ಚಿಕ್ಕಬಳ್ಳಾಪುರ: ನಗರದಲ್ಲಿ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಕಳ್ಳರು, ಮತ್ತೆ ಆಭರಣವನ್ನು ಆಕೆಯ ಮನೆಯೊಳಗೆ ಹಾಕಿದ್ದಾರೆ.
ಎರಡು ದಿನಗಳ ಹಿಂದೆ ನಗರದ ಚಾಮರಾಜಪೇಟೆಯ ನಿವಾಸಿ ಪ್ರಿಯಾ ಮನೆಯ ಮುಂಭಾಗದಲ್ಲಿನ ಸಂಪ್ನೊಳಗೆ ಇರುವ ನೀರಿನ ಪ್ರಮಾಣ ತಿಳಿದುಕೊಳ್ಳಲು ಹೊರ ಬಂದಾಗ ಕಳ್ಳರು ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆ ಸುತ್ತಲು ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿನ ದೃಶ್ಯಗಳ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದರು. ಇದರ ನಡುವೆ ಪ್ರಿಯಾ ಅವರ ಮನೆ ಬಾಗಿಲಿನ ಬಳಿ ಕಳವಾಗಿದ್ದ ಸರವನ್ನು ಯಾರೋ ಬಿಸಾಡಿ ಹೋಗಿರುವುದು ಕಂಡು ಬಂದಿದೆ. ಆಭರಣವನ್ನು ತೆಗೆದುಕೊಂಡ ದೂರುದಾರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.