_1780682564749.webp?w=480&auto=format%2Ccompress&fit=max)
_1780682564749.webp?w=480&auto=format%2Ccompress&fit=max)
ಇಂಗ್ಲಿಷ್ನಲ್ಲಿ Blade ಪದದ ಚರಿತ್ರೆ ಕುತೂಹಲಕಾರಿಯೇ ಆಗಿದೆ. ಜರ್ಮನ್, ಡಚ್, ಡ್ಯಾನಿಷ್ ಮುಂತಾದ ಐರೋಪ್ಯ ಭಾಷೆಗಳಿಂದ ಬಂದಿದ್ದೆಂದು ಅಂದಾಜಿಸಲಾಗಿರುವ ಈ ಪದಕ್ಕೆ ಶತಮಾನಗಳ ಹಿಂದೆ ಎಲೆ ಎಂಬ ಅರ್ಥವಿದ್ದದ್ದಂತೆ. ಆಮೇಲೆ ಹಾರೆ, ಹರಿಗೋಲು ಇತ್ಯಾದಿ ಪರಿಕರಗಳ ತೆಳ್ಳನೆಯ ಹಲಗೆಯಂಥ ಭಾಗ ಎಲೆಯಂತೆ ಕಾಣುವುದರಿಂದ ಅದನ್ನೂ ಬ್ಲೇಡ್ ಎನ್ನಲಾಯಿತು. ಸುಮಾರು 14ನೆಯ ಶತಮಾನದಿಂದ ಈಚೆಗೆ ಚೂರಿ, ಕತ್ತಿ, ಖಡ್ಗ ಮುಂತಾದವುಗಳ ಹರಿತ ಅಲಗನ್ನೂ ಬ್ಲೇಡ್ ಎಂದು ಕರೆಯುವುದು ರೂಢಿಯಾಯಿತು. ಈಗ ನಮಗೆ ಬ್ಲೇಡ್ ಎಂದೊಡನೆ ಮುಖಕ್ಷೌರಕ್ಕೆ ಅತ್ಯಗತ್ಯವಾದ ಸಾಧನವೇ ನೆನಪಾಗುವುದಾದರೂ ಅದರ ವ್ಯಾಖ್ಯೆ ಅಷ್ಟಕ್ಕೇ ಸೀಮಿತವಲ್ಲವೆಂದು ಗೊತ್ತಿರಬೇಕು. ಒಟ್ಟಿನಲ್ಲಿ ‘ಅಲಗು’ ಎನ್ನುವುದು ಬ್ಲೇಡ್ಗೆ ಅತಿಸೂಕ್ತ ಪರ್ಯಾಯ ಪದವಂತೂ ಹೌದು. ಸುಮಾರು ನೂರಕ್ಕೂ ಹೆಚ್ಚು ಪ್ರವೇಶಿಕೆಗಳೂ ಅದನ್ನೇ ಸಮರ್ಥಿಸಿವೆ: ಸಿ.ಪ್ರಭಾಕರ ರಾವ್, ಸುಬ್ಬಣ್ಣ ಎನ್.ಕೆ, ಪ್ರೇಮಾ ಮೊಣ್ಣಪ್ಪ, ಎನ್.ಟಿ ಹೆಗಡೆ, ಗಿರೀಶ ಫಡ್ಕೆ, ಮಾ.ಸು ಮಂಜುನಾಥ್, ಶೋಭಾ ಕುಮಾರಸ್ವಾಮಿ, ಜ್ಞಾನೇಶಕುಮಾರ್ ಎಂ.ಎಚ್, ವಿಶ್ವಜ್ಯೋತಿ, ನಾರಾಯಣ ಬೈಪಡಿತ್ತಾಯ, ಕಮಲಾಕರ ಆರ್.ಎಸ್, ಭವಾನಿ ಜೋಶಿ, ಕುಸುಮ ಡಿ.ಎನ್, ಸುಜಾತಾ ಕುರ್ಪಾಡ್, ವಿರೂಪಾಕ್ಷಪ್ಪ ಶಾಂತಗೇರಿ, ಮಾಧವಿ ಹೆಬ್ಬಾರ್, ಉಮೇಶ ಪ್ರಭು, ರೇಖಾ ರಾಮಕೃಷ್ಣ, ಸೋನಲ್ ಪೈ, ವಿಜಯಕಲ ವಿಟ್ಲ, ರಶ್ಮಿ ರಾಜೇಂದ್ರ, ಪ್ರತಿಭಾ ಮಯ್ಯ, ಸುಜನಾ ನಿಟ್ಟೂರು, ಬಾಳಾಜಿ ಮುಜುಮದಾರ ಮತ್ತಿತರರು.
