ಕುರಕುಂಟಾದಲ್ಲಿ ಸಂಗಮೇಶ್ವರ ರಥೋತ್ಸವ ವೈಭವ

ಸೇಡಂ ತಾಲೂಕಿನ ಕುರಕುಂಟಾ ಗ್ರಾಮದಲ್ಲಿ ಸಹಸ್ರಾರು ಭಕ್ತರ ಜೈೂಘೋಷಗಳ ಮಧ್ಯೆ ಶ್ರೀ ಸಂಗಮೇಶ್ವರ ರಥೋತ್ಸವ ಜರುಗಿತು.
ಸೇಡಂ ತಾಲೂಕಿನ ಕುರಕುಂಟಾ ಗ್ರಾಮದಲ್ಲಿ ಸಹಸ್ರಾರು ಭಕ್ತರ ಜೈೂಘೋಷಗಳ ಮಧ್ಯೆ ಶ್ರೀ ಸಂಗಮೇಶ್ವರ ರಥೋತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ರಥದತ್ತ ಬಾಳೆಹಣ್ಣು, ಉತ್ತತ್ತಿ ಎಸೆದು ಕೃತಾರ್ಥರಾದ ಭಕ್ತರು
ಸೇಡಂ : ಕುರಕುಂಟಾ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತರ ಜೈೂಘೋಷಗಳ ಮಧ್ಯೆ ಮಂಗಳವಾರ ವೈಭವದಿಂದ ಜರುಗಿತು.
ಸಂಗಮೇಶ್ವರ ಜಾತ್ರೋತ್ಸವ ನಿಮಿತ್ತ ಏ.3ರಿಂದ ಸತತ ಐದು ದಿನ ಭಜನೆಯೊಂದಿಗೆ ಗ್ರಾಮದಾದ್ಯಂತ ಪಲ್ಲಕ್ಕಿ ಉತ್ಸವ ನಡೆಯಿತು. ಮಂಗಳವಾರ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಪುರವಂತರ ಸೇವೆಯೊಂದಿಗೆ ಅಗ್ನಿಪ್ರವೇಶ ಮಾಡಲಾಯಿತು. ಪುರವಂತರು, ಪಲ್ಲಕ್ಕಿ ನಂತರ ನೂರಾರು ಭಕ್ತರು ಅಗ್ನಿ ಕೆಂಡ ಹಾಯ್ದು ಭಕ್ತಿ ಮೆರೆದರು. ಸಂಜೆ ಮಂಗಲ ವಾದ್ಯಗಳೊಂದಿಗೆ ವಿವಿಧ ಪರಿವಾರದವರು ಸಂಪ್ರದಾಯದಂತೆ ರಥೋತ್ಸವದ ಚಾಲನಾಪೂರ್ವ ಪೂಜಾ ಪದ್ಧತಿ ನೆರವೇರಿಸಿ ಭಕ್ತಿ ಸೇವೆ ಸಲ್ಲಿಸಿದರು.
ಸಂಜೆ 6.15ಕ್ಕೆ ಅರ್ಚಕರು ರಥವನ್ನೇರಿ ಉತ್ಸವ ಮೂರ್ತಿಯನ್ನು ರಥದೊಳಗೆ ಇರಿಸುತ್ತಲೇ ಸಹಸ್ರಾರು ಭಕ್ತರು ಶ್ರೀ ಸಂಗಮೇಶ್ವರ ಮಹಾರಾಜ್​ ಕೀ ಜೈ ಎಂದು ಜೈಕಾರ ಹಾಕಿದರು. ರಥವನ್ನು ಹೂವು, ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗಿತ್ತು. ತಹಸೀಲ್ದಾರ್​ ಶ್ರೀಯಾಂಕ ಧನಶ್ರೀ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಭೋವಿ ವಡ್ಡರ ಸಮಾಜದವರು ತೇರನೆಳೆದರು. ರಥ ಮುಂದೆ ಸಾಗುತ್ತಿದ್ದಂತೆ ಬಾನೆತ್ತರಕ್ಕೆ ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು. ಈ ವೇಳೆ ರಥದತ್ತ ಭಕ್ತರು, ಬಾಳೆಹಣ್ಣು, ಉತ್ತತ್ತಿ ತೂರಿ ಕೃತಾರ್ಥರಾದರು. ರಥವು ಪಾದಗಟ್ಟೆ ತಲುಪಿ ನಂತರ ಸುಸೂತ್ರವಾಗಿ ಮರಳಿ ಮೂಲ ನೆಲೆಗೆ ಬಂದು ನಿಂತಿತು. ಭಕ್ತರಿಗಾಗಿ ಶ್ರೀ ಸಂಗಮೇಶ್ವರ ಯುವಕ ಮಂಡಳಿಯಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net