ಎಲ್ಲ ಪ್ರದೇಶಕ್ಕೂ ಎಲ್ಲರಿಗೂ ಒಂದೇ ರೀತಿಯ ಅಂಶ ಅನ್ವಯಿಸದು!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ವಾಸ್ತು ಎಂಬುದು ಇಂದು ನಿನ್ನೆ ರೂಪುಗೊಂಡ ಶಾಸ್ತ್ರವಾಗಲಿ, ವಿದ್ಯೆಯಾಗಲಿ ಅಲ್ಲ. ಈ ಜಗತ್ತಿನಲ್ಲಿ ಮನುಷ್ಯ ಯಾವಾಗ ತನಗೊಂದು ಸೂರು ಬೇಕು ಎಂಬ ಅಪೇಕ್ಷೆ ಪಟ್ಟನೋ ಅಂದೇ ವಾಸ್ತು ಕೂಡಾ ಹುಟ್ಟಿದೆ. ಗುಡಿಸಲು, ಕಲ್ಲು ಬಂಡೆಗಳ ನಡುವಿನ ವಾಸದ ವ್ಯವಸ್ಥೆಯನ್ನು ರೂಪುಗೊಳಿಸುವಾಗಲೆ ವಾಸ್ತುವಿನ ಅನುಸರಣೆ ಆರಂಭವಾಯಿತು. ವಾಸ್ತು ಕೇವಲ ದೊಡ್ಡ ಕಟ್ಟಡಕ್ಕೆ ಸಂಬಂಧಿಸಿದ ವಿಷಯವಲ್ಲ. ಬಯಲು ಪ್ರದೇಶಕ್ಕೂ ವಾಸ್ತು ಅನ್ವಯವಾಗುತ್ತದೆ.

ಪ್ರಾಣಿ ಪಕ್ಷಿ, ಜಲಚರಗಳು ಕೂಡ ವಾಸ್ತುವನ್ನು ಅನುಸರಿಸುತ್ತವೆ. ಒಂದು ಚಿಕ್ಕ ಗೆದ್ದಲು ಹುಳು ಕೂಡ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಹುತ್ತವನ್ನು ನಿರ್ವಿುಸುತ್ತದೆ. 5ರಿಂದ 10 ಅಡಿ ಎತ್ತರದ ಹುತ್ತದೊಳಗೆ ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತವೆ. ಹೊರಗಿರುವ ಉಷ್ಣಾಂಶದ ಅರ್ಧದಷ್ಟು ಉಷ್ಣಾಂಶ ಹುತ್ತದ ಒಳಗಿರುತ್ತದೆ. ಹುತ್ತದ ಹೊರಗಿನ ರಚನೆ ಒಂದೇ ಹೊರಮೇಲ್ಮೈ ರೀತಿಯಲ್ಲಿ ಕಂಡು ಬಂದರೂ ಹುತ್ತದ ಒಳಗೆ ಬೇರೆ ಬೇರೆ ಕೋಣೆಯನ್ನು ನಿರ್ವಿುಸುತ್ತವೆ. ಅಲ್ಲಿ ಆಹಾರ ಧಾನ್ಯಗಳ ಸಂಗ್ರಹ, ಮಾಮೂಲಿ ಹುಳುಗಳ ವಾಸ, ರಾಣಿ ಹುಳುವಿನ ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಪ್ರತಿ ಕೋಣೆಗೂ ಗಾಳಿ ಬರುವುದಕ್ಕೆ ಬೇಕಾದ ವೆಂಟಿಲೇಷನ್ ಇಟ್ಟಿರುತ್ತವೆ. ಆದರೆ ಹೊರಗೆ ಎಷ್ಟೇ ಮಳೆ ಬಂದರೂ ಹುತ್ತದ ಒಳಗೆ ಒಂದು ಹನಿ ನೀರು ಬಾರದಂತೆ ರಕ್ಷಣೆ ಒದಗಿಸುತ್ತದೆ. ಶತ್ರುಗಳ ಸುಳಿವು ಬಂದ ಕೂಡಲೇ ಎಲ್ಲ ಹುಳುಗಳು ಗುಪ್ತವಾಗಿ ಇರುವುದಕ್ಕೆ ಪ್ರತ್ಯೇಕ ಕೋಣೆಯನ್ನು ಮಾಡಿರುತ್ತವೆ.

