ಮಂಗೇಶ್ಕರ್ ಪರಿವಾರದ ಅಪರೂಪದ ಕಥೆ: ಆಶಾ ಭೋಸ್ಲೆ ಅಂದು ಅತ್ತದ್ದು ಯಾಕೆ? ಸುಧೀರ್ ಅತ್ತಾವರ್ ಬಿಚ್ಚಿಟ್ಟ ಸತ್ಯ!

Sudheer Attavar
Sudheer Attavar
Published on

ಪ್ರಮುಖ ಮುಖ್ಯಾಂಶಗಳು

  • ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಒಟ್ಟಿಗೆ ಹಾಡಬೇಕಿದ್ದ ಆ ಕೊನೆಯ ಹಾಡು ಏನಾಯ್ತು? ಕೊರೋನಾ ಕಸಿದುಕೊಂಡ ಆ ಸುಂದರ ಕನಸು!
  • ಮಂಗೇಶ್ಕರ್ ಕುಟುಂಬ ಮತ್ತು ಮಂಗಳೂರಿನ ನಡುವೆ ಇದೆಯಾ ನಂಟು? ಉಷಾ ಮಂಗೇಶ್ಕರ್ ಬಿಚ್ಚಿಟ್ಟ ಆಸಕ್ತಿದಾಯಕ ರಹಸ್ಯ!
  • ಸಂಗೀತ ಸಾಮ್ರಾಜ್ಞಿಯರ ಮನೆಯಲ್ಲಿ ಮೈಸೂರ್ ಪಾಕ್ ಸವಿ: ಆಶಾ ಭೋಸ್ಲೆ ಮತ್ತು ಲತಾಜಿ ಅವರ ಸರಳತೆಗೆ ಸಾಕ್ಷಿಯಾದ ಕನ್ನಡಿಗ!
ಭಾರತೀಯ ಸಂಗೀತ ಕ್ಷೇತ್ರ ಹಾಗೂ ಚಿತ್ರ ರಂಗದ ದಂತ ಕಥೆ ಆಶಾ ಭೋಸ್ಲೆ ನಿಧನದಿಂದಾಗಿ ಅವರ ಮತ್ತು ಸಂಗೀತದ ಅಭಿಮಾನಿಗಳಿಗೆ ತುಂಬ ಲಾರದ ನಷ್ಟವಾಗಿದೆ. ಕನ್ನಡದ ಐದು ಸಿನಿಮಾಗಳಿಗೆ ಹಾಡಿದ್ದ ಅವರು( ಎರಡು ಸಿನಿಮಾ ಹಾಡುಗಳು ಬಿಡುಗಡೆಯಾಗಿಲ್ಲ)"ಕೊರಗಜ್ಜ" ನಿರ್ದೇಶಕ ಸುಧೀರ್ ಅತ್ತಾವರ್ ವಿನ್ಯಾಸದ ಸಕ್ಸಸ್ ಫಿಲಮ್ಸ್ ಮತ್ತು ಡಿ ಕೆ ಫ಼್ಲ್ಯಾಗ್ ಫ಼ೌಂಡೇಷನ್ ನಿರ್ಮಾಣದ ಮ್ಯೂಸಿಕ್ ಆಲ್ಬಂ ಗೂ ಧ್ವನಿಯಾಗಿದ್ದರು.ಆಶಾ ಭೋಸ್ಲೆ ಮತ್ತು ಮಂಗೇಶ್ಕರ್ ಪರಿವಾರದ ಜೊತೆಗಿನ ಒಡನಾಟದ ಬಗ್ಗೆ ಸುಧೀರ್ ಮಾತನಾಡಿದ್ದಾರೆ....
