ಸಿಎಂ ಗಾದಿ ಪಲ್ಲಟದ ಹಾದಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕರ್ನಾಟಕದ ರಾಜಕೀಯ ಇತಿಹಾಸವು ತೀವ್ರ ಪೈಪೋಟಿ, ಮೈತ್ರಿ ಪ್ರಯೋಗಗಳು ಮತ್ತು ಪದೇಪದೆ ಬದಲಾಗುವ ರಾಜಕೀಯ ಸಮೀಕರಣಗಳಿಗೆ ಹೆಸರುವಾಸಿಯಾಗಿದೆ. ಆಡಳಿತಾತ್ಮಕವಾಗಿ ಹಾಗೂ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ಕರ್ನಾಟಕ ಇದೀಗ ರಾಜಕೀಯ ನಾಯಕತ್ವದ ಬದಲಾವಣೆಯ ವೇಗದಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸರಿಸಮಾನವಾದ ಸ್ಥಾನದಲ್ಲಿ ಬಂದು ನಿಂತಿದೆ. ಸ್ವಾತಂತ್ರ್ಯದ ನಂತರ ರಾಜ್ಯದಲ್ಲಿ ಒಟ್ಟು 24 ವ್ಯಕ್ತಿಗಳು ಸಿಎಂ ಹುದ್ದೆ ಅಲಂಕರಿಸಿದ್ದಾರೆ. ಮುಖ್ಯಮಂತ್ರಿತ್ವದ ಅವಧಿಗಳು 34ಕ್ಕೆ ತಲುಪಿವೆ. 6 ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ದೇಶದ ಆರ್ಥಿಕ ನಕ್ಷೆಯಲ್ಲಿ ಕರ್ನಾಟಕಕ್ಕೆ ಅತ್ಯಂತ ಪ್ರಮುಖ ಹಾಗೂ ಗೌರವಾನ್ವಿತ ಸ್ಥಾನವಿದೆ. ತಂತ್ರಜ್ಞಾನ, ನಾವೀನ್ಯತೆ, ಕೈಗಾರಿಕೀಕರಣ ಮತ್ತು ಆಡಳಿತಾತ್ಮಕ ಸುಧಾರಣೆಗಳಲ್ಲಿ ಕರ್ನಾಟಕ ಯಾವತ್ತೂ ಮುಂಚೂಣಿ ರಾಜ್ಯಗಳ ಸಾಲಿನಲ್ಲಿದೆ. ಈ ಸ್ಥಿರತೆಯ ಹಿಂದೆ ಅತ್ಯಂತ ತೀವ್ರವಾದ ರಾಜಕೀಯ ಪೈಪೋಟಿ, ಅಸ್ಥಿರತೆ ಮತ್ತು ಪದೇಪದೆ ಬದಲಾಗುವ ನಾಯಕತ್ವದ ಸುದೀರ್ಘ ಇತಿಹಾಸವೇ ಅಡಗಿದೆ. ಸ್ವಾತಂತ್ರ್ಯಾನಂತರದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ರಾಜಕೀಯವಾಗಿ ಅತ್ಯಂತ ಸೂಕ್ಷ್ಮ ಹಾಗೂ ಏರಿಳಿತಗಳಿಂದ ಕೂಡಿದ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳೊಂದಿಗೆ, ಕರ್ನಾಟಕವು ಮುಖ್ಯಮಂತ್ರಿಗಳ ಬದಲಾವಣೆಯ ವೇಗದಲ್ಲಿ ದೇಶದ ಅತಿ ದೊಡ್ಡ ಮತ್ತು ಸದಾ ರಾಜಕೀಯ ಬಿಕ್ಕಟ್ಟಿಗೆ ಹೆಸರಾಗಿದ್ದ ಉತ್ತರಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳ ಸಾಲಿಗೆ ಬಂದು ನಿಂತಿರುವುದು ಆಶ್ಚರ್ಯವಾದರೂ ಸತ್ಯ.

