ಚಿಂಚೋಳಿ: ಶ್ರೀ ಮಹಾಂತ ಶಿವಯೋಗಿಗಳು ಅಪ್ಪಟ ಬಸವಾಭಿಮಾನಿಯಾಗಿದ್ದು, ಜನರಲ್ಲಿನ ವ್ಯಸನ ಬಿಡಿಸಲು ಜೋಳಿಗೆ ಹಾಕಿಕೊಂಡು ಹಳ್ಳಿ-ಹಳ್ಳಿಗೆ ಪಾದಯಾತ್ರೆ ಮಾಡಿ ಸಾವಿರಾರು ಜನರನ್ನು ದುಶ್ಚಟದಿಂದ ಮುಕ್ತಗೊಳಿಸಿದ್ದಾರೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು. ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನ ಹಾಗೂ ವ್ಯಸನಮುಕ್ತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಗಳು ವಿವಾಹ ಸಂದರ್ಭದಲ್ಲಿ ವಧುವರರ ಮೇಲೆ ಧಾನ್ಯ ಎಸೆಯುವುದನ್ನು ನಿಷೇಧಿಸಿ ಪುಷ್ಪ ಹಾಕುವುದರ ಮೂಲಕ ಸರಳ ವಿವಾಹಕ್ಕೆ ನಾಂದಿ ಹಾಡಿದವರು. ವಚನ ಗ್ರಂಥಗಳ ಮೆರವಣಿಗೆ, ಮಠಾಧೀಶರಾಗಿ ದಲಿತ ಸಮುದಾಯದವರನ್ನು ನೇಮಿಸುವ ಮೂಲಕ ಬಸವಣ್ಣನವರ ಆಶಯದಂತೆ ನಡೆದು, ನುಡಿದು ಬಾಳಿ ಸಮಾಜಕ್ಕೆ ಬೆಳಕಾದವರು ಎಂದು ಬಣ್ಣಿಸಿದರು. ಪ್ರಮುಖರಾದ ಹಸನ್ಸಾಬ್, ನಾಗಶೆಟ್ಟಿ ಭದ್ರಶೆಟ್ಟಿ, ಅಶೋಕ ಹೂವಿನಭಾವಿ, ಮಲ್ಲಿಕಾರ್ಜುನ ಪಾಲಾಮೂರ, ಹಣಮಂತ ಕೋರೆ, ಅಮಿತಕುಮಾರ, ಚಕ್ರವರ್ತಿ ಇತರರಿದ್ದರು.