ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತರ ರಕ್ಷಣೆಗೆ ಮಾರ್ಗಸೂಚಿ ರಚಿಸಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ ಹೈಕೋರ್ಟ್​

ಹೈಕೋರ್ಟ್​
ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • 13 ವರ್ಷ ವಯಸ್ಸಿನ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ
  • ಡಿಜಿಟಲ್ ಪೋರ್ಟಲ್ ಸ್ಥಾಪನೆಗೆ ನಿರ್ದೇಶನ
  • ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವ ಸೇವಾ ಕೇಂದ್ರ ಸ್ಥಾಪನೆ
ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗಾಗಿ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ರೂಪಿಸಿ ಎಂದು ರಾಜ್ಯ ಸರ್ಕಾರಕ್ಕೆಹೈಕೋರ್ಟ್ ನಿರ್ದೇಶನ ನೀಡಿದೆ. ಸರ್ಕಾರ ಕಾರ್ಯವಿಧಾನವನ್ನು ರೂಪಿಸುವಾಗ ಅನುಸರಿಸಬಹುದಾದ ಮಾರ್ಗಸೂಚಿಗಳನ್ನು ಕೂಡ ನ್ಯಾಯಾಲಯ ಆದೇಶದಲ್ಲಿ ನೀಡಿದೆ.

13 ವರ್ಷ ವಯಸ್ಸಿನ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ:

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 13 ವರ್ಷದ ಬಾಲಕಿಯೊಬ್ಬಳು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ. ಅಸ್ತಿತ್ವದಲ್ಲಿರುವ ನಿಯಮಗಳು ಅಥವಾ ಯೋಜನೆಗಳ ನಡುವೆ ಸಂಘರ್ಷ ಏರ್ಪಟ್ಟಾಗ, ಯಾವುದು ಅಪ್ರಾಪ್ತರಿಗೆ ಹೆಚ್ಚಿನ ರಕ್ಷಣೆ ಮತ್ತು ಪ್ರಯೋಜನ ಒದಗಿಸುತ್ತದೆಯೋ ಅದನ್ನು ಅನುಸರಿಸಬೇಕು ಎಂದು 2012ರ ಮಕ್ಕಳ ರಕ್ಷಣೆ ಕಾಯ್ದೆ ಹೇಳುತ್ತದೆ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ ಗರ್ಭಪಾತಕ್ಕೆ ಅನುಮತಿ ನೀಡಿದೆ.
ದೌರ್ಜನ್ಯ ಪ್ರಕರಣಗಳ ನಿರ್ವಹಣೆಗೆ ಪ್ರಮಾಣಿತ ಕಾರ್ಯವಿಧಾನ ರೂಪಿಸಲು ಹಲವು ಭಾರಿ ನಿರ್ದೇಶನ ನೀಡಲಾಗಿದ್ದರೂ ನಿರ್ಲಕ್ಷ್ಯ ಮುಂದುವರಿದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಮಹಾನಿರ್ದೇಶಕರು ಸಮನ್ವಯದಿಂದ ಏಕೀಕೃತ ಕಾರ್ಯವಿಧಾನ ರೂಪಿಸಿದರೆ ಈ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಡಿಜಿಟಲ್ ಪೋರ್ಟಲ್ ಸ್ಥಾಪನೆಗೆ ನಿರ್ದೇಶನ:

ತನಿಖಾ ಏಜೆನ್ಸಿಗಳ ನಡುವಿನ ಸಂವಹನ, ಸುರಕ್ಷಿತ ದಾಖಲೆ ಹಂಚಿಕೆ ಮತ್ತು ಮೇಲ್ವಿಚಾರಣೆಗೆ ಅನುವಾಗುವಂತಹ ಡಿಜಿಟಲ್ ಪೋರ್ಟಲ್ ರಚಿಸುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ಸಂತ್ರಸ್ತರನ್ನು ಬಾಲ ನ್ಯಾಯ ಕಾಯ್ದೆಯ ಪ್ರಕಾರ ಅರೈಕೆ ಮತ್ತು ರಕ್ಷಣೆ ಅಗತ್ಯ ಇರುವ ಮಗು ಎಂದು ಪರಿಗಣಿಸಲಾಗುತ್ತದೆ. ಅಪರಾಧ ವರದಿಯಾದ ಕ್ಷಣದಿಂದಲೇ ಮಕ್ಕಳಿಗೆ ಮಕ್ಕಳ ಕಲ್ಯಾಣ ಸಮಿತಿಯ ರಕ್ಷಣೆ ನೀಡಬೇಕು ಎಂದು ಸೂಚಿಸಿದೆ.

24*7 ಸೇವಾ ಕೇಂದ್ರ ಸ್ಥಾಪಿಸಿ:

ಸಂತ್ರಸ್ತರಿಗೆ ತಕ್ಷಣದ ಸಮಗ್ರ ವೈದ್ಯಕೀಯ ಚಿಕಿತ್ಸೆ ಮತ್ತು ಮಾನಸಿಕ ಆರೈಕೆ ಒದಗಿಸಲು ತಜ್ಞ ಮಹಿಳಾ ವೈದ್ಯಾಧಿಕಾರಿಗಳು, ನರ್ಸ್ ಮತ್ತು ಅಪ್ತ ಸಮಾಲೋಚಕರನ್ನು ಒಳಗೊಂಡ. ದಿನದ 24 ಗಂಟೆಯೂ ಸೇವೆಗೆ ಲಭ್ಯವಿರುವ ಕೇಂದ್ರಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ಥಾಪಿಸಬೇಕು.