ಅಚ್ಚರಿಯ ಅಂಶ

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಅವಧಿಗಳ ಒಟ್ಟು ಸಂಖ್ಯೆ 34ಕ್ಕೆ ತಲುಪಿದೆ. ಇದು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮುಖ್ಯಮಂತ್ರಿತ್ವದ ಅವಧಿಗಳಿಗೆ ಸಮಾನವಾಗಿದೆ. ಉತ್ತರ ಪ್ರದೇಶದಲ್ಲಿ ಇದುವರೆಗೆ 34 ಮುಖ್ಯಮಂತ್ರಿ ಅವಧಿಗಳಾಗಿದ್ದು, ಅಲ್ಲಿ 22 ವ್ಯಕ್ತಿಗಳು ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಬಿಹಾರದಲ್ಲೂ 34 ಮುಖ್ಯಮಂತ್ರಿ ಅವಧಿಗಳಾಗಿದ್ದು, ಒಟ್ಟು 24 ವ್ಯಕ್ತಿಗಳು ಸಿಎಂ ಆಗಿದ್ದಾರೆ. ಕರ್ನಾಟಕದಲ್ಲೂ ಈಗ 34ನೇ ಮುಖ್ಯಮಂತ್ರಿ ಅವಧಿ ದಾಖಲಾಗುತ್ತಿದ್ದು, ಇದುವರೆಗೆ ಒಟ್ಟು 24 ವ್ಯಕ್ತಿಗಳು ಈ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದಿದ್ದ ರಾಜ್ಯಗಳ ನಾಯಕತ್ವದ ಅಸ್ಥಿರತೆಯು ಆಡಳಿತಾತ್ಮಕವಾಗಿ ಅತ್ಯಂತ ಶಿಸ್ತುಬದ್ಧ ಎನಿಸಿಕೊಂಡ ಕರ್ನಾಟಕದಲ್ಲೂ ಕಾಣಿಸುತ್ತಿರುವುದು ರಾಜಕೀಯ ವಿಶ್ಲೇಷಕರಲ್ಲಿ ಅಚ್ಚರಿ ಮೂಡಿಸಿದೆ.

ನಾಯಕತ್ವ ಪಲ್ಲಟದ ಇತಿಹಾಸ

ರಾಜ್ಯಕ್ಕೆ ಮೈಸೂರು ಎಂಬ ಹೆಸರು ಇದ್ದ ಕಾಲದಿಂದ ಹಿಡಿದು ಈಗಿನವರೆಗೆ ರಾಜಕಾರಣ ಹಲವು ಪ್ರಮುಖ ಘಟ್ಟಗಳನ್ನು ದಾಟಿ ಬಂದಿದೆ. ಆರಂಭಿಕ ದಶಕಗಳಲ್ಲಿ ಕಾಂಗ್ರೆಸ್​ನ ಏಕಸ್ವಾಮ್ಯವಿದ್ದರೂ, ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಪ್ರಾದೇಶಿಕ ಸಮೀಕರಣಗಳು ನಾಯಕತ್ವದ ಬದಲಾವಣೆಗೆ ಪ್ರಮುಖ ಕಾರಣವಾದವು. ಕೆ. ಚೆಂಗಲರಾಯ ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಅವರಂತಹ ಆರಂಭಿಕ ನಾಯಕರಿಂದ ಹಿಡಿದು ಏಕೀಕರಣದ ರೂವಾರಿಗಳಲ್ಲೊಬ್ಬರಾದ ಎಸ್. ನಿಜಲಿಂಗಪ್ಪ ಅವರವರೆಗೆ ನಾಯಕತ್ವ ಬದಲಾವಣೆಗಳು ಹೆಚ್ಚಾಗಿ ಸಾಂಸ್ಥಿಕ ಮತ್ತು ಪ್ರಾದೇಶಿಕ ಸಮತೋಲನಕ್ಕಾಗಿ ನಡೆದವು. ಕಾಲಕ್ರಮೇಣ ರಾಜಕೀಯ ಮಹತ್ವಾಕಾಂಕ್ಷೆಗಳು ತೀವ್ರಗೊಂಡಂತೆ ಮುಖ್ಯಮಂತ್ರಿಗಳ ಬದಲಾವಣೆಯ ವೇಗವೂ ಹೆಚ್ಚಾಯಿತು. ಮುಂದಿನ ದಶಕಗಳಲ್ಲಿ ಕೇವಲ ಒಂದು ಅವಧಿಯನ್ನು ಪೂರ್ಣಗೊಳಿಸುವುದು ಕೂಡ ಮುಖ್ಯಮಂತ್ರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಇಲ್ಲಿಯವರೆಗೆ ರಾಜ್ಯ 33 ಮುಖ್ಯಮಂತ್ರಿತ್ವದ ಅವಧಿಗಳನ್ನು ಕಂಡಿದ್ದು, 23 ವ್ಯಕ್ತಿಗಳು ಮುಖ್ಯಮಂತ್ರಿ ಗಳಾಗಿದ್ದಾರೆ. ಡಿ.ಕೆ. ಶಿವಕುಮಾರ್ 24ನೆಯವರು. ಅವರ ಮುಖ್ಯಮಂತ್ರಿತ್ವದ ಅವಧಿ 34ನೆಯದು.

