ಮುಧೋಳದಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಶಿವಸೇನೆಯ ರಾಜ್ಯ ವಕ್ತಾರ ಎಸ್. ಭಾಸ್ಕರನ್ ಮಾತನಾಡಿದರು. ಪಕ್ಷದ ಪದಾಧಿಕಾರಿಗಳಾದ ಅಮರ ವೈ.ಡಿ., ಅಶೋಕ ಚಲವಾದಿ, ರಾಕೇಶ ಚಲವಾದಿ, ಪ್ರಹ್ಲಾದ ನೂಲಿ, ಕಲ್ಮೇಶ ರೂಗಿ, ಪ್ರಕಾಶ ಅಣ್ಣಿಗೇರಿ, ಪ್ರಭು ಹುಂಡೇಕಾರ, ಪರಶು ಶಿಂಧೆ ಇದ್ದರು.
ಮುಧೋಳ: ಕರ್ನಾಟಕ ಶಿವಸೇನೆಯ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದ್ದು, ಮುಂಬರುವ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ಮತ್ತು ಬಿಬಿಎ ಚುನಾವಣೆಗಳಲ್ಲಿ ಪಕ್ಷದ ವತಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ರಾಜ್ಯ ವಕ್ತಾರ ಎಸ್. ಭಾಸ್ಕರನ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ಅನೇಕ ಪ್ರದೇಶಗಳಲ್ಲಿ ಜನರು ಕುಡಿಯುವ ನೀರು ಹಾಗೂ ಜಾನುವಾರುವಿಗೆ ಮೇವಿನ ಕೊರತೆ ಎದುರಿಸುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ ಎಂದು ಆರೋಪಿಸಿದ ಅವರು, ಬರ ಪರಿಸ್ಥಿತಿ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಶಿವಸೇನೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಭಾಸ್ಕರನ್, ಗೃಹ ಸಚಿವರು ವಾಸ್ತವ ಸಮಸ್ಯೆಗಳತ್ತ ಗಮನ ಹರಿಸುವ ಬದಲು ಆರೆಸ್ಸೆಸ್ ಅನ್ನು ಗುರಿಯಾಗಿಸಿಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗಣೇಶೋತ್ಸವ ಸೇರಿ ಹಿಂದೂ ಹಬ್ಬಗಳ ಸಾರ್ವಜನಿಕ ಆಚರಣೆಗೆ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಇತರ ಧಾರ್ಮಿಕ ಹಬ್ಬಗಳಿಗೆ ಇದೇ ರೀತಿಯ ನಿಯಮಗಳನ್ನು ಏಕೆ ಅನ್ವಯಿಸಲಾಗುತ್ತಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಗಾವಿ ಮಾತನಾಡಿ, ಪಕ್ಷದ ಸಿದ್ಧಾಂತ ಮತ್ತು ಜನಪರ ಕಾಳಜಿಯನ್ನು ಆಧರಿಸಿ ಸಂಘಟನೆಯನ್ನು ವ್ಯವಸ್ಥಿತವಾಗಿ ಬಲಪಡಿಸಲಾಗುತ್ತಿದೆ. ಯುವಕರು, ರೈತರು ಹಾಗೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಕ್ಷ ಸೇರುತ್ತಿರುವುದು ಸಂಘಟನೆ ವಿಸ್ತರಣೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದರ ಸೂಚನೆಯಾಗಿದೆ ಎಂದರು.
ಪಕ್ಷದ ಪದಾಧಿಕಾರಿಗಳಾದ ಅಮರ ವೈ.ಡಿ., ಅಶೋಕ ಚಲವಾದಿ, ರಾಕೇಶ ಚಲವಾದಿ, ಪ್ರಲ್ಲಾದ ನೂಲಿ, ಕಲ್ಮೇಶ ರೂಗಿ, ಪ್ರಕಾಶ ಅಣ್ಣಿಗೇರಿ, ಪ್ರಭು ಹುಂಡೇಕಾರ ಹಾಗೂ ಪರಶು ಶಿಂಧೆ ಉಪಸ್ಥಿತರಿದ್ದರು.