ಅದು ಕೋವಿಡ್ 19 ಶುರು ಆಗುವ ಮೊದಲು. ನಮ್ಮ ಸಕ್ಸಸ್ ಫಿಲಂಸ್ ನಿಂದ ಲತಾ ಮಂಗೇಷ್ಕರ್ ಪರಿವಾರದವರನ್ನೆಲ್ಲ ಸೇರಿಸಿ ದೇಶದ ದಿಗ್ಗಜ ಹಾಡುಗಾರರಿಂದ ಒಂದು ಮ್ಯೂಝಿಕ್ ಆಲ್ಬಂ ಮಾಡುವ ಯೋಜನೆ.ಅದರ ಪ್ಲಾನ್ ಮತ್ತು ಟ್ಯೂನ್ಸ್ ಗಳು ಸಿದ್ಧವಾದ ಕೂಡಲೇ ರೆಕಾರ್ಡಿಂಗ್ ಆರಂಭಿಸುವ ಮೊದಲು ಆಯ್ದ ಗಾಯಕರೆಲ್ಲರೊಂದಿಗೆ ಚರ್ಚಿಸಿ ಟ್ಯೂನ್ ಕಳುಹಿಸಿ ಕೊಟ್ಟು ಕಾನ್ಸೆಪ್ಟ್ ತಿಳಿಸಿದೆವು. ಆಶಾ ಭೋಸ್ಲೆ, ಜಾವೆದ್ ಆಲಿ, ಸಾಧನಾ ಸರ್ಗಂ, ಶಾನ್, ಅಭಿಜಿತ್ ಭಟ್ಟಾಚಾರ್ಯ, ಶರೋನ್ ಪ್ರಭಾಕರ್, ಉಷಾ ಮಂಗೇಶ್ಕರ್ ಮೊದಲಾದ ಘಟಾನುಘಟಿ ಹಾಡುಗಾರರು ಈ ಆಲ್ಬಂ ನಲ್ಲಿ ಹಾಡಿದ್ದರು.
ಇದರಲ್ಲಿ ಶ್ಯಾಮ್ ಪ್ರಸದ್ ದಾಸ್ ಗುಪ್ತ ರವರು ರಚಿಸಿರುವ ನಮ್ಮ ದೇಶದ ರಾಷ್ಟ್ರ ಧ್ವಜದ ಗೀತೆ "ವಿಜಯೀ ವಿಶ್ವತಿ ರಂಗಾ ಪ್ಯಾರಾ...."ಹಾಡನ್ನು ಲತಾ ಮಂಗೇಷ್ಕರ್ ಪರಿವಾರದ ಸದಸ್ಯರೆಲ್ಲರಿಂದ ಹಾಡಿಸುವ ಯೊಜನೆ. ಹಾಗಾಗಿ ಆಶಾ ಭೋಸ್ಲೆ ಯವರನ್ನು ಸಂಪರ್ಕಿಸಿದೆವು. ಅವರಾಗಲೇ ಹಾಡುವುದನ್ನು ಕಡಿಮ ಮಾಡಿದ್ದರು . ಆಲ್ಬಂ ನ ಕಾನ್ಸೆಪ್ಟ್ ಕೇಳಿ ಮನೆಗೆ ಆಹ್ವಾನಿಸಿದರು. ಸಕ್ಸಸ್ ಫಿಲಂಸ್ ನ ವಿದ್ಯಾಧರ್ ಶೆಟ್ಟಿ ಜೊತೆ ಮುಂಬಾಯಿಯ ಲೋವರ್ ಪರೇಲ್ ನ ಅವರ ಐಶಾರಾಮಿ ಕಾಸಾ ಗ್ರಾಂಡ್ ಫ್ಲಾಟ್ ಗೆ ತೆರಳಿದೆವು.ವಿಶೇಷವಾದ ಸಿಹಿತಿಂಡಿ ಜೊತೆ ಸ್ವಾಗತಿಸಿ ಹಾಡಿನ ಟ್ಯೂನ್ ಮತ್ತು ಮೇಕಿಂಗ್ ಬಗ್ಗೆ ಚರ್ಚಿಸಿದರು. ಕಾನ್ಸೆಪ್ಟ್ ಕೇಳಿ ತನ್ನ ಮೊಮ್ಮಗಳು ಜ಼ನೈ ಭೋಸ್ಲೆ ಯನ್ನು ಕೂಡಾ ಈ ಹಾಡಿನ ಮೂಲಕ ಸಂಗೀತ ಕ್ಷೇತ್ರಕ್ಕೆ ಪರಿಚಯಿಸುವ ಇಂಗಿತ ವ್ಯಕ್ತ ಪಡಿಸಿದರು. ರೆಕಾರ್ಡಿಂಗ್ ಮುಗಿಸಿದ ನಂತರ ನಾವು ಲತಾ ಮಂಗೇಶ್ಕರ್ ರವರನ್ನು ಈ ಹಾಡಿನಲ್ಲಿ ಹಾಡಿಸಲು ನಾವು ಪ್ರಯತ್ನಿಸುತ್ತಿರುವ ವಿಚಾರ ತಿಳಿಸಿದೆವು. ಲತಾಜಿ ಯವರು ಬಹುತೇಕ ಹಾಡುವುದನ್ನು ನಿಲ್ಲಿಸಿರುವ ವಿಚಾರವನ್ನು ತಿಳಿಸಿದರು.