ಎಂಬತ್ತರ ದಶಕದಲ್ಲಿ ಸ್ಥಿತ್ಯಂತರ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ 1980ರ ದಶಕವು ಸ್ಥಿತ್ಯಂತರಕ್ಕೆ ಸಾಕ್ಷಿಯಾಯಿತು. ಅಲ್ಲಿಯವರೆಗೆ ಕಾಂಗ್ರೆಸ್​ನ ಭದ್ರಕೋಟೆಯಾಗಿದ್ದ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು. ಜನತಾ ಪರಿವಾರದ ಉದಯ ಮತ್ತು ರಾಮಕೃಷ್ಣ ಹೆಗಡೆ ಅವರ ನಾಯಕತ್ವ ರಾಜ್ಯ ರಾಜಕೀಯಕ್ಕೆ ಹೊಸ ಆಯಾಮ ನೀಡಿತು. ಈ ಅವಧಿಯಲ್ಲಿ ಪ್ರಾದೇಶಿಕ ಶಕ್ತಿಗಳು ಮತ್ತು ಮೈತ್ರಿ ರಾಜಕಾರಣದ ಪ್ರಯೋಗಗಳು ಮುನ್ನೆಲೆಗೆ ಬಂದವು. ಆದರೆ, ಇದೇ ಸಂದರ್ಭದಲ್ಲಿ ಪಕ್ಷಾಂತರ, ಆಂತರಿಕ ಕಲಹ ಮತ್ತು ಅಧಿಕಾರಕ್ಕಾಗಿ ನಡೆದ ತೀವ್ರ ಪೈಪೋಟಿಯಿಂದಾಗಿ ಸರ್ಕಾರಗಳು ಅಸ್ಥಿರಗೊಳ್ಳಲು ಪ್ರಾರಂಭಿಸಿದವು. ಭಿನ್ನಮತೀಯ ಚಟುವಟಿಕೆಗಳು ಎಷ್ಟು ತೀವ್ರವಾಗಿದ್ದವೆಂದರೆ, ಒಂದೇ ಪಕ್ಷ ಅಧಿಕಾರದಲ್ಲಿದ್ದರೂ ಮುಖ್ಯಮಂತ್ರಿ ಗಳನ್ನು ಬದಲಾಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಇದು ರಾಜ್ಯವನ್ನು ಪದೇಪದೆ ರಾಜಕೀಯ ಅನಿಶ್ಚಿತತೆಗೆ ತಳ್ಳಿತು.

