_1765993992182.webp?w=480&auto=format%2Ccompress&fit=max)
_1765993992182.webp?w=480&auto=format%2Ccompress&fit=max)
ರಾಜ್ಯದಲ್ಲಿ ಹುಲಿ, ಚಿರತೆಗಳ ಮಿತಿ ಮೀರಿದ ಉಪಟಳದಿಂದಾಗಿ ಇತ್ತೀಚೆಗೆ ಸಾವು-ನೋವು ಜಾಸ್ತಿಯಾಗಿದೆ. ಮೈಸೂರು, ಕೊಡಗು, ಚಾಮರಾಜನಗರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಹಾವೇರಿ ಮತ್ತಿತರ ಜಿಲ್ಲೆಗಳ ಕಾಡಂಚಿನ ಗ್ರಾಮಗಳಲ್ಲಿ ಇದು ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಅರಣ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಇನ್ನೊಂದೆಡೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ರಾಜ್ಯದ ಹಲವೆಡೆ ಕಾಡಾನೆಗಳ ಹಾವಳಿ ಜೋರಾಗಿದೆ. ಕಾಡುಪ್ರಾಣಿಗಳು ನಾಡಿಗೆ ಏಕೆ ದಾಂಗುಡಿ ಇಡುತ್ತಿವೆ? ಅದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳೇನು? ಅರಣ್ಯ ಇಲಾಖೆ ಈ ತೊಂದರೆ ನಿವಾರಿಸಲು ಕೈಗೊಳ್ಳುತ್ತಿರುವ ಕ್ರಮಗಳೇನು? ಇಲ್ಲಿದೆ ವಿಸõತ ಮಾಹಿತಿ.
ರಾಜ್ಯದ ವಿವಿಧೆಡೆ ಹುಲಿ, ಚಿರತೆಗಳ ದಾಳಿಯಿಂದ ಕಳೆದ 3 ವರ್ಷಗಳಲ್ಲಿ 20 ಜನ ಪ್ರಾಣ ಕಳೆದುಕೊಂಡಿರುವುದು ಆಘಾತಕಾರಿಯಾಗಿದೆ. ಪ್ರಸಕ್ತ ವರ್ಷದಲ್ಲೇ ನವೆಂಬರ್ ಅಂತ್ಯದವರೆಗೆ ಈ ಕಾಡುಪ್ರಾಣಿಗಳ ಹಾವಳಿಗೆ 9 ಜನ ಬಲಿಯಾಗಿದ್ದಾರೆ. ಬೇರೆ ಹಲವು ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆಯಾದರೂ, ರಾಷ್ಟ್ರೀಯ ಹುಲಿ ಯೋಜನೆ ವ್ಯಾಪ್ತಿಯ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲೇ ಈ ಹಾವಳಿ ವಿಪರೀತವಾಗಿದೆ. ಈ ವರ್ಷ ಮೈಸೂರು ಜಿಲ್ಲೆಯಲ್ಲಿ ಐವರು ಬಲಿಯಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಈ ಪ್ರಾಣಿಗಳಿಗೆ ಆಹಾರವಾಗಿದ್ದಾರೆ. 2023-24ರಲ್ಲಿ 8 ಮಂದಿ, 2024-25ರಲ್ಲಿ ಮೂವರು ಸೇರಿದಂತೆ ಕಳೆದ ಮೂರು ವರ್ಷಗಳಲ್ಲಿ 20 ಜನರನ್ನು ಇವು ಬಲಿ ಪಡೆದಿವೆ. ಪ್ರಾಣಿಗಳಿಗೆ ಬಲಿಯಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಕಾಡಂಚಿನ ಗ್ರಾಮಸ್ಥರು ಹೊಲದಲ್ಲಿ ಕೆಲಸ ಮಾಡುವಾಗ ಅಥವಾ ಜಾನುವಾರುಗಳನ್ನು ಮೇಯಿಸಲು ಹೋದಾಗ ಹುಲಿ, ಚಿರತೆಗಳು ದಾಳಿ ಮಾಡುತ್ತಿವೆ. ಆ ಸಮಯದಲ್ಲಿಯೇ ಜನರು ಅವುಗಳಿಗೆ ಸುಲಭದ ತುತ್ತಾಗುತ್ತಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ ತಲಾ 20 ಲಕ್ಷ ರೂ. ಪರಿಹಾರ ಮಾತ್ರವಲ್ಲದೆ, ಮಾಸಿಕ 4 ಸಾವಿರ ರೂಪಾಯಿಯಂತೆ 5 ವರ್ಷದ ಅವಧಿಗೆ ಮಾಸಾಶನವನ್ನೂ ಪಾವತಿಸುತ್ತಿದೆ.