ಕ್ಷೌರ ಮಾಡು ಎಂಬರ್ಥದ ‘ಹೆರೆ’ ಕ್ರಿಯಾಪದವನ್ನು ಆಧರಿಸಿ ಕಟ್ಟಿದ ಕೆಲವು ಪದಗಳೂ ಬಂದಿದ್ದು ಗಮನಾರ್ಹವಾಗಿವೆ. ‘ಹೆರೆಯಲಗು’ (ಷಡಕ್ಷರಿಮುನಿ ಸ್ವಾಮೀಜಿ), ‘ಹೆರೆಚಿಪ್ಪು’ (ರೂಪಾ ಶಂಕರಮೂರ್ತಿ), ‘ಹೆರೆಗತ್ತಿ’ (ಅರ್ಚನಾ ಅಶೋಕ್, ರವಿಕುಮಾರ್ ಎಸ್.ಎಂ, ಚಿತ್ರಾ.ಕೆ ಮೈಸೂರು), ‘ಹೆರೆತಗಡು’ (ಪಾರ್ವತಿ ಕುರ್ಕಿ), ‘ಹೆರೆಬಿಲ್ಲೆ’ (ಮನೋನ್ಮಣಿ ಕೆ.ವಿ) ಮತ್ತು ‘ಹೆರೆಕ’ (ಲೋಕೇಶಪ್ಪ ಹಿತ್ಲಮನೆ). ಬ್ಲೇಡ್ಗೆ ಪರ್ಯಾಯವಾಗಿ ಸಂಸ್ಕೃತದ ‘ಕ್ಷುರ’ವನ್ನೂ ಕೆಲವರು ಸೂಚಿಸಿದ್ದಾರೆ: ಪ್ರಭುಪ್ರಸಾದ್ ನಡುತೋಟ, ಎನ್.ಆರ್. ರಮೇಶ್, ನಿತ್ಯಾನಂದ ಬ್ರಹ್ಮಾವರ ಮತ್ತು ಕುಶಲ್ ಭಾರದ್ವಾಜ್. ಸಂಸ್ಕೃತದಲ್ಲಿ ಬ್ಲೇಡ್ಅನ್ನು ಕ್ಷುರಪತ್ರ ಎನ್ನಬಹುದು. ಇದರಲ್ಲಿ ಅಲಗು ಮತ್ತು ಎಲೆ ಎಂಬ ಎರಡೂ ಅರ್ಥಗಳು ತುಂಬಿರುವುದು ವಿಶೇಷ. ಕ್ಷುರದಿಂದಲೇ ಚೂರಿ ಎಂಬರ್ಥದ ಕ್ಷುರೀ ಮತ್ತು ಕ್ಷುರಿಕಾ ಪದಗಳಿರುವುದು, ಕ್ಷೌರದ ಮೂಲವೂ ಅದೇ ಆಗಿರುವುದೂ ಹೌದು. ಓದುಗರು ನೆನಪಿಸಿಕೊಂಡಿರುವ ಸಂಸ್ಕೃತದ ಇನ್ನೊಂದು ಪದ ‘ಅಸಿಧಾರಾ’ (ಯಶೋದಾ ಎಂ ಗೋಪಿ). ಇದಕ್ಕೂ ಕತ್ತಿಯ ಅಲಗು ಎಂದೇ ಅರ್ಥ. ಅಸಿಧಾರಾಮಧುಲೇಹನ ನ್ಯಾಯ ಅಂತೊಂದು ಲೋಕೋಕ್ತಿಯೂ ಪ್ರಸಿದ್ಧ. ಕತ್ತಿಯ ಅಲಗಿಗೆ ಸವರಿರುವ ಜೇನುತುಪ್ಪವನ್ನು ನಾಲಗೆಯಿಂದ ನೆಕ್ಕಬೇಕು. ಒಂದೆಡೆ ಜೇನುತುಪ್ಪದ ಪ್ರಲೋಭನೆಯಾದರೆ ಇನ್ನೊಂದೆಡೆ ಕತ್ತಿಯ ಹರಿತ ಅಲಗಿನಿಂದ ನಾಲಗೆಯೇ ಹರಿದು ತುಂಡಾಗುವ ಸಾಧ್ಯತೆ! ಹೀಗೆ, ಯಾವ ಕಾರ್ಯದಲ್ಲಿ ಪ್ರಯೋಜನವು ಅತ್ಯಲ್ಪವೋ, ಘೊರವಾದ ಅಪಾಯ ಮಾತ್ರ ಕಟ್ಟಿಟ್ಟದ್ದೋ ಅಂಥದನ್ನು ವರ್ಣಿಸುವಾಗ ಈ ನ್ಯಾಯ ಉಪಯೋಗಕ್ಕೆ ಬರುತ್ತದೆ. ಅಸಿಧಾರಾವ್ರತ ಎಂಬ ಇನ್ನೊಂದು ಲೋಕೋಕ್ತಿಯೂ ಇದೆ. ಆಶಾಪಾಶಗಳಿಗೆ ವಶನಾಗದೆ ಸನ್ಮಾರ್ಗದಲ್ಲಿ ಸಂಸಾರವನ್ನು ನಡೆಸಿಕೊಂಡು ಹೋಗುವುದು ಮತ್ತು ದಾಕ್ಷಿಣ್ಯ ಲಂಚಗಳಿಗೆ ವಶನಾಗದೆ ತನ್ನ ಕರ್ತವ್ಯವನ್ನು ನ್ಯಾಯಮಾರ್ಗದಲ್ಲಿ ನಡೆಸುವುದು. ಈಗಿನ ಕಾಲದಲ್ಲಿ ಅಂತಹ ವ್ರತಿಗಳನ್ನು ದುರ್ಬೀನು ಹಿಡಿದು ಹುಡುಕಬೇಕಷ್ಟೆ.