ಅಸ್ಥಿರತೆ ಮಧ್ಯೆಯೂ ಆರ್ಥಿಕ ಸ್ಥಿರತೆ

ಇಷ್ಟೆಲ್ಲ ರಾಜಕೀಯ ಏರಿಳಿತ, ಮುಖ್ಯಮಂತ್ರಿಗಳ ಬದಲಾವಣೆಗಳ ನಡುವೆಯೂ ಕರ್ನಾಟಕ ಒಂದು ವಿಶಿಷ್ಟ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ರಾಜಕೀಯ ಅಸ್ಥಿರತೆ ರಾಜ್ಯದ ಆರ್ಥಿಕ ಅಭಿವೃದ್ಧಿ ಅಥವಾ ಸಾಂಸ್ಥಿಕ ಮುನ್ನಡೆಗೆ ಅಡ್ಡಿಯಾಗಿಲ್ಲ. ಬೆಂಗಳೂರು ಜಾಗತಿಕ ಮಟ್ಟದ ತಂತ್ರಜ್ಞಾನದ ರಾಜಧಾನಿಯಾಗಿ ಬೆಳೆದಿರುವುದು, ವಿದೇಶಿ ಹೂಡಿಕೆಯನ್ನು ಆಕರ್ಷಿಸುವಲ್ಲಿ ಸದಾ ಮುಂದಿರುವುದು ಇದಕ್ಕೆ ಸಾಕ್ಷಿ. ರಾಜಕೀಯವಾಗಿ ಎಷ್ಟೇ ಬಿಕ್ಕಟ್ಟುಗಳಿದ್ದರೂ, ರಾಜ್ಯದ ಆಡಳಿತಾತ್ಮಕ ನೀತಿಗಳು ಮತ್ತು ಸುಧಾರಣೆಗಳು ನಿರಂತರವಾಗಿ ಸಾಗುತ್ತ ಬಂದಿವೆ. ರಾಜಕೀಯ ತಲ್ಲಣಗಳನ್ನು ಜೀರ್ಣಿಸಿಕೊಂಡು ಸಾಂಸ್ಥಿಕ ನಿರಂತರತೆಯನ್ನು ರಾಜ್ಯ ಕಾಪಾಡಿಕೊಂಡಿದೆ.

ಪೂರ್ಣಾವಧಿ ಮುಗಿಸಿದವರು ವಿರಳ

ರಾಜ್ಯದ ರಾಜಕೀಯ ಇತಿಹಾಸದಲ್ಲಿ 5 ವರ್ಷಗಳ ಪೂರ್ಣ ಅವಧಿಯನ್ನು ಪೂರೈಸಿದ ಮುಖ್ಯಮಂತ್ರಿಗಳ ಸಂಖ್ಯೆ ಅತ್ಯಂತ ವಿರಳ. ಅರವತ್ತರ ದಶಕದಲ್ಲಿ ಎಸ್. ನಿಜಲಿಂಗಪ್ಪ, ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಪೂರ್ಣಾವಧಿ ಮುಗಿಸಿದ್ದರು. ನಂತರ ಸುಮಾರು 4 ದಶಕಗಳ ಕಾಲ ಯಾವುದೇ ಮುಖ್ಯಮಂತ್ರಿಗೂ ಐದು ವರ್ಷ ಸತತವಾಗಿ ಅಧಿಕಾರದಲ್ಲಿರಲು ಸಾಧ್ಯವಾಗಲಿಲ್ಲ. 2013ರಿಂದ 2018ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿದರು. ಈ ಮೂವರನ್ನು ಹೊರತುಪಡಿಸಿದರೆ, ಉಳಿದೆಲ್ಲ ನಾಯಕರು ರಾಜಕೀಯ ಒತ್ತಡ, ಭಿನ್ನಮತ, ಚುನಾವಣಾ ಸೋಲು ಅಥವಾ ಇನ್ಯಾವುದೋ ಕಾರಣದಿಂದಾಗಿ ಅವಧಿಗೂ ಮುನ್ನವೇ ನಿರ್ಗಮಿಸಬೇಕಾಯಿತು.

