತ್ರ ಸಿಕ್ಕಿಲ್ಲ. 
ಭರವಸೆಯಾಗಿ ಉಳಿದ ಮಾತು:
ಅರವತ್ತರ ದಶಕದಲ್ಲಿ ಗೊರೂರಿನ ಬಳಿ ಹೇಮಾವತಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲು ಅಂದು ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಅವರು ತೀರ್ಮಾನಿಸಿದ್ದಾಗಲೂ ಜನರು ನಮ್ಮ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ, ಅಂದು ಇಬ್ಬರೂ ಮುಖ್ಯಮಂತ್ರಿಗಳು,  ನಾಡಿಗಾಗಿ ನೀವು ತ್ಯಾಗ ಮಾಡಿ. ನಿವಗೆ ಪರ್ಯಾಯ ಭೂಮಿ ನೀಡಿ, ಸರ್ಕಾರ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ನೀಡಿದ್ದ ಭರವಸೆ ಆರು ದಶಕ ಕಳೆದರೂ ಭರವಸೆಯಾಗಿಯೇ ಉಳಿದಿದೆ. 
ಆಗಿರುವುದೇನು?
ಮುಳುಗಡೆ ಹೊಂದಿದ ಆಲೂರು ಹಾಗೂ ಹಾಸನ ತಾಲೂಕಿನ 42 ಗ್ರಾಮಗಳ ಜಮೀನು ಸ್ವಾಧಿನಪಡಿಸಿಕೊಂಡ ಸರ್ಕಾರ, ಬದಲಿ ಭೂ ಮಂಜೂರಿಗೆ 1972ರಲ್ಲಿ ಗೆಜೆಟ್ ನೋಟಿಫಿಕೇಷನ್ ಮಾಡಿದೆ. ಅದರಂತೆ 8273 ಸಂತ್ರಸ್ತರಿಗೆ ಪರಿಹಾರ ನೀಡುವ ಜತೆಗೆ ತಲಾ ನಾಲ್ಕು ಎಕರೆಯಂತೆ ಜಾಗವನ್ನು ನೀಡಿದೆ. ಸಂತ್ರಸ್ತರ ಜಮೀನು ದುರಸ್ತು, ಪೋಡಿ, ಖಾತೆ ಮಾಡಿಕೊಡಬೇಕಾದ ಜವಬ್ದಾರಿಯೂ ಸರ್ಕಾರದ್ದೇ ಆಗಿತ್ತು. ಒಕ್ಕಲೆಬ್ಬಿಸುವಲ್ಲಿ ಸರ್ಕಾರಕ್ಕೆ ಇದ್ದ ಆಸಕ್ತಿ, ನಂತರ ಸರ್ಕಾರಕ್ಕೆ ಇರಲಿಲ್ಲ. ಹಾಗಾಗಿಯೇ ಈ ಸಮಸ್ಯೆ, ಸಮಸ್ಯೆಯಾಗಿಯೇ ಉಳಿದಿದೆ. 
ಸಮಸ್ಯೆಗಳೇನು?
ಐದಾರು ದಶಕಗಳಿಂದ ನೊಂದು, ಬೆಂದು ಹೋಗಿರುವ ಮುಳುಗಡೆ ಸಂತ್ರಸ್ತರು, ತಮ್ಮ ಆಸ್ತಿ ಹಕ್ಕು ಪತ್ರಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಇನ್ನೂ ಸಮಸ್ಯೆಗಳು ತಪ್ಪಿಲ್ಲ. ಮದುವೆ ಮುಂಜಿ ಎಂದು ಹೊಲ, ಜಮೀನು ಮಾರಾಟ ಮಾಡಲು ಆಗುತ್ತಿಲ್ಲ. ಅಷ್ಟೇ ಅಲ್ಲ, ಸಾಲ ಪಡೆಯಲಾಗದೆ ಸಾವಿರಾರು ಜನರ ಬದುಕು ಅತಂತ್ರವಾಗಿದೆ. 979 ಪ್ರಕರಣಗಳ ಮಂಜೂರಾತಿಯಲ್ಲಿ ಅಕ್ರಮವಾಗಿದೆ ಎನ್ನುವ ನೆ ಮುಂದಿಟ್ಟುಕೊಂಡು ನೈಜ ಸಂತ್ರಸ್ತರನ್ನು ವಂಚಿಸಲಾಗುತ್ತಿದೆ ಎನ್ನುವುದು ಜನರ ದೂರು.
ಸಂಕಷ್ಟದಲ್ಲಿ ಸಂತ್ರಸ್ತರು:
ಜಿಲ್ಲಾಡಳಿತಕ್ಕೆ ಮನವಿ ನೀಡಿದಾಗಲೆಲ್ಲ, ಮಂಜೂರು ಮಾಡಿರುವುದು ನೈಜತೆಯಿಂದ ಕೂಡಿಲ್ಲ ಎಂದು ಅಧಿಖಾರಿಗಳು ಸಬೂಬು ಹೇಳುತ್ತಲೇ ಇದ್ದಾರೆ. ಭೂಮಿ ತ್ಯಾಗ ಮಾಡಿದವರಿಗೆ ಪರ್ಯಾಯವಾಗಿ ಭೂಮಿ ನೀಡಬೇಕಾಗಿದ್ದು ಸರ್ಕಾರದ ಜವಾಬ್ದಾರಿ. ಮಂಜೂರಿ ಪತ್ರ ನೈಜತೆಯಿಂದ ಕೂಡಿಲ್ಲ ಎನ್ನುವ ಅಧಿಕೃತ ಜ್ಞಾಪನ ಪತ್ರ ತೋರಿಸುವ ಬದಲು ಸಂತ್ರಸ್ತರ ಸಭೆ ನಡೆಸಿ, ಮತ್ತೊಮ್ಮೆ ಪರಿಶೀಲನೆ ಮಾಡಿದರೆ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ 4 ಸಾವಿರ ಸಂತ್ರಸ್ತರ, ಬೆಟ್ಟದಷ್ಟು ಸಂಕಷ್ಟ ಮಂಜಿನಂತೆ ಕರಗಲಿದೆ. 
ಕಂದಾಯ ಸಚಿವರೇ ಜಿಲ್ಲಾ ಉಸ್ತುವಾರಿ!
ಕಂದಾಯ ಇಲಾಖೆಗೆ ಹೊಸ ರೂಪ ನೀಡಿರುವ ಕೃಷ್ಣಾಭೈರೇಗೌಡ ಅವರೇ ಈಗ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಈ ಸಮಸ್ಯೆಯನ್ನು ಆದ್ಯತೆಯಾಗಿ ಇಟ್ಟುಕೊಂಡು ಸಂತ್ರಸ್ತರ ಜೊತೆಗೆ ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಬಹುದು. ಆದರೆ ಅವರಿಗೂ ಪುರಸೊತ್ತಿಲ್ಲ ಎನ್ನುವುದು ಸಂತ್ರಸ್ತರ ದೂರು. 
ಸಂತ್ರಸ್ತರ ವಾದ:
-ಅಕ್ರಮ ಮಂಜೂರಾತಿಗಳಿಗೂ ನಮಗೂ ಸಂಬಂಧ ಇಲ್ಲ
-ನಮ್ಮ ಜಮೀನು ನಮ್ಮ ಸ್ವಾಧೀನದಲ್ಲಿದೆ
-ದುರಸ್ತು, ಖಾತೆ, ಪಹಣಿ ನೀಡಬೇಕು
-ಪ್ರಭಾವಿಗಳ ಒತ್ತುವರಿಗೂ ನಮಗೂ ಸಂಬಂದವಿಲ್ಲ
-ತ್ಯಾಗ ಮಾಡಿದ ಸಂತ್ರಸ್ತರನ್ನು ಸರ್ಕಾರ ಘನತೆಯಿಂದ ನಡೆಸಿಕೊಳ್ಳಲಿ