ಅಪರಾಧ ವರದಿಯಾದ ಏಳು ದಿನಗಳ ಒಳಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನಿಯೋಜಿಸಲಾದ ಮನಃಶಾಸ್ತ್ರಜ್ಞರು ಮಕ್ಕಳ ಸಮಗ್ರ ಮೌಲ್ಯಮಾಪನ ನಡೆಸಬೇಕು. ನಂತರ ಮಗುವಿನ ವಯಸ್ಸು, ಬೆಳವಣಿಗೆ ಮತ್ತು ಮಾನಸಿಕ ಅಗತ್ಯಗಳಿಗೆ ಅನುಗುಣವಾದ ಕಾರ್ಯಯೋಜನೆ ರೂಪಿಸಬೇಕು. ಇದನ್ನು ಮಗುವಿನ ಆರೈಕೆ ಯೋಜನೆಗೆ ಜೋಡಿಸಿ, ಸಂತ್ರಸ್ತರು ಮಾನಸಿಕ ಸ್ಥಿರತೆ ಸಾಧಿಸಿದ್ದಾರೆ ಎಂದು ಮಾನಸಿಕ ತಜ್ಞರು ಪ್ರಮಾಣ ಪತ್ರ ಸಲ್ಲಿಸುವ ತನಕ ಸೇವೆ ಮುಂದುವರಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಸಂತ್ರಸ್ತರಿಗೆ ಗುಪ್ತನಾಮ:

ಸಂತ್ರಸ್ತರ ಗುರುತನ್ನು ಗೌಪ್ಯವಾಗಿಡುವ ಉದ್ದೇಶದಿಂದ ಅವರಿಗೆ ಕೋಡ್ ನೀಡಬೇಕು. ಅವರ ಆನಾಮಧೇಯತೆ ಖಚಿತಪಡಿಸಲು ಪ್ರಕರಣದ ದಾಖಲೆ, ವಿಚಾರಣೆ, ಆದೇಶಗಳಲ್ಲಿ ಈ ಗುಪ್ತನಾಮ ಬಳಸಬೇಕು. ಪೋಕ್ಸ್ ಕಾಯ್ದೆ ಅನುಸಾರ ಸಂತ್ರಸ್ತ ಮಕ್ಕಳ ಸಹಾಯಕ್ಕಾಗಿ ನೇಮಕಗೊಂಡ ವ್ಯಕ್ತಿ ಮಕ್ಕಳಿಗೆ ಮಾಹಿತಿ, ಭಾವನಾತ್ಮಕ ಮತ್ತು ಇತರ ಸಹಾಯ ಒದಗಿಸಬೇಕು. ಇವುಗಳನ್ನು ಎಸ್‌ಒಪಿಯಲ್ಲಿ ಖಚಿತಪಡಿಸಿಕೊಳ್ಳಬೇಕು.

ನಿರ್ದೇಶನದ ಮುಖ್ಯಾಂಶಗಳು

  • ದೌರ್ಜನ್ಯವು ಶಾಲಾ ಪರಿಸರದಲ್ಲೇ ಸಂಭವಿಸಿದ್ದರೆ ಅಥವಾ ಮಗುವಿನ ಸುರಕ್ಷತೆಗಾಗಿ ಅಗತ್ಯವಾದರೆ ವರ್ಗಾವಣೆಯನ್ನು ಗೌಪ್ಯವಾಗಿಟ್ಟು ಬೇರೆ ಶಾಲೆಗೆ ಸೇರಿಸಬೇಕು.
  • ಸಂತ್ರಸ್ತರು ವಯಸ್ಕರಾದ ಅಥವಾ ಸಂಪೂರ್ಣ ಪುನರ್ವಸತಿಗೆ ಒಳಪಟ್ಟ ನಂತರ ಮಾತ್ರ ಕಡತ ಮುಚ್ಚಬಹುದು.
  • ಸಂತ್ರಸ್ತರ ಚಿಕಿತ್ಸೆ ಅವಧಿಯ ದಾಖಲೆಗಳನ್ನು ಗೌಪ್ಯವಾಗಿಡುವುದು.
  • ಅಪ್ರಾಪ್ತ ಸಂತ್ರಸ್ತೆ ಗರ್ಭಧಾರಣೆ ಮುಂದುವರಿಸಲು ಬಯಸಿದರೆ ತಾಯಿ ಮತ್ತು ಶಿಶುವಿನ ಆರೈಕೆಗಾಗಿ ಕ್ರಮ ಕೈಗೊಳ್ಳಬೇಕು.
  • ಹೆರಿಗೆ ನಂತರದ ಆರೈಕೆಯನ್ನು ಕನಿಷ್ಠ ಎರಡು ವರ್ಷಗಳಿಗೆ ಮುಂದುವರಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net