ಕಳೆದ ಸಲ ಕೇಳಿದ್ದ ಎರಡನೆಯ ಪದ Catering. ಇಂಗ್ಲಿಷ್ನಲ್ಲಿ Cater ಕ್ರಿಯಾಪದದ ಅರ್ಥ ಆಹಾರ ಹವಣಿಸು ಅಥವಾ ಒದಗಿಸು ಎಂದು. ಇದರ ಮೂಲ ಆಂಗ್ಲೋ ಫ್ರೆಂಚ್ನ achatour ಅಂದರೆ ದಿನಸಿಪದಾರ್ಥಗಳನ್ನು ಕೊಳ್ಳುವವನು ಎಂಬರ್ಥ. ಆಹಾರ ಸರಬರಾಜಿಗೆಂದೇ ತಾನೆ ದಿನಸಿಯನ್ನು ಕೊಳ್ಳುವುದು? ಇನ್ನೊಂದು ಅಭಿಪ್ರಾಯದ ಪ್ರಕಾರ, ಮೀನು, ಮಾಂಸ ಮತ್ತಿತರ ಆಹಾರವನ್ನು ಒದಗಿಸುವ ವ್ಯವಸ್ಥೆ ಎಂಬರ್ಥದ Caterie ಎಂಬ ಇಂಗ್ಲಿಷ್ ಪದದಿಂದಲೇ ಬಂದಿರಬಹುದು ಎನ್ನಲಾಗಿದೆ. ಒಟ್ಟಿನಲ್ಲಿ Catering ಎಂದರೆ ಆಹಾರದ ಪೂರೈಕೆ ಏರ್ಪಾಡು ಎನ್ನುವುದಂತೂ ನಿಜ. ಮನೋರಂಜನೆ, ಸಾರಿಗೆ-ಸಂಪರ್ಕ ಮುಂತಾಗಿ ಆಹಾರೇತರ ಅಗತ್ಯಗಳನ್ನು ಪೂರೈಸುವಾಗಲೂ Catering to the need off ಎಂದು ಬಳಕೆಯಾಗುತ್ತದೆ. ಆದರೂ ಬರೀ Catering ಎಂದಾಗ ಊಟ-ಉಪಾಹಾರ ಪೂರೈಕೆಯದೇ ಸಂದರ್ಭ ಕಣ್ಮುಂದೆ ಬರುವುದು. ‘ಊಟೋಪಚಾರ’ ಎಂಬ ಪದವನ್ನು ಸೂಚಿಸುತ್ತ ಬಹಳಷ್ಟು ಪ್ರವೇಶಿಕೆಗಳು ಬಂದಿವೆ. ಅಂಥದೊಂದು ಪದ ಆಗಲೇ ರೂಢಿಯಲ್ಲಿರುವುದೂ ಹೌದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅದು ವ್ಯಾಕರಣಬದ್ಧ ಪ್ರಯೋಗವಲ್ಲ. ಉಪಚಾರ ಎನ್ನುವುದು ಸಂಸ್ಕೃತ ಪದ, ಊಟ ಅಚ್ಚಕನ್ನಡದ ಪದ. ಅವೆರಡು ಸೇರಿ ಗುಣಸಂಧಿ ಆಗದು. ಅದಕ್ಕಿಂತ, ‘ಖಾದ್ಯೋಪಚಾರ’ (ದೀಪಕ ಎಸ್. ಜೋಶಿ) ಸರಿಯಾಗುತ್ತದೆ. ಬರೀ ಉಪಚಾರ ಎಂದರೂ ಸಾಕಾಗುತ್ತದೆ. ಏಕೆಂದರೆ Catering ಅಂದರೆ care taking ಎಂಬ ಭಾವವೂ ಬರುತ್ತದೆ. ಹಣ ಪಡೆದು ಉಪಚಾರ ಅಷ್ಟೇ.