ಬಾಂಗ್ಲಾ ದೇಶದ ಸ್ಟೇಟ್ ಗೆಸ್ಟ್ ಗಾಗಿ ಕೋಟ್ಯಾಂತರ ರುಪಾಯಿಗಳ ಆಫರ್ ನ್ನು ಕೂಡಾ ನಯವಾಗಿ ನಿರಾಕರಿಸಿರುವ ವಿಚಾರ ತಿಳಿಸಿದರು ಬಪ್ಪಿ ಲಹಿರಿ ಕೂಡಾ ಒಂದು ಹಾಡಿಗಾಗಿ ಕಳೆದ ಎರಡು ವರ್ಷಗಳಿಂದ ಕಾಯುತ್ತಿರುವ ಬಗ್ಗೆಯೂ ತಿಳಿಸಿದರು.ಖುದಿರಾಂ ಬೋಸ್" ಸಿನಿಮಾಕ್ಕಾಗಿ ಎರಡು ಸಾಲು ಹಾಡಿಸಲು ಅದರ ಸಂಗೀತ ನಿರ್ದೇಶಕರು ಕೂಡಾ ಕೆಲವು ವರ್ಷಗಳಿಂದ ಕಾಯುತ್ತಿರುವುದನ್ನು ಕೂಡಾ ಹೇಳಿದರು...!
.ಹಾಗೇ ಚರ್ಚಿಸುತ್ತಿರುವಾಗ ಆಶಾ ಭೋಸ್ಲೆ ಯವರ ಮೊಬೈಲ್ ಗೆ ಲತಾ ಜಿಯವರ ಕರೆ ಬಂತು. ಅದನ್ನು ನಮಗೆ ತೋರಿಸುತ್ತಾ..." ವರೆವಾಹ್...ದೇಖಿಯೇ....ದಿದೀ ಖುದೀ ಕಾಲ್ ಕರ್ ರಹೀ ಹೆ...."ಎಂದು ರೋಮಾಂಚನಗೊಂಡಂತೆ ಉದ್ಘರಿಸಿದರು.ಕರೆ ಬಂದ ಸಮಯದಲ್ಲಿ ಮೊಬೈಲ್ ನಲ್ಲಿ ಮೂಡಿದ್ದ ಲತಾಜಿಯವರ ಚಿತ್ರಕ್ಕೆ ನಮಸ್ಕರಿಸಿದಾಗ, ಸಹೋದರಿಯ ಮೇಲೆ ಆಶಾ ಜಿ ಯವರು ಹೊಂದಿದ್ದ ಮಾತ್ರ್ ಭಾವ ನೋಡಿ ಒಂದು ಕ್ಷಣ ಕಣ್ಣಾಲೆಗಳು ಮಂಜಾದವು. ಅದಾಗಲೇ ಉಷಾ ಮಂಗೇಷ್ಕರ್ ರವರ ರೆಕಾರ್ಡಿಂಗ್ ಮುಗಿಸಿದ್ದರಿಂದ, ನಮ್ಮ ಪ್ರಾಜೆಕ್ಟ್ ಬಗ್ಗೆ ಅವರಾಗಲೇ ಲತಾ ಜಿಯವರಿಗೆ ವಿಷಯ ತಿಳಿಸಿದ್ದರು. ಆಶಾ ಭೋಸ್ಲೆ ಕೂಡಾ ತಾನು ಮತ್ತು ತನ್ನ ಮೊಮ್ಮಗಳನ್ನು ಪರಿಚಯಿಸುವ ಇಂಗಿತ ವ್ಯಕ್ತ ಪಡಿಸಿದರು. ಲತಾ ಜಿಯವರು ಅದಕ್ಕೆ ಏನು ಪ್ರತಿಕ್ರಿಯೆ ನೀಡಿದರು ಎಂದು ತಿಳಿಯಲಿಲ್ಲ.