ಬಿಸಿಲ ನಾಡಿನಲ್ಲಿ ಕಟ್ಟಿದ ಹುತ್ತದೊಳಗೆ ಉಷ್ಣಾಂಶ ಬಾರದಂತೆ, ಹಿಮಾಲಯದಲ್ಲಿ ಕಟ್ಟಿದ ಹುತ್ತದಲ್ಲಿ ತಂಪು ಒಳಗೆ ಬಾರದಂತೆ ಗೆದ್ದಲು ಹುಳುಗಳು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹುತ್ತ ಕಟ್ಟುತ್ತವೆ. ಇದು ನೈಸರ್ಗಿಕ ವಾಸ್ತು ವಿನ್ಯಾಸದ ಹೆಗ್ಗಳಿಕೆ. ಇದರರ್ಥ ವಾಸ್ತು ಎಂದರೆ ಎಲ್ಲ ಪ್ರದೇಶದಲ್ಲೂ ಎಲ್ಲರಿಗೂ ಒಂದೇ ರೀತಿಯ ಅಂಶ ಅನ್ವಯಿಸುವುದಿಲ್ಲ. ಮನೆಕಟ್ಟುವ ಸ್ಥಳ, ವ್ಯಕ್ತಿ, ವಾಸಿಸುವವರ ಸಂಖ್ಯೆ, ಅಭಿರುಚಿಗೆ ಅನುಗುಣವಾಗಿ ವಾಸ್ತು ಬದಲಾಗುತ್ತದೆ.

ಪ್ರತಿ ಜೀವಿಗೂ ರಕ್ಷಣೆ ನೀಡುವುದೇ ವಾಸ್ತು: ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಯೂ ಇನ್ನೊಂದು ಜೀವಿಯಿಂದ ರಕ್ಷಿಸಿಕೊಳ್ಳಲು ಆಲೋಚಿಸುತ್ತವೆ. ಜಲಚರಗಳಿಗೆ ನೀರು ರಕ್ಷಣೆಯಾದರೆ, ಪಕ್ಷಿ, ಕೋತಿಗಳಂತಹ ಹಾರುವ ಪ್ರಾಣಿಗಳಿಗೆ ಮರಗಳೇ ರಕ್ಷಣೆ. ಇದೇ ರೀತಿ ಮನುಷ್ಯನು ಕೂಡ ಬುದ್ದಿ ಬೆಳೆಯುತ್ತ ಹೋದಂತೆ ತಾನೂ ಒಂದು ಸೂರು ಮಾಡಿಕೊಳ್ಳಬೇಕೆಂದು ಬಯಸಿದ. ಮಾತ್ರವಲ್ಲ, ತನಗೆ ರಕ್ಷಣೆ ಕೊಡುವ ವಸ್ತುಗಳಿಗೆ ದೈವತ್ವನ್ನು ನೀಡಿ ಪೂಜಿಸಲು ಆರಂಭಿಸಿದ. ಅದರಿಂದ ಪಂಚಭೂತಗಳಿಗೆ ದೇವರ ಸ್ವರೂಪ ಬಂತು. ಇದೇ ವಾಸ್ತುವಿಗೆ ಮೊದಲ ಆಧಾರ. ಆರ್ಕಿಟೆಕ್ಚರ್ ಎಂಬ ಇಂಗ್ಲಿಷ್ ಪದಕ್ಕೆ ಸಂಸ್ಕೃತವೇ ಮೂಲ ಧಾತು. ಜೀವಸಂಕುಲಗಳೆಲ್ಲವೂ ಸೂರ್ಯನಿಂದ ಬದುಕಿವೆ ಎಂಬುದು ಆ ಪದದ ಅರ್ಥ. ಪ್ರಕೃತಿ, ಜೀವಿ ಮತ್ತು ವಾಸಿಸುವ ಪ್ರದೇಶ ಈ ಮೂರನ್ನು ಅವಲಂಬಿಸಿರುವುದೇ ವಾಸ್ತು.

