ತಿಪಟೂರು: ಉತ್ತಮ ವ್ಯವಸ್ಥಾಪಕನ ಕೆಲಸವೆಂದರೆ ಕೇವಲ ಕೆಲಸ ಮಾಡಿಸಿಕೊಳ್ಳುವುದಲ್ಲ. ಬದಲಾಗಿ ಪ್ರೇರೇಪಣೆ ನೀಡುವುದು, ಮಾರ್ಗದರ್ಶನ ಮಾಡುವುದು, ನಾಯಕತ್ವ ವಹಿಸುವುದು ಎಂದು ದಾವಣಗೆರೆಯ ಯುಬಿಡಿಟಿ ಕಾಲೇಜಿನ ಸಿಎಸ್ಇ ವಿಭಾಗದ ಪ್ರೊ.ಡಾ.ಶ್ರೀಧರ್ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದಿಂದ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಮ್ಯಾನೇಜ್ಮೆಂಟ್ ಎಂಬ ಪದ ಇಟಾಲಿಯನ್ ಮೂಲದಿಂದ ಬಂದಿದ್ದು, ಅದರ ಅರ್ಥ ಕುದುರೆಗೆ ತರಬೇತಿ ನೀಡುವುದು ಎಂದು ತಿಳಿಸಿದರು.
ಜನರನ್ನು ಸಮರ್ಥವಾಗಿ ಹಾಗೂ ಚಾತುರ್ಯದಿಂದ ಮುನ್ನಡೆಸುವ ಕೌಶಲವೇ ನಿಜವಾದ ನಿರ್ವಹಣೆ. ಸಮರ್ಥ ವ್ಯವಸ್ಥಾಪಕ ನರಕವನ್ನೇ ಸ್ವರ್ಗವನ್ನಾಗಿ ಪರಿವರ್ತಿಸಬಲ್ಲನು ಎಂದರು.
ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಸಮರ್ಪನೆ ಮತ್ತು ಶ್ರಮ ದೊಡ್ಡದು. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಎಂಬಿಎ ವಿಭಾಗದ ಮುಖ್ಯಸ್ಥ ಡಾ.ದೀಪ್ತಿಅಮಿತ್, ಪ್ರಾಂಶುಪಾಲ ಡಾ.ಎಚ್.ಸಿ.ಸತೀಶ್ ಕುಮಾರ್ ಇದ್ದರು. .