ನಾವು ಹಾಡಿಗಾಗಿ ನಿಗದಿಪಡಿಸಿದ್ದ ಮೊತ್ತವನ್ನು ನೀಡಿದಾಗ ಹಾಡುವ ಮೊದಲು ಹಣ ಪಡೆದುಕೊಳ್ಳಲು ಸುತಾರಾಮ್ ನಿರಾಕರಿಸಿದರು. ರೆಕಾರ್ಡಿಂಗ್ ನಂತರ ನನ್ನ ಹಾಡು ನಿಮಗೆ ಇಷ್ಟ ವಾದಲ್ಲಿ ಮಾತ್ರ ಹಣ ತೆಗೆದುಕೊಳ್ಳುತ್ತೇನೆ ಎಂದರು. ಅದೆಂತಹ ವಿನಯ....ಸನ್ನಡತೆ....! ಒಂದಿಷ್ಟೂ ಇಣುಕದ ಅಹಂಭಾವ...!!
ರೆಕಾರ್ಡಿಂಗ್ ಸಮಯದಲ್ಲಿ ಮೊಮ್ಮಗಳು ಝನೈ ಯನ್ನು ತಿದ್ದಿ...ತಿದ್ದಿ....ತೀಡುತ್ತಿದ್ದರು. ಸ್ಟುಡಿಯೋ ದಲ್ಲಿ ಅವರು ದೇಶದ ಮಹಾನ್ ಗಾಯಕಿ ಅಶಾ ಭೊಸ್ಲೇ ಯಾಗಿರಲಿಲ್ಲ. ಬದಲಾಗಿ ಪ್ರೀತಿಯ ಮೊಮ್ಮಗಳನ್ನು ತೀಡುವ ಅಜ್ಜಿಯಂತೆ ಕಂಡುಬಂದರು. ಮೊಮ್ಮಗಳೆಂದರೆ ಅಷ್ಟು ಮುದ್ದು. ಕೆಲ ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದ ಮಗಳು ವರ್ಷಾಳನ್ನು ಮೊಮ್ಮಗಳು ಝನೈ ಳಳಲ್ಲಿ ಕಾಣುವಂತೆ ನಮಗೆ ಭಾಸವಾಯಿತು.ಒಂದೊಂದು ಶಬ್ದ, ಏರಿಳಿತ, ಶ್ರತಿ ಎಲ್ಲವನ್ನೂ ಮೊಮ್ಮಗಳಿಗೆ ಶ್ರದ್ಧೆ ಇಟ್ಟು ಕಲಿಸುತ್ತಿದ್ದರು. ಇಬ್ಬರ ರೆಕಾರ್ಡಿಂಗ್ ಮುಗಿಸಿದನಂತರ ನನ್ನ ಮಗಳು ಶ್ಲಾಘ್ಯಳ ಕೋರಿಕೆಯಂತೆ ಆಶಾ ಭೋಸ್ಲೆಯವರ "ತೂ...ತೂ ಹೆ ವಹೀ ದಿಲ್ ನೆ ಜಿಸೆ..." ಹಾಡನ್ನು ಝನೈ ಹಾಡಿದಾಗ ಮೊಮ್ಮಗಳನ್ನು ಮುದ್ದಿಸುತ್ತಾ....ಲತಾ ದೀದಿ ಈ ಮಗು ಭೋಸ್ಲೆ ಪರಿವಾರದ್ದೇ ಅಥವ ಮಂಗೇಷ್ಕರ್ ಪರಿವಾರದೇ ಎಂದು ಛೇಡಿಸಿ ವಾತ್ಸಲ್ಯಮಯದಿಂದ ಹೇಳುತ್ತಿದ್ದ ಮಾತುಗಳನ್ನು ಹಂಚಿಕೊಂಡರು..ಕಥಕ್ ಡಾನ್ಸ್ ಕಲಿಯುತ್ತಿರುವ ಝನೈ ಮುಂದೆ ನಟಿಸ ಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದರು.ಇಷ್ಟಾದರೂ ರೆಕಾರ್ಡಿಂಗ್ ಮುಗಿಸಿದ ಮೇಲೆ ಹಣ ಸ್ವೀಕರಿಸಲು ಸುತಾರಾಂ ಒಪ್ಪಲಿಲ್ಲ. ಆಶಾ ಜಿಯವರನ್ನು ಒಪ್ಪಿಸಲು ಸಾಕಷ್ಟು ಹೆಣಗಬೇಕಾಯಿತು.
