ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜೀವನಾಡಿ ತುಂಗಭದ್ರಾ ಜಲಾಶಯವು ಗುರುವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಜಲಾಶಯದ ಹೂಳಿಗೆ ನದಿ ಜೋಡಣೆಯೇ ಸೂಕ್ತ ಪರಿಹಾರವೆಂಬ ಕೇಂದ್ರದ ಸಲಹೆಗೆ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತದ ಸಮ್ಮತಿ ಸೂಚಿಸಿ, ಅನುಷ್ಠಾನದ ವಾಗ್ದಾನ ಮಾಡಿರುವುದು ಸ್ವಾಗತಾರ್ಹ. 133 ಟಿಎಂಸಿ ಅಡಿ ಜಲಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ 28 ಟಿಎಂಸಿ ಹೂಳು ತುಂಬಿದೆ ಎಂಬುದು ಸಮಸ್ಯೆಯ ತೀವ್ರತೆಗೆ ಸಾಕ್ಷಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕ್ರಸ್ಟ್ಗೇಟ್ಗಳ ಲೋಕಾರ್ಪಣೆ ವೇಳೆ ಒಂದೇ ವೇದಿಕೆ ಹಂಚಿಕೊಂಡು ಮಹತ್ವದ ನಿರ್ಧಾರ ಘೋಷಿಸಿರುವುದು, ಒಕ್ಕೂಟ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆ.