ಮರೀಚಿಕೆಯಾದ ಏತ ನೀರಾವರಿ ಬಿ ಸ್ಕೀಮ್

ಹಟ್ಟಿಚಿನ್ನದ ಗಣಿ ಕಂಪನಿಯ ಹಿಂಭಾಗದಲ್ಲಿ ಅರ್ಧಕ್ಕೆ ನಿಂತಿರುವ ನವಲಿ-ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ಕಾಮಗಾರಿ.
ಹಟ್ಟಿಚಿನ್ನದ ಗಣಿ ಕಂಪನಿಯ ಹಿಂಭಾಗದಲ್ಲಿ ಅರ್ಧಕ್ಕೆ ನಿಂತಿರುವ ನವಲಿ-ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ಕಾಮಗಾರಿ.
Published on

ಪ್ರಮುಖ ಮುಖ್ಯಾಂಶಗಳು

  • ನುಚ್ಚುನೂರಾದ ರೈತರ ಕನಸು
  • ಬಿಸಿಲಲ್ಲೆ ಕರಗಿದ 100 ಕೋಟಿ ರೂ. ಯೋಜನೆ
ಹಟ್ಟಿಚಿನ್ನದಗಣಿ: ಸಾವಿರಾರು ಎಕರೆ ಜಮೀನಿಗೆ ಜೀವನಾಡಿಯಾಗಬೇಕಿದ್ದ ನವಲಿ-ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಬಿ ಸ್ಕೀಮ್ ಶುರುವಾಗಿ ದಶಕವೇ ಕಳೆದರೂ ಪೂರ್ಣಗೊಳ್ಳದಿರುವುದರಿಂದ ರೈತರ ಕನಸು ನುಚ್ಚುನೂರಾಗುತ್ತಿದೆ.  
2013-14ರಲ್ಲಿಯೇ ಭಾಗಶಃ ಕಾಮಗಾರಿ ಪೂರ್ಣಗೊಂಡಿದ್ದರೂ, ಸುಮಾರು 6 ಕಿ.ಮೀ. ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಯೋಜನೆ ಯಾವಾಗ ಮುಗಿಯುತ್ತದೆ ಎಂದು ಅನ್ನದಾತರು ಚಾತಕ ಪಕ್ಷಿಯಂತೆ ಕಾಯುವಂತಾಗಿದ್ದು, ಈ ಭಾಗದ ರೈತರಿಗೆ ನೀರಾವರಿ ಎಂಬುದು ಈಗಲೂ ಮರೀಚಿಕೆಯಾಗಿದೆ. 
ಮೂರನೇ ಹಂತದಲ್ಲಿ ಪೂರ್ವ ಶಾಖಾ ಕಾಲುವೆ 20ರಿಂದ 27ಕಿ.ಮೀ. ಹಾಗೂ 27ರಿಂದ 35.54 ಕಿ.ಮೀ. ವರೆಗಿನ ಕೊನೆಯ ಭಾಗದ ವಿತರಣಾ ಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 19 ವಿತರಣಾ ನಾಲೆಗಳು, 10ಕ್ಕೂ ಹೆಚ್ಚು ಲ್ಯಾಟರಲ್ಸ್, ಹೊಲಗಾಲುವೆಗಳೊಂದಿಗೆ ಈ ಯೋಜನೆಗೆ ರೂ. 100 ಕೋಟಿ ಅನುದಾನ ಮೀಸಲಿದ್ದು, ಈಗಾಗಲೇ 80.40 ಕೋಟಿ ರೂ. ಖರ್ಚಾಗಿದ್ದು, ಪ್ರಯೋಜನ ಮಾತ್ರ ಶೂನ್ಯ. 
ಇನ್ನೊಂದೆಡೆ ನಾಲ್ಕು ಕಿ.ಮೀ. ಉದ್ದದ ಅಕ್ವಾಡೆಕ್ಟ್ ಕಾಮಗಾರಿಯಲ್ಲಿ 600ಮೀ. ಕೆಲಸ ಬಾಕಿ ಉಳಿದಿದೆ. ಹಟ್ಟಿ ಚಿನ್ನದ ಗಣಿ ಕಂಪನಿಯ ಆಕ್ಷೇಪದಿಂದ ಕಾಮಗಾರಿ ನಿಧಾನವಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಪ್ರಶ್ನಿಸುವವರಿಲ್ಲದಂತಾಗಿದೆ. 
ಗೌಡೂರು-ಮಾಚನೂರು ನಡುವಿನ 5ಕಿ.ಮೀ. ವ್ಯಾಪ್ತಿಯ ಭೂಸ್ವಾಧೀನ ಸಮಸ್ಯೆ ಬಗೆಹರಿದಿಲ್ಲ. 206ಎಕರೆ ಭೂಸ್ವಾಧೀನ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ರೈತರ ಆಕ್ಷೇಪಣೆಗಳಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ.
ಯೋಜನೆಯಡಿ 10,800 ಹೆ. ಪ್ರದೇಶಕ್ಕೆ ನೀರು ಹರಿಸುವ ಉದ್ದೇಶವಿದ್ದರೂ, ವಾಸ್ತವದಲ್ಲಿ 13 ಕಿ.ಮೀ. ವರೆಗೆ ಮಾತ್ರ ನೀರು ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಹನ್ನೆರಡು ವರ್ಷಗಳ ನಿರ್ಲಕ್ಷ್ಯದಿಂದ ವಿತರಣಾ ಕಾಲುವೆಗಳು, ಲ್ಯಾಟರಲ್ಸ್ ಹಾಗೂ ಡ್ರಾಪ್‌ಔಟ್ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿವೆ. ರೈತರ ಹೊಲಗಳಿಗೆ ನೀರು ಹರಿಯಬೇಕಾದ ಮಾರ್ಗಗಳು ಮಣ್ಣಿನ ಗುಡ್ಡೆಗಳಾಗಿವೆ. ಬಿ ಸ್ಕೀಮ್ ಶಾಶ್ವತವಾಗಿ ವಿಫಲ ಯೋಜನೆಗಳ ಪಟ್ಟಿಗೆ ಸೇರುವ ದಿನ ದೂರದಲ್ಲಿಲ್ಲ. ಹೀಗಾಗಿ ಸರ್ಕಾರದ ಮೇಲೆ ರೈತರು ನಂಬಿಕೆ ಕಳೆದುಕೊಂಡಿದ್ದಾರೆ. 