ಪ್ರಜಾಪ್ರಭುತ್ವದ ವಿಕಾಸಕ್ಕೆ ನಾಂದಿ

ರಾಜ್ಯದ ರಾಜಕೀಯ ನಾಯಕತ್ವದ ಈ ನಿರಂತರ ಬದಲಾವಣೆ ಪ್ರಜಾಪ್ರಭುತ್ವದ ವಿಕಾಸದ ದ್ಯೋತಕವೂ ಹೌದು. ತೀವ್ರ ಪೈಪೋಟಿ, ಪ್ರಾದೇಶಿಕ ಸಮೀಕರಣಗಳು ಮತ್ತು ಮತದಾರರ ಜಾಗೃತಿ ಯಾವುದೇ ಒಬ್ಬ ನಿರ್ದಿಷ್ಟ ನಾಯಕ ಅಥವಾ ಒಂದು ಪಕ್ಷ ಸುದೀರ್ಘ ಕಾಲದವರೆಗೆ ಸರ್ವಾಧಿಕಾರ ಚಲಾಯಿಸದಂತೆ ತಡೆದಿದೆ. ಅಧಿಕಾರ ಯಾವುದೇ ಒಂದು ವರ್ಗ ಅಥವಾ ಕುಟುಂಬದ ಕೈಯಲ್ಲಿ ಕೇಂದ್ರೀಕೃತವಾಗದೆ, ನಿರಂತರವಾಗಿ ವಿಕೇಂದ್ರೀಕರಣ ಆಗಿರುವುದಕ್ಕೆ ಈ ಪಲ್ಲಟಗಳೇ ಸಾಕ್ಷಿ. ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಸಿಎಂಗಳ ಸಂಖ್ಯೆಯಲ್ಲಿ ಸಮನಾಗಿದ್ದರೂ, ಆಡಳಿತಾತ್ಮಕ ದಕ್ಷತೆಯಲ್ಲಿ ಕರ್ನಾಟಕ ತನ್ನದೇ ಆದ ವಿಶಿಷ್ಟ ಪಥವನ್ನು ಕಾಯ್ದುಕೊಂಡಿದೆ.

ರಾಷ್ಟ್ರಪತಿ ಆಳ್ವಿಕೆಯ ನೆರಳು

ರಾಜಕೀಯ ಅಸ್ಥಿರತೆ ತುತ್ತತುದಿಗೆ ತಲುಪಿದಾಗ ರಾಜ್ಯವು ರಾಷ್ಟ್ರಪತಿ ಆಳ್ವಿಕೆಗೆ ಒಳಪಡಬೇಕಾಯಿತು. ಕರ್ನಾಟಕದ ಇತಿಹಾಸದಲ್ಲಿ ಒಟ್ಟು 6 ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಈ ಎಲ್ಲ ಸಂದರ್ಭಗಳು ರಾಜ್ಯದ ರಾಜಕೀಯ ಬಿಕ್ಕಟ್ಟಿನ ಆಳವನ್ನು ಪ್ರತಿಬಿಂಬಿಸುತ್ತವೆ. 1971-72, 1977-78, 1989, 1990, 2007 ಮತ್ತು 2008 ಇವು ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ವರ್ಷಗಳು. ಬಹುಮತದ ಕೊರತೆ, ಮೈತ್ರಿ ಸರ್ಕಾರಗಳ ಪತನ, ಪಕ್ಷದೊಳಗಿನ ತೀವ್ರ ಭಿನ್ನಮತ ಮತ್ತು ಪಕ್ಷಾಂತರಗಳ ಕಾರಣದಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳು ಪತನಗೊಂಡಾಗ ಸಂವಿಧಾನದ 356ನೇ ವಿಧಿಯನ್ನು ಬಳಸಲಾಯಿತು. ಇದು ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಕಂಡುಬರುವ ರಾಜಕೀಯ ಬಿಕ್ಕಟ್ಟಿನ ಮಾದರಿಯನ್ನೇ ಹೋಲುತ್ತದೆ.