ಒಂದೇ ಪ್ರದೇಶದಲ್ಲಿ ಸತತವಾಗಿ ಹುಲಿಗಳ ಸಂಖ್ಯೆ ಹೆಚ್ಚಾದಂತೆ ಅವುಗಳ ವಾಸಸ್ಥಳ ಕಡಿಮೆಯಾಗುತ್ತದೆ. ಇದರಿಂದಾಗಿ ಹುಲಿಗಳ ನಡುವೆ ಕಾದಾಟ ಏರ್ಪಟ್ಟು ಬಲಿಷ್ಠ ಹುಲಿಗಳು ಇಡೀ ಜಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಸೋತು ಗಾಯಗೊಂಡ, ವಯಸ್ಸಾದ ಹುಲಿಗಳು ಆ ಪ್ರದೇಶದಿಂದ ದೂರ ಹೋಗಬೇಕಾಗುತ್ತದೆ. ಈ ದುರ್ಬಲ ಹುಲಿಗಳು ಸುಲಭ ಬೇಟೆಯನ್ನು ಹುಡುಕಿಕೊಂಡು ಕಾಡಂಚಿನ ಗ್ರಾಮಗಳಿಗೆ ಬರುತ್ತವೆ. ಕೆಲವೊಮ್ಮೆ ಹುಲಿ ಮರಿಗಳು ಎರಡು ವರ್ಷ ಬೆಳೆದ ಬಳಿಕ ತಮ್ಮದೇ ಪ್ರದೇಶ ಗುರುತಿಸಿಕೊಳ್ಳುವ ಉದ್ದೇಶದಿಂದ ಕಾಡಿನ ಅಂಚಿಗೆ ಬರುತ್ತವೆ. ಹುಲಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಹೆಣ್ಣು ಹುಲಿಗಳು ಸಂತಾನೋತ್ಪತ್ತಿ ಬಳಿಕ ತಮ್ಮ ಮರಿಗಳನ್ನು ಇತರ ಗಂಡು ಹುಲಿಗಳಿಂದ ರಕ್ಷಿಸಿಕೊಳ್ಳಲು ಮೂಲ ಆವಾಸಸ್ಥಾನದಿಂದ ದೂರ ಬರುವುದೂ ಉಂಟು. ಅದಲ್ಲದೆ, ಅರಣ್ಯದಿಂದ ಕಾಡಂಚಿನ ಪ್ರದೇಶದಲ್ಲಿರುವ ಕೆರೆಕಟ್ಟೆ, ಹಳ್ಳಕೊಳ್ಳ, ಕಬ್ಬಿನ ಗದ್ದೆ, ಬಾಳೆತೋಟ, ನಾಲೆಬದುವಿನ ಗಿಡಗಂಟಿ ಪ್ರದೇಶಗಳಲ್ಲಿ ಸಂಚರಿಸುತ್ತ ಬೇಟೆಗಾಗಿ ಹುಡುಕಾಡುತ್ತವೆ.
ಹುಲಿ, ಚಿರತೆ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಂತ್ರಜ್ಞಾನದ ಮೊರೆ ಹೋಗಿದ್ದು, ಎಐ ಕ್ಯಾಮೆರಾ, ಡ್ಯಾಶ್ಬೋರ್ಡ್ ಮತ್ತು ಡ್ರೋನ್ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆಗೆ ಮುಂದಾಗಿದೆ.