ಕೆಲವು ಓದುಗರು ‘ಪಾಕಸೇವೆ’ ಎಂಬ ಪದವನ್ನು ಸೂಚಿಸಿದ್ದಾರೆ: ಸಾವಿತ್ರಿ ಕ. ಬೇಲೆಬೇಡಕಿಹಾಳ, ಮಹಾವೀರ ಟಿ.ಉಪಾಧ್ಯ, ಜಿ.ಎಚ್. ಸಂಕಪ್ಪ, ಪುರುಷೋತ್ತಮ ಭಟ್ಟ ಮುಂತಾದವರು. ‘ಪಾಕೋದ್ಯಮ’ ಆಗಬಹುದೆಂದಿದ್ದಾರೆ ಎಂ.ಡಿ. ಶ್ರೀನಿವಾಸಮೂರ್ತಿ, ಅನಂತಪದ್ಮನಾಭ ಸಿ.ಎನ್ ಮತ್ತು ವಸಂತಕುಮಾರ್ ಕಲ್ಯಾಣಿ. ‘ಆಹಾರ ಸೇವೆ’ (ಶಾಂತಿನಾಥ ಹೋತಪೇಟಿ, ಪದ್ಮಮಾಲಿನಿ ಬೆಂಗಳೂರು, ರೂಪಕಲಾ ವಿದ್ಯಾರಣ್ಯಪುರ, ಶಶಿಕಲಾ ನರೇಂದ್ರನಾಥ ಮುಂತಾದವರು), ‘ಅಡುಗೆ ಸೇವೆ’ (ಬಿ.ರಾಮಕೃಷ್ಣ ರಾವ್, ನಳಿನಿ ಜಿ.ಭಟ್, ಸಿದ್ದನಗೌಡ ಮುದಿಗೌಡ್ರ, ದೀಪ್ತಿ ಖಟಾವಕರ್, ಗೋಪಿನಾಥ್ ಭರಮಸಾಗರ, ಎಂ.ಕೆ. ರಮೇಶ್, ಉಮಾ ಪ್ರಭು, ಸಾಕಲಚಂದ್ ಬಾಫನಾ, ರಚಿತಾ ಅಶ್ವತ್ಥಪುರ ಮೊದಲಾದವರು), ‘ಅಡುಗೆ ಉದ್ಯಮ’ (ಎನ್.ಎಸ್.ಭುಜಂಗರಾವ್, ಶೋಭಾ ಪಿ.ಭಟ್ಟ, ಸುಜಯಾ ಬಿ.ಜಿ, ಶೋಭಾ ತಿಪಟೂರು, ಅಂಜಲಿ ಬರ್ವೆ ಮತ್ತಿತರರು) ಸಹ ಸಮರ್ಪಕವೇ. ಅನಂತಕೃಷ್ಣ ಶಿವಮೊಗ್ಗ ಅವರು ಸೂಚಿಸಿದ ‘ಅಡುಗುತ್ತಿಗೆ’ (ಅಡು ಎಂಬ ಕ್ರಿಯಾಪದಕ್ಕೆ ಬೇಯಿಸು, ಅಡಿಗೆಮಾಡು ಎಂದು ಅರ್ಥವಿದೆ) ಆಕರ್ಷಕವೂ ಅರ್ಥಪೂರ್ಣವೂ ಆಗಿದೆ.
