ದತ್ತಮಾಲೆ ಸಂಸ್ಕಾರದ ಸಂಕೇತ

ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ದತ್ತ ಪೀಠಕ್ಕೆ ತೆರಳುತ್ತಿರುವ ಮಾಲಾಧಾರಿಗಳು.
ಬೇಲೂರು ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ದತ್ತ ಪೀಠಕ್ಕೆ ತೆರಳುತ್ತಿರುವ ಮಾಲಾಧಾರಿಗಳು.
Published on
ಬೇಲೂರು: ಪಟ್ಟಣ ಸೇರಿದಂತೆ ಅರೇಹಳ್ಳಿ-ಸಕಲೇಶಪುರ ಭಾಗದ 50ಕ್ಕೂ ಹೆಚ್ಚು ವಾಹನಗಳಲ್ಲಿ ದತ್ತ ಮಾಲಾಧಾರಿಗಳು ಶ್ರೀ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಗುರುವಾರ ದತ್ತ ಪೀಠಕ್ಕೆ ತೆರಳಿದರು.

ಈ ವೇಳೆ ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ದತ್ತಮಾಲೆ ಕೇವಲ ಒಂದು ಧಾರ್ಮಿಕ ವ್ರತವಲ್ಲ. ಇದು ಶಿಸ್ತು, ತ್ಯಾಗ ಮತ್ತು ಸಂಸ್ಕಾರದ ಸಂಕೇತವಾಗಿದೆ. ಯುವಕರು ಇಂತಹ ವ್ರತಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿ ಶಾಂತಿ, ಸಹಕಾರ ಮತ್ತು ಮಾನವೀಯ ಮೌಲ್ಯಗಳು ಹೆಚ್ಚಾಗುತ್ತವೆ. ನಮ್ಮ ಸಂಪ್ರದಾಯ, ನಂಬಿಕೆ ಮತ್ತು ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸೇತುವೆಯೇ ದತ್ತಯಾತ್ರೆಯಾಗಿದೆ. ಭಕ್ತರ ಸುರಕ್ಷತೆ ಹಾಗೂ ಸೌಲಭ್ಯಗಳಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ ದತ್ತಪೀಠ ಹಿಂದುಗಳ ಧರ್ಮಪೀಠ ಎಂದು ಘೋಷಿಸಿದ್ದು, ಶೀಘ್ರದಲ್ಲೆ ಸಂಪೂರ್ಣವಾಗಿ ಇದು ಹಿಂದುಗಳ ಎರಡನೇ ಅಯೋಧ್ಯೆಯಾಗಲಿದೆ. ನಾವು ಸಹ ಕಳೆದ 10 ವರ್ಷಗಳಿಂದ ದತ್ತಪೀಠದ ಸೇವಕನಾಗಿ ದರ್ಶನ ಮಾಡಿಕೊಂಡು ಬರುತ್ತಿದ್ದೇನೆ ಎಂದರು.

ವಿಶ್ವ ಹಿಂದು ಪರಿಷತ್ ಸಂಚಾಲಕ ನಾಗೇಶ್ ಮಾತನಾಡಿ, ದತ್ತ ಪೀಠದ ಭಗವಾನ್ ದತ್ತಾತ್ರೇಯ ಹಿಂದುಗಳ ಆರಾಧ್ಯ ದೈವ. ಈಗಾಗಲೇ ಸರ್ಕಾರ ಹಾಗೂ ನ್ಯಾಯಾಲಯ ಹಿಂದುಗಳ ಧರ್ಮಪೀಠ ಎಂದು ಘೋಷಣೆ ಮಾಡಿದ್ದು, ಇನ್ನು ಕೆಲವು ದಿನಗಳಲ್ಲಿ ಹಿಂದುಗಳ ಪವಿತ್ರ ಪೀಠ ಆಗಲಿದೆ. ನಾವು ಭಗವಂತನನ್ನು ಬೇಡಿಕೊಂಡು ಯಾವುದೇ ರೀತಿಯ ಗಲಭೆ ಇಲ್ಲದೆ ಆ ಪೀಠ ನಮ್ಮದಾಗಲಿ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಸಂಜಯ್ ಕೌರಿ, ಮಹಿಳಾಧ್ಯಕ್ಷೆ ಶೋಭಾ ಗಣೇಶ್, ಭರತ್, ಮೋಹನ್ ಇತರರು ಇದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ರೇವಣ್ಣ, ಪಿಎಸ್‌ಐ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net