*ದಶಕದಿಂದ ಬಾಕಿ ಉಳಿದಿರುವ ಹೇಮಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಂದಾಯ ಸಚಿವರ ಜೊತೆಗೂ ಸಭೆ ನಡೆಸಿ ಚರ್ಚೆ ಮಾಡಲಾಗಿದೆ. ಶೀಘ್ರವೇ ತಾರ್ಕಿಕ ಅಂತ್ಯಕ್ಕೆ ತರಲು ಜಿಲ್ಲಾಡಳಿತ ಮುಂದಾಗಿದೆ. -ಕೆ.ಎಸ್.ಲತಾಕುಮಾರಿ, ಜಿಲ್ಲಾಧಿಕಾರಿ, ಹಾಸನ.

*ಸಂತ್ರಸ್ತರಿಗೆ ಜಮೀನು ಮಂಜೂರಾಗಿದ್ದು, ಉಳುಮೆ ಮಾಡುತ್ತಿದ್ದಾರೆ. ಆದರೆ ಬಲಿಷ್ಠರು, ಪ್ರಭಾವಿಗಳು ಕೆಲ ಸಂತ್ರಸ್ತರ ಜಮೀನನ್ನು ಮಾತ್ರವೇ ಪೋಡಿ ಮಾಡಲಾಗಿದೆ. ಶೇ.80ರಷ್ಟು ಸಂತ್ರಸ್ತರಿಗೆ ಇನ್ನೂ ಪೋಡಿ, ಖಾತೆ, ಪಹಣಿ ಸಿಕ್ಕಿಲ್ಲ. ಈ ಬಗ್ಗೆ ಜಿಲ್ಲಾಡಳಿ, ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ, ನ್ಯಾಯ ಮಾತ್ರ ಸಿಕ್ಕಿಲ್ಲ. 

-ಎಸ್.ಕೃಷ್ಣ, ಅಧ್ಯಕ್ಷರು, ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net