ಸಮ್ಮಿಶ್ರ ಸರ್ಕಾರಗಳ ಪರ್ವ

ರಾಜ್ಯದ ರಾಜಕೀಯ ಇತಿಹಾಸದಲ್ಲೇ 2004ರಿಂದ 2013ರವರೆಗಿನ ಅವಧಿ ಅತ್ಯಂತ ಗೊಂದಲಮಯ ಮತ್ತು ಅಸ್ಥಿರತೆಯ ಸಮಯ. 2004ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಹೋದಾಗ, ರಾಜ್ಯ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಸಮ್ಮಿಶ್ರ ಸರ್ಕಾರದ ಪ್ರಯೋಗಕ್ಕೆ ಸಾಕ್ಷಿಯಾಯಿತು. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದವಾದರೂ, ಪರಸ್ಪರ ಅಪನಂಬಿಕೆಯಿಂದಾಗಿ ಅದು ದೀರ್ಘಕಾಲ ಬಾಳಲಿಲ್ಲ. ನಂತರ ನಡೆದ ಜೆಡಿಎಸ್-ಬಿಜೆಪಿ ನಡುವಿನ 20-20 ತಿಂಗಳ ಅಧಿಕಾರ ಹಂಚಿಕೆಯ ಒಪ್ಪಂದವು ದೇಶದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೈಡ್ರಾಮಾಗಳಿಗೆ ಸಾಕ್ಷಿಯಾಯಿತು. ಕೊನೆಗೆ ಅಧಿಕಾರ ಹಸ್ತಾಂತರಕ್ಕೆ ಜೆಡಿಎಸ್ ನಿರಾಕರಿಸಿದಾಗ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. 2008ರಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೂ, 5 ವರ್ಷಗಳ ಅವಧಿಯಲ್ಲಿ ರಾಜ್ಯ ಒಟ್ಟು ಮೂವರು ಮುಖ್ಯಮಂತ್ರಿಗಳನ್ನು ನೋಡಬೇಕಾಯಿತು (ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್).

ಅತಿ ಕಡಿಮೆ ಬದಲಾವಣೆ ಎಲ್ಲೆಲ್ಲಿ?

ದೊಡ್ಡ ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳ ಕಳೆದ 8 ದಶಕಗಳಲ್ಲಿ ಕೇವಲ 20 ಮುಖ್ಯಮಂತ್ರಿ ಅವಧಿಗಳನ್ನು ಕಂಡಿದ್ದು, 9 ವ್ಯಕ್ತಿಗಳು ಮಾತ್ರ ಅಲ್ಲಿ ಸಿಎಂ ಹುದ್ದೆ ಅಲಂಕರಿಸಿದ್ದಾರೆ. ಇದು ಅಲ್ಲಿನ ದೀರ್ಘಕಾಲದ ಪಕ್ಷದ ಪ್ರಾಬಲ್ಯಕ್ಕೆ ಸಾಕ್ಷಿ. ತಮಿಳುನಾಡು ಮತ್ತು ಒಡಿಶಾ ತಲಾ 24 ಮುಖ್ಯಮಂತ್ರಿ ಅವಧಿಗಳನ್ನು ಹೊಂದುವ ಮೂಲಕ ಕರ್ನಾಟಕಕ್ಕಿಂತ ಹೆಚ್ಚಿನ ರಾಜಕೀಯ ಸ್ಥಿರತೆಯನ್ನು ಪ್ರದರ್ಶಿಸಿವೆ. ದೇಶದ ಕೆಲವು ಸಣ್ಣ ರಾಜ್ಯಗಳು ಮತ್ತು ಇತ್ತೀಚೆಗೆ ರಚನೆಯಾದ ರಾಜ್ಯಗಳು ಅತ್ಯಂತ ಕಡಿಮೆ ಮುಖ್ಯಮಂತ್ರಿ ಬದಲಾವಣೆಯನ್ನು ಕಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net