ಪ್ರಾಚೀನ ಸಾಹಿತ್ಯದಲ್ಲಿ ವಾಸ್ತು ಉಲ್ಲೇಖ: ವಾಸ್ತು ಶಾಸ್ತ್ರದ ಬಗ್ಗೆ ಭಾರತೀಯ ಪುರಾಣ, ಸಾಹಿತ್ಯಗಳಲ್ಲಿ ಸಾಕಷ್ಟು ಉಲ್ಲೇಖಗಳು ದೊರಕುತ್ತವೆ. ಅನೇಕ ಋಷಿ-ಮುನಿಗಳು ಸ್ವತಃ ಪ್ರಖ್ಯಾತ ವಾಸ್ತುಶಿಲ್ಪಿಗಳಾಗಿದ್ದು ಇಂದಿಗೂ ಅವರ ಹೆಸರು ಎಲ್ಲರ ಮನದಲ್ಲಿವೆ. ಬೃಹ ಸ್ಮತಿ, ನಾರದ, ವಿಶ್ವಕರ್ಮ, ಪರಾಶರ, ಕಶ್ಯಪ, ಋಷಿಪುತ್ರ, ದೇವಲಾ, ನಂದೀಶ್ವರ, ಸುಗ್ರೀವ, ಮಯ ಮತ್ತಿತರರು ಪ್ರಸಿದ್ಧ ವಾಸ್ತುಶಿಲ್ಪಿಗಳು. ವಿಶೇಷವಾಗಿ ಇಂದಿನ ಮಧ್ಯಪ್ರದೇಶದ ಉಜ್ಜಯಿನಿ ಸಮೀಪ ವಾಸಿಸುತ್ತಿದ್ದ ವರಾಹಮಿಹಿರ ಎಂಬಾತ ಬರೆದಿರುವ ‘ಬೃಹತ್ ಸಂಹಿತೆ’ ಗ್ರಂಥವು ವಾಸ್ತು ಕುರಿತು ಮಾಹಿತಿ ನೀಡುವ ಶ್ರೇಷ್ಠ ಗ್ರಂಥ.

ಕ್ಷೇತ್ರದ ಪ್ರಸಿದ್ಧಿಗೆ ವಾಸ್ತು ಕಾರಣ: ವಾಸ್ತುವನ್ನು ಕೇವಲ ಮನುಷ್ಯರು ವಾಸಿಸುವ ಮನೆ, ಕಚೇರಿ ಮತ್ತಿತರ ಕಟ್ಟಡಗಳಿಗೆ ಅನ್ವಯಿಸುವುದು ಸಾಧ್ಯವಿಲ್ಲ. ಭಾರತದಲ್ಲಿರುವ ಪುರಾಣ ಪ್ರಸಿದ್ಧ ಪ್ರಾಚೀನ ದೇವಾಲಯಗಳೆಲ್ಲವೂ ವಾಸ್ತು ಪ್ರಕಾರವೇ ನಿರ್ಮಾಣವಾಗಿವೆ. ಆ ಕಾರಣದಿಂದಲೇ ಸಾವಿರಾರು ವರ್ಷಗಳ ಹಳೇ ದೇವಾಲಯಗಳಾದರೂ ಇಂದಿಗೂ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುವ ಪ್ರಸಿದ್ಧ ತಾಣಗಳಾಗಿವೆ. ಮಧ್ಯ ಪ್ರದೇಶದ ಮಹಾಕಾಲೇಶ್ವರ ಜ್ಯೋತಿರ್ಲಿಂಗ ಇರುವ ಉಜ್ಜಯಿನಿ ನಗರವು ಭೂಮಂಡಲದ ಕೇಂದ್ರಬಿಂದು ಸ್ಥಾನವಾಗಿದ್ದು, ಸೂರ್ಯನ ಪಥ ಬದಲಾವಣೆಯ ಅಕ್ಷಾಂಶ ಬಿಂದು ಎಂಬುದು ವಾಸ್ತು ವಿಶೇಷ. ದೇಶದ 12 ಜ್ಯೋತಿರ್ಲಿಂಗಗಳು, 51 ಶಕ್ತಿಪೀಠಗಳು ಮತ್ತಿತರ ವಿಶ್ವಪ್ರಸಿದ್ಧ ದೇವಾಲಯಗಳು ವಾಸ್ತು ಪ್ರಕಾರವೇ ನಿರ್ವಿುಸಲ್ಪಟ್ಟಿವೆ. ಆ ಕಾರಣದಿಂದಲೇ ಪ್ರಕೃತಿಯಲ್ಲಿ ಏನೇ ವೈಪರೀತ್ಯಗಳಾದರೂ ಆ ಕಟ್ಟಡಗಳು ಪ್ರಕೃತಿಯ ಭಾಗವಾಗಿ ಹಾಗೇ ಉಳಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net