"

ನವಲಿ-ರಾಂಪುರ ಜಡಿಶಂಕರಲಿಂಗ ಏತ ನೀರಾವರಿ ಯೋಜನೆಗಾಗಿ ಹೊನ್ನಳ್ಳಿ, ಮೇದಿನಾಪುರ, ಗುಡದನಾಳ, ಹಟ್ಟಿ, ಮಾಚನೂರು ಸೇರಿದಂತೆ ಇತರ ಗ್ರಾಮಗಳ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೆಲವರಿಗೆ ಇಂದಿಗೂ ಪರಿಹಾರ ನೀಡಿಲ್ಲ. ಹೀಗಾಗಿ ಯೋಜನೆ ಅನುಷ್ಠಾನ ಕಗ್ಗಂಟಾಗಿ ಪರಿಣಮಿಸಿದೆ. ರೈತರ ಜಮೀನಿಗೆ ನೀರು ಹರಿಯುವುದು ಕನಸಿನ ಮಾತಾಗಿದೆ.

— ಮಲ್ಲನಗೌಡ ಗೌಡೂರು ಅಧ್ಯಕ್ಷ, ರೈತ ಸಂಘ ತಾಲೂಕು ಘಟಕ

ಏತ ನೀರಾವರಿ ಯೋಜನೆಗೆ ಹಟ್ಟಿ ರೈತರಿಂದ ಜಮೀನು ಸ್ವಾಧೀನದ ಸಲುವಾಗಿ ಕೆಲಸ ತಡೆ ಹಿಡಿಯಲಾಗಿತ್ತು. ಬಾಕಿ ಉಳಿದ 280ಮೀ. ಕೆಲಸವನ್ನು ಇದೇ ತಿಂಗಳಲ್ಲಿ ಪ್ರಾರಂಭಿಸಿ, ಆದಷ್ಟು ಬೇಗನೇ ರೈತರ ಜಮೀನಿಗೆ ನೀರು ಒದಗಿಸಲಾಗುವುದು.

— ಚಂದ್ರಕಾಂತ ಸ್ವಾಮಿ ಎಇಇ ನೀರಾವರಿ ಇಲಾಖೆ ರೋಡಲಬಂಡಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net