ಸಂಪಾದಕೀಯ: ಸುಪ್ರೀಂ ಅಭಿಮತ ಸಕಾಲಿಕ

The Supreme Court's opinion is timely.
The Supreme Court's opinion is timely.
Published on
ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸುವುದು ಈಗ ದೇಶದ ರಾಜಕಾರಣದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ, ಇಂತಹ ಯೋಜನೆಗಳು ದೇಶದ ಆರ್ಥಿಕತೆಯ ಬೆನ್ನೆಲುಬನ್ನೇ ಮುರಿಯುತ್ತಿವೆ ಎಂಬ ಸುಪ್ರೀಂ ಕೋರ್ಟ್​ನ ಎಚ್ಚರಿಕೆ ಅತ್ಯಂತ ಗಂಭೀರವಾದುದು ಮತ್ತು ಸಮಯೋಚಿತವಾದುದು. 
ತಮಿಳುನಾಡು ವಿದ್ಯುತ್ ನಿಗಮದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ ವ್ಯಕ್ತಪಡಿಸಿರುವ ಅಭಿಪ್ರಾಯಗಳು, ದೇಶದ ಒಟ್ಟಾರೆ ಅಭಿವೃದ್ಧಿಯ ಹಿತದೃಷ್ಟಿಯಿಂದ ಮರುಚಿಂತನೆಗೆ ಹಚ್ಚುವಂತಿವೆ. ಸರ್ಕಾರಗಳು ನೀಡುವ ಈ ಉಚಿತ ಕೊಡುಗೆಗಳಿಗೆ ಹಣ ಎಲ್ಲಿಂದ ಬರುತ್ತದೆ? ಇದು ಸಾಮಾನ್ಯ ತೆರಿಗೆದಾರರ ಹಣವಲ್ಲವೇ? ಎಂಬ ನ್ಯಾಯಾಲಯದ ಪ್ರಶ್ನೆ ನೇರ ಮತ್ತು ತೀಕ್ಷ್ಣವಾಗಿದೆ.
ಬಡವರಿಗೆ, ಅಸಹಾಯಕರಿಗೆ ಮತ್ತು ಶಿಕ್ಷಣ ವಂಚಿತರಿಗೆ ನೆರವು ನೀಡುವುದು ಕಲ್ಯಾಣ ರಾಜ್ಯದ ಕರ್ತವ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪಾವತಿಸುವ ಸಾಮರ್ಥ್ಯ ಉಳ್ಳವರಿಗೂ ಉಚಿತ ಸೌಲಭ್ಯಗಳನ್ನು ನೀಡುವುದು ಸರಿಯಾದ ಆರ್ಥಿಕ ವಿವೇಚನೆಯಲ್ಲ. ಇದು ಕೇವಲ ಮತಬ್ಯಾಂಕ್ ರಾಜಕಾರಣಕ್ಕಾಗಿ ಮಾಡುವ ಓಲೈಕೆಯ ನೀತಿಯೇ ಹೊರತು ಜನಕಲ್ಯಾಣವಲ್ಲ ಎಂಬುದು ನ್ಯಾಯಾಲಯದ ಸ್ಪಷ್ಟ ನಿಲುವು.
ಈ ರೀತಿಯ ಉಚಿತ ಯೋಜನೆಗಳಿಂದ ರಾಜ್ಯಗಳ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿ ವಿತ್ತೀಯ ಕೊರತೆ ಉಂಟಾಗುತ್ತದೆ. ರಸ್ತೆ, ಆಸ್ಪತ್ರೆ ಮತ್ತು ಮೂಲಸೌಕರ್ಯಗಳಿಗೆ ಬಳಸಬೇಕಾದ ಹಣ ಉಚಿತ ಯೋಜನೆಗಳಿಗೆ ವ್ಯಯವಾಗುವುದರಿಂದ ದೀರ್ಘಾವಧಿಯಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಅಲ್ಲದೆ, ಉಚಿತವಾಗಿ ಎಲ್ಲವೂ ಸಿಗುತ್ತದೆ ಎಂಬ ಭಾವನೆ ಜನರಲ್ಲಿ ಬೆಳೆದು, ಕೆಲಸ ಮಾಡುವ ಉತ್ಸಾಹವನ್ನು ಕುಂದಿಸಬಹುದು. 
ಈ ಯೋಜನೆಗಳಿಗಾಗಿ ಸರ್ಕಾರಗಳು ಮಾಡುವ ಸಾಲ ಮುಂದಿನ ಪೀಳಿಗೆಯ ಮೇಲೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ. ಸುಪ್ರೀಂ ಕೋರ್ಟ್ ಹೇಳಿರುವಂತೆ, ಸರ್ಕಾರಗಳ ಆದ್ಯತೆ ಉದ್ಯೋಗ ಸೃಷ್ಟಿಯ ಮೇಲಿರಬೇಕು. ಜನರಿಗೆ ಉಚಿತವಾಗಿ ವಸ್ತುಗಳನ್ನು ಹಂಚುವ ಬದಲು, ಅವರು ಸ್ವಾವಲಂಬಿಗಳಾಗಿ ಬದುಕುವಂತಹ ವಾತಾವರಣ ನಿರ್ವಿುಸುವುದು ಸರ್ಕಾರಗಳ ಜವಾಬ್ದಾರಿ. ಉತ್ತಮ ರಸ್ತೆಗಳು, ಗುಣಮಟ್ಟದ ಆಸ್ಪತ್ರೆಗಳು ಮತ್ತು ಕೌಶಲಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದರೆ ದೀರ್ಘಾವಧಿಯ ಅಭಿವೃದ್ಧಿ ಸಾಧ್ಯ. ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ತಮ್ಮ ಬಜೆಟ್​ನಲ್ಲಿ ಉಚಿತಗಳಿಗಿಂತ ಹೆಚ್ಚಾಗಿ ಬಂಡವಾಳ ಹೂಡಿಕೆಗೆ ಮಹತ್ವ ನೀಡಬೇಕಿದೆ. 
ಈ ‘ಉಚಿತ ಕೊಡುಗೆ ಸಂಸ್ಕೃತಿ’ಯ ಬಗ್ಗೆ ಮರುಚಿಂತನೆ ನಡೆಸಲು ಇದು ಸಕಾಲ. ಆರ್ಥಿಕ ಶಿಸ್ತು ಇಲ್ಲದಿದ್ದರೆ ದೇಶ ಅಪಾಯಕ್ಕೆ ಸಿಲುಕಬಹುದು. ಸುಸ್ಥಿರ ಅಭಿವೃದ್ಧಿ ಎಂದರೆ ಇಂದಿನ ಅಗತ್ಯಗಳನ್ನು ಮಾತ್ರ ಪೂರೈಸುವುದಲ್ಲ, ನಾಳಿನ ಪೀಳಿಗೆಗೆ ಭದ್ರವಾದ ಆರ್ಥಿಕ ಬುನಾದಿ ಹಾಕುವುದು; ಉದ್ಯೋಗಾವಕಾಶ ಮತ್ತು ಉತ್ಪಾದನೆಯತ್ತ ಗಮನ ಹರಿಸುವುದು. ಸರ್ಕಾರಗಳು ಸಾರ್ವಜನಿಕ ಹಣವನ್ನು ಜವಾಬ್ದಾರಿಯುತವಾಗಿ ಬಳಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net