ಕೊನೆಯದಾಗಿ Pro rate. ಇಂಗ್ಲಿಷ್ಗೆ ಇದು ಯಥಾವತ್ತಾಗಿ ಲ್ಯಾಟಿನ್ ಭಾಷೆಯಿಂದ ಬಂದದ್ದು. ‘In Proporation, according to the calculated share’ ಎಂದು ಅರ್ಥ. ಇದನ್ನು ‘ಕಂತೆಗೆ ತಕ್ಕ ಬೊಂತೆ’, ‘ಕಾಸಿಗೆ ತಕ್ಕ ಕಜ್ಜಾಯ’ ಮುಂತಾದ ಗಾದೆಮಾತುಗಳಿಗೆ ಹೋಲಿಸಬಹುದಾದರೂ ಅವು ಸಾಮಾನ್ಯವಾಗಿ ಗುಣಮಟ್ಟ (Quality) ಸಂಬಂಧಿತ. ಇದು ಪ್ರಮಾಣ (Quantity) ಸಂಬಂಧಿತ. ಅಷ್ಟೂ ಹೋಲಿಸಲೇಬೇಕೆಂದಿದ್ದರೆ ‘ಮಜ್ಜಿಗೆ ರಾಮಾಯಣ’ಕ್ಕೆ ಹೋಲಿಸಬಹುದು. ಅದೇ- ದಾಸರೊಬ್ಬರು ಭಿಕ್ಷೆಗಾಗಿ ಒಂದು ಮುದುಕಿಯ ಮನೆಗೆ ಹೋದದ್ದು, ಆಕೆ ಭಿಕ್ಷೆ ಕೊಡಲಿಕ್ಕೆ ತನ್ನಲ್ಲೇನೂ ಇಲ್ಲವೆಂದದ್ದು, ಕೊನೆಗೆ ಹೋಗಲಿ ಸ್ವಲ್ಪ ಮಜ್ಜಿಗೆಯಿದೆ ಕೊಡಲೇ? ಎಂದು ಕೇಳಿದ್ದು, ದಾಸರು ಹೂಂ ಎಂದು ಒಪ್ಪಿದ್ದು, ಆದರೆ ಅರೆಲೋಟದಷ್ಟಿದ್ದ ಮಜ್ಜಿಗೆಯನ್ನು ಕೊಡಬೇಕಾದರೆ ಮೊದಲಿಗೆ ತನಗೆ ರಾಮಾಯಣವನ್ನೋ, ಭಾಗವತವನ್ನೋ ಇಲ್ಲ ಮಹಾಭಾರತವನ್ನೋ ಕೇಳಿಸಬೇಕು ಎಂದು ಮುದುಕಿ ಷರತ್ತು ಮಂಡಿಸಿದ್ದು, ದಾಸರು ನಾಲ್ಕೇನಾಲ್ಕು ಸಾಲುಗಳಲ್ಲಿ ಇಡೀ ರಾಮಾಯಣದ ಕಥೆಯನ್ನು ಹೇಳುವ ‘ಏಕಶ್ಲೋಕೀ ರಾಮಾಯಣ’ವನ್ನು ಪಠಿಸಿದ್ದು, ಅರೆಲೋಟ ಮಜ್ಜಿಗೆಯಷ್ಟೇ ಪುಟ್ಟದಾದ ರಾಮಾಯಣವು ‘ಮಜ್ಜಿಗೆ ರಾಮಾಯಣ’ ಎಂದು ಪ್ರಸಿದ್ಧವಾದದ್ದು. ಇದೊಂದು ರೀತಿಯ Pro rate ಎನ್ನಲಿಕ್ಕಡ್ಡಿಯಿಲ್ಲ. ಆದರೆ ಇವೆಲ್ಲ ತಮಾಷೆಗಷ್ಟೇ. ಸಾಮಾನ್ಯ-ಶಿಷ್ಟ ಸಂದರ್ಭಗಳಲ್ಲಿ ಬಳಕೆಗೆ Pro rate ಎಂಬ ಅರ್ಥದಲ್ಲಿ ‘ಪ್ರಮಾಣಾನುಸಾರ’ (ರಂಗನಾಥ ಟಿ.ಕೆ, ಅಂಜನಾ ತುಮಕೂರು, ನಂದಿನಿ ಹಾಸನ, ನೇತ್ರಾ ವಿನೋದ್, ಮಂಜುನಾಥ ಡಿ.ಎಸ್, ಬೊ.ನಾ ಕೃಷ್ಣಮೂರ್ತಿ ಮುಂತಾದವರು), ‘ಪ್ರಮಾಣಾನುಗುಣ’ (ಮೀನಾಕ್ಷಿ ಟಕ್ಕಳಕಿ, ಸೀತಾ ವ್ಯಾಸಮುದ್ರಿ, ವಿ.