ಗ್ರಾಮಗಳ ಬಳಿ ಬೀಡು ಬಿಟ್ಟ ಹುಲಿ-ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದೆ. ಕಳೆದ ಮೂರು ವರ್ಷದಲ್ಲಿ 374 ಹುಲಿ, ಚಿರತೆಗಳನ್ನು ಹಿಡಿಯಲಾಗಿದೆ. 2023-24ರಲ್ಲಿ 5 ಹುಲಿ, 131 ಚಿರತೆ, 2024-25ರಲ್ಲಿ 5 ಹುಲಿ, 138 ಚಿರತೆ ಸೆರೆ ಹಿಡಿಯಲಾಗಿದೆ. 2025-26ನೇ ಸಾಲಿನಲ್ಲಿ ನವೆಂಬರ್ವರೆಗೆ 12 ಮರಿಗಳು, 12 ಹುಲಿಗಳು, 71 ಚಿರತೆಗಳನ್ನು ಹಿಡಿಯಲಾಗಿದೆ. ಅವುಗಳನ್ನು ಮೃಗಾಲಯಗಳಿಗೆ, ಪುನರ್ವಸತಿ ಕೇಂದ್ರಗಳಿಗೆ ಕಳಿಸಲಾಗಿದೆ.
ರಾಜ್ಯದಲ್ಲಿ ಹುಲಿ, ಚಿರತೆ ಹಾವಳಿ ನಿಯಂತ್ರಣಕ್ಕೆ ವಿವಿಧ ಕ್ರಮ ತೆಗೆದುಕೊಳ್ಳಲಾಗಿದೆ. ಜಲ ಸಂಪನ್ಮೂಲ, ವಾಸಸ್ಥಳ ಅಭಿವೃದ್ಧಿ, ತ್ವರಿತ ಕಾರ್ಯಾಚರಣೆ, ಜನರಿಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಜತೆಗೆ, ಎಐ, ಡ್ರೋನ್ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ.
-ಈಶ್ವರ ಬಿ. ಖಂಡ್ರೆ ಅರಣ್ಯ ಸಚಿವ
ಹೊಲಗದ್ದೆಗಳು, ಪೊದೆಗಳು ಮತ್ತು ಅರೆನಗರ ಪ್ರದೇಶಗಳಲ್ಲೂ ಚಿರತೆಗಳು ವಾಸಿಸಬಲ್ಲವು. ಅಲ್ಲದೆ, ಸುಲಭವಾಗಿ ಆಹಾರ ದೊರೆಯುವ ಪ್ರದೇಶಗಳನ್ನೇ ಹೆಚ್ಚಾಗಿ ಅವಲಂಬಿಸಿ ವಾಸಿಸುವುದು ಅವುಗಳ ಸ್ವಭಾವ. ಅರಣ್ಯ ಪ್ರದೇಶಗಳಲ್ಲಿ ಮಾನವ ಚಟುವಟಿಕೆ (ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ, ಜಾನುವಾರು ಮೇಯಿಸುವಿಕೆ ಇತ್ಯಾದಿ) ಹೆಚ್ಚುತ್ತಿರುವುದೂ ಅವು ಕಾಡಿನಿಂದ ಹೊರಬರುವುದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹುಲಿ-ಚಿರತೆಗಳು ಒಂದೇ ಬೇಟೆಗಾಗಿ ಸ್ಪರ್ಧಿಸುತ್ತವೆ. ಹುಲಿಗಳ ಸಂಖ್ಯೆ ಹೆಚ್ಚಾಗಿರುವುದೂ ಚಿರತೆಗಳು ಕಾಡಿನಿಂದ ಹೊರಬರಲು ಮತ್ತೊಂದು ಕಾರಣ. ಹುಲಿಗಳಂತೆ ವಾಸಸ್ಥಳಕ್ಕಾಗಿ ಚಿರತೆಗಳೂ ಪರಸ್ಪರ ಕಾದಾಡುತ್ತವೆ. 2 ವರ್ಷದ ಬಳಿಕ ಮರಿಚಿರತೆಗಳು ತಮ್ಮದೇ ಆದ ವಾಸಸ್ಥಳ ಶೋಧಿಸುವ ಉದ್ದೇಶದಿಂದಲೂ ಅರಣ್ಯದಂಚಿಗೆ ಬರುತ್ತವೆ. ಚಿರತೆಗಳ ಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಹೆಣ್ಣು ಚಿರತೆಗಳು ಸಂತಾನೋತ್ಪತ್ತಿ ಬಳಿಕ ತಮ್ಮ ಮರಿಗಳನ್ನು ಇತರ ಗಂಡು ಚಿರತೆಗಳಿಂದ ರಕ್ಷಿಸಿಕೊಳ್ಳುವ ಉದ್ದೇಶದಿಂದಲೂ ವಾಸಸ್ಥಳದಿಂದ ನಿರ್ಗಮಿಸಿ ಕಾಡಂಚಿನ ಗ್ರಾಮಳತ್ತ ಬರುತ್ತವೆ.