ಅದಾದ ಒಂದೆರಡು ದಿನಗಳ ನಂತರ ಮತ್ತೆ ಆಶಾ ಜಿಯವರು ಕರೆಮಾಡಿದರು.ಇದೇ ರೀತಿಯ ಇನ್ನೊಂದು ಯಾವುದಾದರೂ ಆಲ್ಬಂ ಸಾಂಗ್ ಮಾಡುವ ಇಚ್ಚೆ ವ್ಯಕ್ತ ಪಡಿಸಿದರು. ಪಂಚಭೂತಗಳ ಬಗ್ಗೆ ಐದು ಹಾಡುಗಳನ್ನು ಮಾಡುವ ಯೋಚನೆಯನ್ನು ಹೇಳಿದಾಗ ಖುಶಿ...ಖುಷಿ ಯಿಂದ ಒಪ್ಪಿಕೊಂಡರು. ಅದಾದ ನಂತರ ನಾವು ಬೆಂಗಳೂರಿನಲ್ಲಿದ್ದಾಗ, ಝನೈ ನ ಹಾಡಿದನ್ನು ಕೇಳಿ ಸ್ವತಃ ಲತಾ ಮಂಗೇಷ್ಕರ್ ಕಡೆಯಿಂದ ಫೋನ್ ಬಂತು....."ಲತಾ ದೀದಿ ಬುಲಾರಹೀ ಹೆ...." ಎಂದು ಮ್ಯಾನೇಜರ್ ಹೇಳಿದಾಗ ಮನಸ್ಸು ಸಂಭ್ರಮದಿಂದ ಬೀಗಿತು. ಮರುದಿನವೇ ಬೆಂಗಳೂರಿನಿಂದ ಫ಼್ಲೈಟ್ ಹಿಡಿದು ಮುಂಬಾಯಿ ತಲುಪಿದೆವು. ಕೋಟ್ಯಾಂತರ ಸಂಗೀತ ಪ್ರಿಯರ ಆರಾಧ್ಯ ದೈವ, ಭಾರತ ರತ್ನ ಲತಾ ಜಿ ಯವರು ಸ್ವತಃ ನಮ್ಮನ್ನು ಕರೆಸಿರುವುದು ನಂಬಲೂ ಆಗದ ವಿಚಾರ. ಲತಾಜಿ ಯವರು ಮುಂಬಾಯಿಯ ಫ಼ೆಡರ್ ರೋಡ್ ನಲ್ಲೇ ಅವರ "ಪ್ರಭು ಕುಂಜ್" ಮನೆ ಎಂದು ಎಂದು ತಿಳಿದಾಗ, ಆ ರಸ್ತೆ ಯಲ್ಲಿ ಸಂಚರಿಸುವಾಗೆಲ್ಲಾ ಏನೋ ಒಂದು ರೀತಿಯ ಪುಳಕ. ಇನ್ನು ಅವರ ಮನೆಗೆ ಅವರಾಗೇ ಕರೆದಾಗ ನಮ್ಮ ಸಂಭ್ರಮಕ್ಕೆ ಎಣೆ ಇದ್ದೀತೇ...? ಎಡಿಟರ್ ವಿದ್ಯಾಧರ್ ಹೇಳಿದಂತೆ ಅವರಿಗೆ ಮೈಸೂರ್ ಪಾಕ್ ಕೊಂಡೊಯ್ದಿದ್ದೆವು. ಆ ದಿನ ಸ್ವಾತಂತ್ರ್ಯೋತ್ಸವದ ಸಂಭ್ರಮ. ಮಧ್ಯಾಹ್ನವೇ ಬರ ಹೇಳಿದ್ದರು. ನಾವು ಬಂದಿರುವ ವಿಚಾರ ಕೇಳಿ ನಿಧಾನವಾಗಿ ನಡೆದುಕೊಂಡು ಬಂದರು. ನನ್ನ ಕೈ ಹಿಡಿದುಕೊಂಡರು. ಸೋಫ಼ಾದ ಮೇಲೆ ಕುಳಿತುಕೊಳ್ಳಿ ಎಂದರೂ, ನಾವು ನೆಲದಲ್ಲಿ ಕುಳಿತುಕೊಂಡೆವು. ಅವರ ಪಾದದ ಬಳಿಯೇ ಕುಳಿತುಕೊಳ್ಳುವಾಗೆಲ್ಲ ಏನೋ ಹಿತ...ಪೋಸಿಟಿವ್ ವೈಬ್. ನಾವು ತಂದಿದ್ದ ಮೈಸೂರ್ ಪಾಕ್ ನ ತುಣುಕಿನ ರುಚಿನೋಡಿದರು. ಅವರಿಗೊಮ್ಮೆ ವಿಷಪ್ರಾಸನ ವಾದ ಮೇಲೆ, ಅವರು ತಿನ್ನುವ ಆಹಾರವನ್ನುಮನೆಯಲ್ಲಿ ಮೊದಲು ಬೇರೆಯವರು ತಿಂದು ಮತ್ತೆ ಅವರಿಗೆ ಕೊಡುತ್ತಿದ್ದರು. ಆದರೆ ಆ ಸಂಗೀತ ಸಾಮ್ರಾಜ್ನಿ ನಾವು ಕೊಟ್ಟ ಮೈಸೂರು ಪಾಕನ್ನು ಸ್ವತಃ ಸಣ್ಣ ತುಣುಕನ್ನು ಅಳುಕಿಲ್ಲದೆ ತಿಂದರು. ಜೊತೆಯಲ್ಲಿ ಹಬ್ಬದ ಊಟ. ಊಟದ ನಡುವೆ ಮಾತನಾಡುತ್ತಾ....ದೀದಿ ಆಪ್ ನೆ ಕನ್ನಡ ಮೆ ಭೀ ಏಕ್ ಗಾನ ಗಾಯಿ ತೆ ...ಅಂದಾಗ ಏಕ್ ನಹೀ...ಕನ್ನಡ್ ಮೆ ಚಾರ್ ಗಾನಾ ಗಾಯೀ ತಿ ಮೆ...ಎಂದು "ಬೆಳ್ಳನೆ ಬೆಳದಿಂಗಳು..." ಸೇರಿ ನಾಲ್ಕೂ ಹಾಡುಗಳ ತುಣುಕನ್ನು ಹಾಡಿದರು. ಐವತ್ತೈದು ಸಾವಿರಕ್ಕೊ ಮಿಕ್ಕಿ ಹಾಡುಗಳನ್ನು ಹಾಡಿದ್ದ ಸ್ವತಃ ಮಾತಾ ಸರಸ್ವತಿಯ ಅಪರಾವತಾರದಂತಿದ್ದ ಲತಾ ದೀದಿಗೆ ಅವರು ಹಾಡಿದ್ದ ಕನ್ನಡ ಹಾಡುಗಳು ಇನ್ನು ನೆನಪಿರುವುದನ್ನು ಕೇಳಿ ಹ್ರದಯ ತುಂಬಿ ಬಂತು.ಈ ಆಲ್ಬಂ ನಲ್ಲಿ ನೀವು ಹಾಡ ಬೇಕೆಂದಾಗ ನಿರಾಕರಿಸಲಿಲ್ಲ. ಆಶಾ, ಉಷಾ ಮತ್ತು ಝನೈ ಜೊತೆ ಖಂಡಿತಾ ನಾನೂ ಇದಕ್ಕೆ ಸ್ವರ ಸೇರಿಸುತ್ತೇನೆ ಎಂದರು.ಆಶಾ ಭೋಸ್ಲೆ ಮತ್ತು ಉಷಾ ಮಂಗೇಷ್ಕರ್ ಒತ್ತಾಯಿಸುತ್ತಿರುವುದನ್ನೂ ಹೇಳಿದರು.