ಮಹಿಳೋದಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹನೂರಿನಲ್ಲಿ ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರಿಗೆ ಮನವಿ ಸಲ್ಲಿಸಿದರು. ಮೋಕ್ಷಮೇರಿ, ಲಿಲ್ಲಿಮೇರಿ, ಮೇರಿ ಎಲಿಜಬೆತ್, ಅಂಥೋನಿಯಮ್ಮಾಳ್, ಫಾಸ್ಕಲ್ ಮೇರಿ ಇತರರರಿದ್ದರು.
ಶೂಟೌಟ್ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಮೂಲಕ ಮೃತಪಟ್ಟ ಮೂವರು ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ ಮಹಿಳೋದಯ ಮಹಿಳಾ ಒಕ್ಕೂಟದಿಂದ ಸೋಮವಾರ ತಹಸೀಲ್ದಾರ್ ಕೆ.ಎನ್.ಚೈತ್ರಾ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ಸಂಚಾಲಕಿ ಮೋಕ್ಷ ಮೇರಿ ಮಾತನಾಡಿ, ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾಗಿರುವುದು ನಿಜಕ್ಕೂ ಖಂಡನೀಯ. ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ, ಬೇಟೆಯಾಡುವುದು ಹಾಗೂ ಕಾನೂನು ಬಾಹಿರಿ ಚಟುವಟಿಕೆಗಳನ್ನು ಸಂಘಟನೆ ಬೆಂಬಲಿಸುವುದಿಲ್ಲ. ಆದರೆ ಅರಣ್ಯ ಇಲಾಖೆಯ ಸಿಬ್ಬಂದಿ ಮೂವರನ್ನು ಗುಂಡಿಕ್ಕಿ ಕೊಂದಿರುವ ಸತ್ಯತೆ ಬೆಳಕಿಗೆ ಬರಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ, ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮಕ್ಕಳಿಗೆ ಉನ್ನತ ಶಿಕ್ಷಣದವರೆಗಿನ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಕುಟುಂಬಗಳಿಗೆ ಕಾನೂನು ನೆರವು ಹಾಗೂ ಭದ್ರತೆ ಒದಗಿಸಬೇಕು. ಆ ಮೂಲಕ ನೊಂದ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ರಾಜ್ಯದಲ್ಲಿ ಇಂತಹ ಘಟನೆ ಮರುಕಳುಹಿಸದಂತೆ ಅಗತ್ಯ ಕ್ರಮವಹಿಸಬೇಕು. ಶಾಗ್ಯ ಭಾಗದಲ್ಲಿನ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕೃಷಿಗೆ ನೀರಾವರಿ ಸೌಕರ್ಯ ಒದಗಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಮಾಯಕ ರೈತರ ಸಾವಿಗೆ ನ್ಯಾಯ ಸಿಗಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ರವಾನಿಸಲಾಗುವುದು ಎಂದು ತಿಳಿಸಿದರು. ಒಕ್ಕೂಟದ ಸಂಯೋಜಕರಾದ ಲಿಲ್ಲಿಮೇರಿ, ಮೇರಿ ಎಲಿಜಬೆತ್, ಅಂಥೋನಿಯಮ್ಮಾಳ್, ಫಾಸ್ಕಲ್ ಮೇರಿ, ಕಾರ್ಯಕರ್ತರಾದ ಮಹೇಶ್, ಸಾಗರ್, ಸೆಲ್ವಕುಮಾರ್, ಮೃತ ಡೇವಿಡ್ ಕುಮಾರ್ ಪತ್ನಿ ಲಿಯೋಮೇರಿ, ಪೀಟರ್ ಪತ್ನಿ ಸಗಾಯಮೇರಿ ಇತರರಿದ್ದರು.