ಹುಲಿ, ಚಿರತೆಗಳು ನಾಡಿನತ್ತ ಬರದಂತೆ ನೋಡಿಕೊಳ್ಳಲು ಇಲಾಖೆ ಮಾಡಿರುವ ಪ್ರಯತ್ನಗಳು ಇಂತಿವೆ.
ರಕ್ಷಿತಾರಣ್ಯ, ರಾಷ್ಟ್ರೀಯ ಉದ್ಯಾನ ಮುಂತಾದೆಡೆ ಮಾನವ-ವನ್ಯಜೀವಿ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಾಡಂಚಿನಲ್ಲಿ ಜನವಸತಿ ಪ್ರದೇಶಗಳು ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎನ್ನುವವರು ಒಂದೆಡೆಯಾದರೆ, ವನ್ಯಜೀವಿಗಳ ದಾಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎನ್ನುವ ವಾದವೂ ಇದೆ. ಕಳೆದ 3 ತಿಂಗಳಲ್ಲಿ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ಮತ್ತು ಜೀವಹಾನಿ ತಾರಕಕ್ಕೇರಿದೆ.
ಕಾಡಿನ ಗಡಿ ದಾಟದಂತೆ ತಡೆ: ಅರಣ್ಯ ಇಲಾಖೆ ಇದೀಗ ಫಾಮರ್್ಗಾರ್ಡ್ ಯೋಜನೆ ಜಾರಿಗೊಳಿಸಿದೆ. ಕಾಡಿನಿಂದ ಹೊರಬರಲು ಯತ್ನಿಸುವ ಆನೆಗಳನ್ನು ನಿಯಂತ್ರಿಸಲು ಎಐ (ಕೃತಕ ಬುದ್ಧಿಮತ್ತೆ) ಕ್ಯಾಮರಾ ಕಣ್ಣುಗಳು ಅರಣ್ಯರಕ್ಷಕನಾಗಿ ಕಾರ್ಯನಿರ್ವಹಿಸಲಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ವ್ಯಾಪ್ತಿಯ ಬೊಮ್ಮಲಾಪುರ ಹಾಡಿಯ ಗಡಿಯಲ್ಲಿ ಎಐ ಕ್ಯಾಮರಾ ಅಳವಡಿಸಲಾಗಿದ್ದು, ಈ ಕ್ಯಾಮರಾದಲ್ಲಿ ಪ್ರಸ್ತುತ ಕಾಡಿನಿಂದ ಹೊರಬರುವ ಆನೆಗಳನ್ನು ಮಾತ್ರ ಗುರುತಿಸುವಂತೆ ತಂತ್ರಜ್ಞಾನ ಬಳಸಲಾಗಿದೆ. ಕಾಡಾನೆ ಹೊರಬರುವುದು ಗೊತ್ತಾಗುತ್ತಲೇ ಕ್ಯಾಮರಾದಿಂದ ವಿಚಿತ್ರ ಶಬ್ದಗಳು ಹೊರಬರಲು ಆರಂಭಿಸುತ್ತವೆ. ಪಟಾಕಿ ಸಿಡಿಸಿದ ಸದ್ದು, ಜನರು ಜೋರಾಗಿ ಕಿರುಚಿಕೊಳ್ಳುವ, ಗುಡುಗು ಸಿಡಿಲು ಹೊಡೆದಂತೆ, ಜೇನುನೊಣಗಳು ಗುಯ್ಗುಡುತ್ತಾ ದಾಳಿಯಿಡುವ... ಹೀಗೆ ತರಹೇವಾರಿ ಶಬ್ದಗಳನ್ನು ಪ್ರತಿಬಾರಿಯೂ ಬೇರೆ ಬೇರೆ ರೀತಿಯಲ್ಲಿ ಹೊರಡಿಸಲು ಆರಂಭಿಸುತ್ತದೆ. ಆನೆಗಳು ಹೆದರುವ ಶಬ್ದಗಳನ್ನೂ ಅಳವಡಿಸಲಾಗಿದೆ. ಇದರಿಂದಾಗಿ ಆನೆಗಳು ಕಾಡಿನಿಂದ ಹೊರಬರದೆ ಮರಳಿ ಕಾಡಿನೊಳಗೆ ಹೋಗುತ್ತಿವೆ.