ವಿಜಯೇಂದ್ರ ರಾವ್, ಶ್ಯಾಮರಾಜ ಉಡುಪ, ಜಿ.ನಾರಾಯಣ ರಾವ್ ಮುಂತಾದವರು), ‘ಯಥಾನುಪಾತ’ (ಎನ್.ವಿ ಶಂಕರ್, ಚಂದನಕುಮಾರ್ ಅಸ್ವಾಳ್, ಶಾಂತಲಾ ರಾಜಗೋಪಾಲ್, ಸಂಜೀವ ಜೋಶಿ ಮತ್ತಿತರರು) ಇವು ಒಳ್ಳೆಯ ಪರ್ಯಾಯಗಳು. ಹಿಂದಿ ಭಾಷೆಯಿಂದ ಬಂದ, ಮರಾಠಿಯಲ್ಲೂ ಬಳಕೆಯಲ್ಲಿರುವ ‘ದಾಮಾಷಾ’ ಮತ್ತು ಅದರ ಬೇರೆಬೇರೆ ರೂಪಗಳನ್ನೂ ಕೆಲವರು ತಿಳಿಸಿದ್ದಾರೆ: ಡಾ.ದಯಾನಂದ ಭಟ್ಟ, ಸತ್ಯನಾರಾಯಣ ಟಿ.ಜಿ, ಯು.ಪರಮೇಶ್ವರ ಭಟ್, ನಾಗೇಶ ಫಾಟಕ್, ಜಯಲಕ್ಷಿ ್ಮಡಿಗ, ಪದ್ಮಾ ಬದರಿನಾಥ್ ಮುಂತಾದವರು. ಇವೆಲ್ಲಕ್ಕಿಂತ ಅಚ್ಚಕನ್ನಡದಲ್ಲಿ ‘ಇಷ್ಟಕ್ಕಿಷ್ಟು’ ಎನ್ನಬಹುದೆಂಬ ಬಿ.ಎಸ್ ನಟರಾಜು ಅವರ ಸಲಹೆ ಚೆನ್ನಾಗಿದೆ, ಬಳಕೆಗೂ ಸುಲಭವಿದೆ!
1. Firebrand: ಉಮಾಭಾರತಿಯಿಂದಾಗಿ ಹೆಚ್ಚು ಬಳಕೆಗೆ ಬಂತು. ರಾಜಕೀಯ ಕ್ಷೇತ್ರದಲ್ಲೇ ಹೆಚ್ಚಾಗಿ ಕಾಣಸಿಗುವ ಇಂಥವರನ್ನು ಗುರುತಿಸಲಿಕ್ಕೊಂದು ಚುರುಕು ಕನ್ನಡ ಪದ ಬೇಕು.
2. Nursery: ಶಿಶುವಿಹಾರ ಅಂಗನವಾಡಿಗಳಲ್ಲ, ತೋಟಗಾರಿಕೆ ಮಾಡುವವರಿಗಾಗಿ ಚಿಕ್ಕ ಸಸಿಗಳನ್ನು ಸಂಗ್ರಹಿಸಿಟ್ಟಿರುತ್ತಾರಲ್ಲ, ಇದನ್ನು ಕನ್ನಡದಲ್ಲಿ ಏನನ್ನೋಣ?
3. Taunt: ಯಾರನ್ನಾದರೂ ಕೆಣಕಲು, ವ್ಯಂಗ್ಯವಾಡಲು, ಹೀಯಾಳಿಸಲು ಅಥವಾ ಪರೋಕ್ಷವಾಗಿ ಚುಚ್ಚಲು ಬಳಸುವ ಮಾತು. ಕನ್ನಡದಲ್ಲಿ ಏನನ್ನಬಹುದು?
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಕನ್ನಡದಲ್ಲಿ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945
-(ಲೇಖಕರು ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಮತ್ತು ಅಂಕಣ ಬರಹಗಾರರು)