ಸಧ್ಯ ಮೆಡಿಕಲ್ ಟ್ರೀಟ್ಮೆಂಟ್ ನಲ್ಲಿದ್ದು, ಈ ಟ್ರೀಟ್ಮೆಂಟ್ ಮುಗಿದ ಕೂಡಲೇ ಹಾಡುವ ಭರವಸೆ ನೀಡಿದರು.ಜೊತೆಗೆ ಸಹೋದರಿ ಮೀನಾ ರ ಧ್ವನಿ ಯನ್ನೂ ಸೇರಿಸಬೇಕೆಂದು ಲತಾ ಜಿ ಹೇಳಿದರು. ಪಾರ್ಷ್ವ ವಾಯು ಪೀಡಿತರಾಗಿದ್ದ ಸಹೋದರ ಖ್ಯಾತ ಸಂಗೀತ ನಿರ್ದೇಶಕ ಹ್ರದಯನಾಥ್ ಮಂಗೇಷ್ಕರ್ ರನ್ನು ಪರಿಚಯಿಸಿದರು.ಲತಾ ಜಿಯವರು ತಂಗಿ ಉಷಾ ಮತ್ತು ಸಹೋದರ ಹ್ರದಯನಾಥ್ ಜೊತೆ ಒಂದೇ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು.
ಅಲ್ಲಿಂದ ಬೀಳ್ಕೊಂಡು, ಲತಾ ಜಿ ಹಾಡಲು ಒಪ್ಪಿಕೊಂಡ ವಿಚಾರವನ್ನು ಆಶಾ ಭೋಸ್ಲೆಯವರಿಗೆ ತಿಳಿಸಿದೆವು. ದೀದಿ ಹಾಡಲು ಒಪ್ಪಿಕೊಂಡಿರುವುದು ಬಹಳ ದೊಡ್ದ ವಿಚಾರ ಎಂದು ಆಶಾ ಜಿ ಹೆಮ್ಮೆಯಿಂದ ಹೇಳಿಕೊಂಡರು.ನನ್ನ ಮೊಮ್ಮಗಳು ಜ಼ನೈ ಕೂಡಾ ದೀದಿ ಜೊತೆ ಹಾಡುವಂತಾಯಿತಲ್ಲ....ಎಂದು ತುಂಬು ಹ್ರದಯತುಂಬಿ ಖುಷಿ ಪಟ್ಟುಕೊಂಡರು. ಇದಾದ ಕೆಲವು ದಿನಗಳಲ್ಲೇ ಸಂಭ್ರಮದ ಸಮಾರಂಭವೊಂದರಲ್ಲಿ ನನಗೂ ಉಷಾ ಮಂಗೇಶ್ಕರ್ ಜಿ ಗೂ ಮಂಗಳೂರಿನ ಕದ್ರಿ ದೇವಾಳದಲ್ಲಿ ಸನ್ಮಾನಿಸಲಾಯಿತು.ಕದ್ರಿ ದೇವಾಳವು ನಾಥ ಪಂಥತ ದೇವಸ್ಥಾನವೆಂದು ತಿಳಿದು ಉಷಾಜಿ ಕೂಡಲೇ ಲತಾ ಜಿ ಗೆ ಮತ್ತು ಆಶಾ ಜಿ ಗೆ ವಿಷಯ ತಿಳಿಸಿದರು. ಅವರ ಕುಲ ದೇವರು ಗೋವಾದ ಬಳಿ ಇರುವ ನಾಥ ಪಂಥಕ್ಕೆ ಸೇರಿರುವ "ಮಂಗೇಷ್ ನಾಥ". ಆದ್ದರಿಂದಲೇ ನಮಗೆ ಮಂಗೇಷ್ಕರ್ ಸರ್ ನೇಮ್ ಸೇರಿಕೊಂಡಿದೆ-ಎಂದರು. ದೇಶದ ಬಹುತೇಕ ಎಲ್ಲಾ ನಾಥ ಪಂಥದ ದೇವಸ್ಥಾನಗಳಿಗೆ ನಾವು ಭೇಟಿನೀಡಿದ್ದೆವು. ಆದರೆ ಮಂಗಳೂರಿನಲ್ಲಿನ ನಾಥ ಪಂಥಕ್ಕೆ ಸೇರಿರುರುವ ಮಂಜುನಾಥನ ದೇವಸ್ಥಾನಕ್ಕೆ ಭೇಟಿ ನೀಡಿರಲಿಲ್ಲ. ಅಲ್ಲದೆ ನಮ್ಮ ಮಂಗೇಷ್ಕರ್ ಪರಿವಾರದ ಯಾರು ಕೂಡಾ ಇದುವರೆಗೂ ಮಂಗಳೂರಿಗೆ ಬಂದಿಲ್ಲ ಎಂದು ಉಷಾ ರವರು ಧನ್ಯತಾ ಭವದಿಂದ ಹೇಳಿದರು.ಆ ಪಂಥದ ಆರಾಧನೆಗೆ ಒಳಪಟ್ಟಿರುವ ಮಂಗಳಾದೇವಿ ದೇವಸ್ಥಾನದಿಂದ ಲತಾ ಮಂಗೇಶ್ಕರ್ ಗೆ ಮತ್ತು ಆಶಾ ಭೋಸ್ಲೆಯವರಿಗೆ ದೇವಿಯ ಸೀರೆಯನ್ನು ಉಷಾ ರವರ ಮುಖಾಂತರ ನೀಡಲಾಯಿತು. ಆಶಾ ಜಿ ಕರೆ ಮಾಡಿ ದೇವಸ್ಥಾನವನ್ನು ಸಂದರ್ಶಿಸುವ ಇಂಗಿತ ವ್ಯಕ್ತ ಪಡಿಸಿದರು. ಲತಾ ಜಿಯನ್ನ್ ಕೂಡಾ ಕರೆದುಕೊಂಡು ಬರುವ ಇಚ್ಚೆಯನ್ನು ಉಷಾ ತೋಡಿಕೊಂಡರು...!
ಇದಾದ ಕೆಲ ದಿನಗಳಲ್ಲೇ ಒಕ್ಕರಿಸಿತು ಕೊರೋನಾ.....!! ಲತಾ ದೀದಿ ಆ ಸಮಯದಲ್ಲೆ ನಮ್ಮೆಲ್ಲರನ್ನು ಬಿಟ್ಟು ಸರಸ್ವತಿಯೊಂದಿಗೆ ಐಕ್ಯ ರಾದರು....! ಆಶಾ, ಉಷಾ ಮತ್ತು ಝನೈ ಜೊತೆ ಅವರು ಹಾಡಬೇಕೆಂಬ ಇಚ್ಚೆ ಈಡೇರಲಿಲ್ಲ. ವಿಧಿ ಬರಹವನ್ನು ಯರೂ ಬದಲಿಸಲು ಸಾಧ್ಯವಿಲ್ಲ ತಾನೇ...?
ಇನ್ನು ತಡ ಮಾಡ ಬಾರದು. ಆಶಾ ಭೋಸ್ಲೆ ಪ್ರೀತಿಯಿಂದ ಮೊಮ್ಮಗಳಿಗೆ ರೆಕಾರ್ಡಿಂಗ್ ಸಮಯದಲ್ಲಿ ಸ್ಟುಡಿಯೋದಲ್ಲೇ ತಿದ್ದಿ ತೀಡಿದ್ದ ಈ ಮ್ಯೂಸಿಕ್ ಆಲ್ಬಂ ಶೀಘ್ರವಾಗಿ ರಿಲೀಸ್ ಮಾಡುವ ಸಮಯ ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net