ಫಾಮರ್್ಗಾರ್ಡ್ ತಂತ್ರಜ್ಞಾನ ಅಳವಡಿಕೆಯ ಸ್ಥಳವೂ ವಿಶೇಷವಾಗಿರುತ್ತದೆ. ಆನೆ ಕಂದಕ, ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿಬೇಲಿ ಮುಂತಾದ ಯಾವುದೇ ಸಾಧನಗಳ ಅಳವಡಿಕೆ ಸಾಧ್ಯವಿಲ್ಲ ಎನ್ನುವ ಸ್ಥಳದಲ್ಲಿ ಮಾತ್ರ ಈ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಲಕ್ಷ ರೂ.ಗಿಂತ ಅಧಿಕ ಮೊತ್ತ ಇದಕ್ಕೆ ವ್ಯಯವಾಗುತ್ತಿದೆ. ಎಐ ಕ್ಯಾಮರಾವನ್ನು ಬೊಮ್ಮಲಾಪುರ ಹಾಡಿಯ ಗಡಿಯಲ್ಲಿ ಅಳವಡಿಸಿದ ನಂತರ ಈವರೆಗೆ ಆನೆಗಳು ದಾಟಿ ಬಂದಿಲ್ಲ ಎನ್ನುವುದು ಗಮನಾರ್ಹ. ಉತ್ತರಪ್ರದೇಶದ ಪಿಲಿಭಿತ್ನಲ್ಲಿ ಕಬ್ಬಿನ ಗದ್ದೆ ದಟ್ಟವಾಗಿ ಬೆಳೆದು ಹುಲಿಗಳು ಅವಿತುಕೊಳ್ಳಲು ಸಹಕಾರಿಯಾಗಿದ್ದು, ಕೃಷಿ ಕಾರ್ಯದಲ್ಲಿ ತೊಡಗಿರá-ವ ರೈತರು ಹುಲಿ ದಾಳಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಲಿ ರಕ್ಷಿತಾರಣ್ಯದ ಗಡಿಯಲ್ಲಿನ ಕಬ್ಬು ಬೆಳೆಗಾರರು ತಮ್ಮ ಜಮೀನಿನಲ್ಲಿ ಮೈಕ್ ಅಳವಡಿಸಿ ದೊಡ್ಡ ಶಬ್ದದೊಂದಿಗೆ ಹಾಡು ಹಾಕಿಕೊಂಡು ಕಬ್ಬು ನಾಟಿ ಮಾಡುತ್ತಾರೆ. ಇದರಿಂದ ಹುಲಿಗಳು ಕಬ್ಬಿನ ಗದ್ದೆಗೆ ಬರುವುದು ನಿಂತಿದೆ ಎನ್ನುತ್ತಾರೆ ಅಧಿಕಾರಿಗಳು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಒಂದು ಕಡೆ ಫಾಮರ್್ಗಾರ್ಡ್ ಯೋಜನೆ ಜಾರಿಯಾಗಿದೆ. ಮೊದಲ ಹಂತವಾಗಿ ಆನೆಗಳನ್ನು ಮಾತ್ರ ಗುರುತಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಸ್ಥಳಗಳಲ್ಲಿಯೂ ಅಳವಡಿಸಲಾಗುವುದು.
-ಪಿ.ಎ. ಸೀಮಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಹುಣಸೂರು