ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ

ಅರಕಲಗೂಡು ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಎಸ್‌ಐಆರ್ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾಹಿತಿ ನೀಡಿದರು.
ಅರಕಲಗೂಡು ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ ಎಸ್‌ಐಆರ್ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾಹಿತಿ ನೀಡಿದರು.
Published on
ಅರಕಲಗೂಡು: ಪ್ರಜಾಪ್ರಭುತ್ವದ ಯಶಸ್ಸಿಗೆ ನಿಖರವಾದ ಮತದಾರರ ಪಟ್ಟಿ ಮುಖ್ಯವಾಗಿದೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವು ಸಂಪೂರ್ಣ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿ, ಸಂವಿಧಾನತ್ಮಕವಾಗಿ, ನಿಯಮಬದ್ಧವಾಗಿ ಚುನಾವಣಾ ಆಯೋಗ ಕೈಗೊಂಡಿರುವ ಸಮಗ್ರ ವಿಶೇಷ ಮತದಾರರ ಪರಿಷ್ಕರಣೆ ಕಾರ್ಯ ಅತ್ಯಂತ ಪಾರದರ್ಶಕವಾಗಿ, ಗಂಭೀರತೆ ಮತ್ತು ಜವಾಬ್ದಾರಿಯಿಂದ ಮಾಡಬೇಕಿದೆ. ಇಲ್ಲಿ ಯಾವುದೇ ಸಮಸ್ಯೆ ಎದುರಾದರೇ ಆಯೋಗ ಕಾನೂನಾತ್ಮಕವಾಗಿ ಕ್ರಮ ಜರುಗಿಸಲಿದೆ. ಇದಕ್ಕೆ ಬಿಎಲ್‌ಒಗಳು ಅವಕಾಶ ಮಾಡಿಕೊಡದಂತೆ ಕಾರ್ಯನಿರ್ವಹಿಸಬೇಕು.
ಈಗಾಗಲೇ ಶೇ.95 ಮ್ಯಾಪಿಂಗ್ ನಡೆದಿದೆ. ಇದು ಶೇ.100 ಪ್ರಗತಿಯಾಗಬೇಕಿದೆ. ಬೂತ್ ಲೆವೆಲ್ ಏಜೆಂಟರ ನೇಮಕ ಕುರಿತು ರಾಜಕೀಯ ಪಕ್ಷಗಳ ಮುಖಂಡರು ನೇಮಿಸುತ್ತಾರೆ. ಈಗಾಗಲೇ ಈ ಕ್ಷೇತ್ರದಲ್ಲಿ 326 ಮಂದಿ ಬಿಎಲ್‌ಎಗಳು ನೇಮಕವಾಗಿದ್ದಾರೆ. ಮುಂದಿನ ಪ್ರಕ್ರಿಯೆ ಮಾಡುವಾಗ ಅರ್ಹ ಮತದಾರರು ಪಟ್ಟಿಯಿಂದ ಹೊರಗೆ ಉಳಿಯಬಾರದು. ಅದರಲ್ಲಿಯೂ ಕೂಡ ಗಣ್ಯಾತಿ ಗಣ್ಯರನ್ನು ಕೈಬಿಡಬಾರದು. ಏನಾದರೂ ಮಾಹಿತಿ ಪಡೆಯಬೇಕಾದರೆ ಈ ಕ್ಷೇತ್ರದ ಆರ್‌ಒ ರುದ್ರಮುನಿ ಹಾಗೂ ಎಆರ್‌ಒ ಆದ ತಹಸೀಲ್ದಾರ್ ಸೌಮ್ಯಾ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.
ಈ ವಿಶೇಷ ಮತ ಪರಿಷ್ಕರಣೆ ಸಂಬಂಧ ಈಗಾಗಲೇ ಮತಗಟ್ಟೆ ಅಧಿಕಾರಿಗಳು, ಸೂಪರ್‌ವೈಸರ್ ಹಾಗೂ ಮಾಸ್ಟರ್ ಟ್ರೈನರ್‌ಗಳಿಗೆ ತರಬೇತಿ ನೀಡಲಾಗಿದೆ. ಮಾಹಿತಿಗೆ ಟೋಲ್ ಫ್ರೀ ನಂಬರ್ 1950ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಎಲ್ಲ ಗ್ರಾಪಂ ಆವರಣದಲ್ಲಿ ಈ ಕುರಿತು ಮಾಹಿತಿ ಒದಗಿಸಲು ತಾಪಂ ಇಒ ಕ್ರಮವಹಿಸಬೇಕಿದೆ ಎಂದರು.
ಒಬ್ಬ ವ್ಯಕ್ತಿ ಮತದಾರ ಅನಿಸಿಕೊಳ್ಳಬೇಕಾದರೇ ಭಾರತೀಯ ಪ್ರಜೆಯಾಗಿರಬೇಕು. 18ವರ್ಷ ತುಂಬಿರಬೇಕು. ಈ ಎರಡು ಪ್ರಮುಖ ಮಾನದಂಡವಾಗಿದೆ. ಎಸ್‌ಐಆರ್‌ನಲ್ಲಿ ಇರುವ ಅಂಶಗಳ ಕುರಿತು ಮತದಾರರಿಗೆ ಮಾಹಿತಿ ನೀಡಬೇಕಿದೆ. ಇದುವರೆಗೆ 2002ರಲ್ಲಿ ಈ ಕಾರ್ಯ ನಡೆದಿದೆ. ಇದುವರೆಗೂ 10 ಬಾರಿ ಎಸ್‌ಐಆರ್ ಕಾರ್ಯ ನಡೆದಿದೆ. ಮತದಾರರ ಪಟ್ಟಿ ಆರೋಗ್ಯಕರವಾಗಿರಬೇಕು. ಈಗ ನಡೆಯುತ್ತಿರುವ ಮತದಾರರ ಪಟ್ಟಿಯನ್ನು ನ್ಯಾಯಸಮ್ಮತವಾಗಿ ರೂಪಿಸಬೇಕಿದೆ. ಇದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಸೌಮ್ಯಾ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net