ಮರಂ ಅಕ್ರಮ ದಂಧೆಕೋರರ ಅಟ್ಟಹಾಸ

ಕನಕಗಿರಿ ಲಕ್ಷ್ಮೀದೇವಿ ಕೆರೆಯ ಹಿಂಭಾಗದಲ್ಲಿ ಮರಗಳನ್ನು ಕಿತ್ತೆಸೆದು ಮರಂ ಅಗೆದಿರುವುದು.
ಕನಕಗಿರಿ ಲಕ್ಷ್ಮೀದೇವಿ ಕೆರೆಯ ಹಿಂಭಾಗದಲ್ಲಿ ಮರಗಳನ್ನು ಕಿತ್ತೆಸೆದು ಮರಂ ಅಗೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನಲುಗಿದ ಲಕ್ಷ್ಮೀದೇವಿ ಕೆರೆ ಪ್ರದೇಶ
  • ಗಣಿಗಾರಿಕೆಗಾಗಿ ಮರಗಳ ಕಡಿತ ಅವ್ಯಾಹತ
ಕನಕಗಿರಿ: ಪಟ್ಟಣದ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಲಕ್ಷ್ಮೀದೇವಿ ಕೆರೆ ಹಿಂಭಾಗದಲ್ಲಿ ಹಲವು ದಿನಗಳಿಂದ ಮರಂ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ಲಕ್ಷ್ಮೀದೇವಿ ಕೆರೆಯಲ್ಲಿ ಸಂಗ್ರಹಿಸಲಾದ ನೀರನ್ನು ಪಟ್ಟಣದ ಜನತೆಯ ಕುಡಿವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಈ ಕೆರೆ ಹಿಂದಿರುವ ಸಣ್ಣ ಕೆರೆಯಲ್ಲಿ ದಂಧೆಕೋರರು ಎರಡ್ಮೂರು ತಿಂಗಳುಗಳಿಂದ ಮರಂ ಸಾಗಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ರಾತ್ರಿಯಾದರೆ ಜೆಸಿಬಿ, ಟಿಪ್ಪರ್‌ಗಳು ದಂಧೆ ಸ್ಥಳಕ್ಕೆ ಇಳಿಯುತ್ತಿದ್ದು, ಈಗಾಗಲೇ ಮೂರ‌್ನಾಲ್ಕು ಎಕರೆಯಷ್ಟು ಸ್ಥಳದಲ್ಲಿ ಯಾರ ಭಯವಿಲ್ಲದೇ ಎಂಟತ್ತು ಅಡಿಗಳಷ್ಟು ಅಗೆದು ಮರಂ ಸಾಗಣೆ ಮಾಡಿದ್ದಾರೆ. 
ಕೆರೆಯಲ್ಲಿ ಹತ್ತಾರು ವರ್ಷಗಳ ಹಿಂದೆ ಅರಣ್ಯ ಇಲಾಖೆಯಿಂದ ನೀಲಗಿರಿ ಗಿಡಗಳನ್ನು ಬೆಳೆದಿದ್ದು, ಅವುಗಳನ್ನು ಕಿತ್ತೆಸೆದು ಮರಂ ಅಗೆದಿರುವುದು ದಂಧೆಕೋರರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಾಯಕ್ಕೆ ಆಹ್ವಾನ

ದಂಧೆಕೋರರು ಮನಸೋಇಚ್ಛೆ ಕೆರೆಯ ದಡ, ರಸ್ತೆ ಪಕ್ಕದಲ್ಲಿಯೇ ಅಗೆದಿದ್ದು ಗುಂಡಿಗಳು ಬಿದ್ದಿವೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಕೆರೆ ಭರ್ತಿಯಾದಾಗ ನೀರು ಸಂಗ್ರಹವಾಗಿ ಅಲ್ಲಿಗೆ ತೆರಳಿದವರು ಗುಂಡಿಗೆ ಬಿದ್ದು ಪ್ರಾಣ ಹಾನಿಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. 

ಪ್ರಾಣಿ-ಪಕ್ಷಿಗಳ ಜೀವಕ್ಕೆ ಆಪತ್ತು

ಕೆರೆಯ ಸುತ್ತಲಿನ ಪ್ರದೇಶ ಕುರುಚಲು ಅರಣ್ಯೀಕರಣದಿಂದ ಕೂಡಿದ್ದು ನವಿಲು, ನರಿ, ಮೊಲ ಸೇರಿ ನಾನಾ ರೀತಿಯ ಪ್ರಾಣಿ ಪಕ್ಷಿಗಳು ನೆಲೆಯೂರಿವೆ. ರಾತ್ರಿ ವೇಳೆ ನಡೆಯುತ್ತಿರುವ ಈ ಅಕ್ರಮದ ಸದ್ದಿನಿಂದ ಪ್ರಾಣಿ ಪಕ್ಷಿಗಳ ಜೀವಕ್ಕೂ ಕುತ್ತುಬಂದಿದೆ.

"

ಸರ್ಕಾರಿ ಜಾಗದಲ್ಲಿ ನೆಟ್ಟ ಗಿಡಗಳನ್ನು ಅಕ್ರಮವಾಗಿ ತೆರವು ಮಾಡುವುದು ಅಪರಾಧ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಬಸವರಾಜ ಪೂಜಾರ ಆರ್‌ಎಫ್‌ಒ ಗಂಗಾವತಿ

ಮರಂ ಸಾಗಣೆ ಕುರಿತು ದೂರುಗಳ ಬಂದಾಗ ಸ್ಥಳಕ್ಕೆ ನಮ್ಮ ಸಿಬ್ಬಂದಿ ಹೋಗಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಯಾರೂ ಸಿಕ್ಕಿಲ್ಲ. ಯಾರು, ಯಾವ ವಾಹನ ಬಳಸಿ ಅಕ್ರಮವಾಗಿ ಮರಂ ಸಾಗಣೆ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಮಾಡಿ ದೂರು ದಾಖಲಿಸಲಾಗುವುದು.

— ಜಗನ್ನಾಥ ಎಇಇ ಸಣ್ಣ ನೀರಾವರಿ ಇಲಾಖೆ, ಗಂಗಾವತಿ

ಕೆರೆಯ ದಡದಲ್ಲಿ ಮರಂಗಾಗಿ ಅಗೆದಿರುವ ಬಗ್ಗೆ ಮಾಹಿತಿಯಿರಲಿಲ್ಲ. ಕೂಡಲೇ ಅಂಥವರನ್ನು ಪತ್ತೆ ಹಚ್ಚಿ ಕ್ರಮ ವಹಿಸಲಾಗುವುದು.

— ವಿ. ನಾರಾಯಣ, ಪಿಐ ಕನಕಗಿರಿ

ಕನಕಗಿರಿ ಜನತೆಗೆ ಕುಡಿವ ನೀರಿಗೆ ಆಧಾರವಾದ ಕೆರೆ ಹಿಂಬದಿಯಲ್ಲಿ ಹಲವು ದಿನಗಳಿಂದ ಮರಂ ಅಕ್ರಮ ಸಾಗಣೆ ಮಾಡಲಾಗಿದ್ದು, ಕೂಡಲೇ ಅಂಥವರ ವಿರುದ್ಧ ಕ್ರಮ ವಹಿಸಬೇಕು. ಇಲ್ಲವಾದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

— ಪಾಮಣ್ಣ ಅರಳಿಗನೂರು, ನಿಂಗಪ್ಪ ಎಚ್. ಹೋರಾಟಗಾರರು, ಕನಕಗಿರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net