ಮಾಹಿತಿ ಆಯೋಗಕ್ಕೆ ಆಯುಕ್ತರುಗಳಿದ್ದಾರೆ! ಖಾಯಂ ನೌಕರರಿಲ್ಲ!

mahiti ayoga
mahiti ayoga
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ವರ್ಷ ಸರಾಸರಿ 25 ರಿಂದ 30 ಸಾವಿರ ದೂರು
  • ಐವರು ಪತ್ರಕರ್ತರ ನೇಮಕ ತಂದ ಹೊಸ ಚಲನೆ
  • ನನೆಗುದಿಗೆ ಬಿದ್ದಿರುವ್ದ ಸಿ ಆಂಡ್ ಆರ್ ರೂಲ್ಸ್ ರಚನೆ
ಶಿವಾನಂದ ತಗಡೂರು, ಬೆಂಗಳೂರು:
ಕರ್ನಾಟಕ ಮಾಹಿತಿ ಆಯೋಗಕ್ಕೆ ಈಗ ಪರ್ವ ಕಾಲ!
ಪೂರ್ಣ ಪ್ರಮಾಣದಲ್ಲಿ ಮಾಹಿತಿ ಆಯುಕ್ತರುಗಳು ನೇಮಕಗೊಂಡಿದ್ದಾರೆ. ಆದರೆ, ಖಾಯಂ ನೌಕರರುಗಳೇ ಅಲ್ಲಿ ಇಲ್ಲದಿರುವುದು ಸರ್ಕಾರಿ ನಿರ್ಲಜ್ಜ ವ್ಯವಸ್ಥೆಗೆ ಹಿಡಿದ ಕನ್ನಡಿ.
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಅಲ್ಲಿರುವ 141 ಹುದ್ದೆಗಳಲ್ಲಿ 131ಕ್ಕೂ ಹೆಚ್ಚು ಜನರು ಇನ್ನೂ ಗುತ್ತಿಗೆ ಆಧಾರದಲ್ಲಿಯೇ ದುಡಿಯುತ್ತಿದ್ದಾರೆ. 15 ವರ್ಷಗಳನ್ನು ದಾಟಿ ದುಡಿಯುತ್ತಿರುವ ನೌಕರರು ಮತ್ತು ಸಿಬ್ಬಂದಿಗಳಿಗೆ ಇನ್ನೂ ಖಾಯಂ ಯೋಗವಿಲ್ಲ. ಗುತ್ತಿಗೆಯಲ್ಲಿರುವ ನೌಕರರ ಸಂಬಳವು ಹತ್ತಿಪ್ಪತ್ತು ಇಪ್ಪತ್ತು ಸಾವಿರದ ಆಜು ಬಾಜಿನಲ್ಲಿಯೇ ಇದೆ.
ಆಯೋಗ ಅಸ್ಥಿತ್ವಕ್ಕೆ ಬಂದು ಹತ್ತೊಂಬತ್ತು ವರ್ಷಗಳಾದರೂ, ಇನ್ನೂ ಈ ಆಯೋಗಕ್ಕೆ ಒಬ್ಬ ಖಾಯಂ ಸಿಬ್ಬಂದಿಗಳ ನೇಮಕಾತಿ ಆಗಲೇ ಇಲ್ಲ. ಇನ್ನೂ ಅಚ್ಚರಿ ಅಂದರೆ ನೇಮಕಾತಿಗಾಗಿ ವೃಂದ ಮತ್ತು ನೇಮಕಾತಿ (ಸಿ ಆಂಡ್ ಆರ್ ರೂಲ್ಸ್) ನಿಯಮಾವಳಿಗಳನ್ನೆ ಈತನಕವೂ ರೂಪಿಸಿಲ್ಲ. ಸಿ ಆಂಡ್ ಆರ್ ರೂಲ್ಸ್ ಮಾಡುವ ಪ್ರಯತ್ನಗಳು ನಡೆದರೂ ಯಾಕೋ ಅದಕ್ಕೆ ನಿರೀಕ್ಷಿತ ಯಶಸ್ಸು ಕೂಡ ದೊರೆತಿಲ್ಲ.
ವಿಧಾನಸೌಧದ ಕೂಗಳತೆ ದೂರದಲ್ಲಿರುವ ಈ ಮಾಹಿತಿ ಸೌಧದಲ್ಲಿಯೇ ಈ ಚಿಂತಾಜನಕ ಪರಿಸ್ಥಿತಿ ತಾಂಡವವಾಡುತ್ತಿದ್ದರೂ, ಯಾರೂ ಅತ್ತ ಗಮನಹರಿಸಲಿಲ್ಲ. ಆಯೋಗದ ಆಯುಕ್ತರ ನೇಮಕಕ್ಕೆ ಸರ್ಕಾರ ತೋರಿದ ಉತ್ಸಹವನ್ನು ಸಿ ಆಂಡ್ ಆರ್ ರೂಲ್ಸ್ ಮಾಡಿ ಖಾಯಂ ನೌಕರರನ್ನು ಮಾಡಿಕೊಳ್ಳಲು ತೋರಿಸಲಿಲ್ಲ.
ಮುಖ್ಯ ಆಯುಕ್ತರ ಜೊತೆಗೆ ಬೆಳಗಾವಿ ಮತ್ತು ಕಲಬುರ್ಗಿ ಸೇರಿದಂತೆ ಒಟ್ಟು 11 ಜನ ಮಾಹಿತಿ ಆಯುಕ್ತರಿದ್ದಾರೆ. ಸರ್ಕಾರದಿಂದ ನೇಮಕಗೊಂಡಿರುವ ಮಾಹಿತಿ ಆಯುಕ್ತರ ಹೊರತಾಗಿ ಇನ್ನುಳಿದಂತೆ ಇಡೀ ಮಾಹಿತಿ ಸೌಧದಲ್ಲಿ ಒಬ್ಬರು ಸರ್ಕಾರಿ ನೌಕರರಿಲ್ಲ. ಬದಲಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿರುವ ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೂ ಸರ್ಕಾರ ಅದಕ್ಕಾಗಿ ಸಿ ಆಂಡ್ ಆರ್ ರೂಲ್ಸ್ ಮಾಡದೆ ನಿರ್ಲಕ್ಷಿಸಿದೆ.
ಮಾಹಿತಿ ಆಯೋಗಕ್ಕೆ ಪಾರ್ಥಸಾರಥಿ, ಡಾ.ಎಚ್.ಎನ್.ಕೃಷ್ಣ ಅವರಿಂದ ಹಿಡಿದು ಅಶಿತ್ ಮೋಹನ್ ಪ್ರಸಾದ್ ಅವರ ತನಕ ಹಲವರು ಮುಖ್ಯ ಮಾಹಿತಿ ಆಯುಕ್ತರಾಗಿ ಕೆಲಸ ಮಾಡಿ ಹೋಗಿದ್ದಾರೆ. ಅವರುಗಳು ಯಾರೂ ಸಿಬ್ಬಂದಿ ನೇಮಕಾತಿಗಾಗಿ ಸಿ ಆಂಡ್ ಆರ್ ರೂಲ್ಸ್ ಮಾಡುವ ಗೋಜಿಗೆ ಹೋಗದಿರುವುದು ಅಚ್ಚರಿ.
ವರ್ಷಕ್ಕೆ 25 ಸಾವಿರ ದೂರು
ಮಾಹಿತಿ ಆಯೋಗಕ್ಕೆ ಪ್ರತಿ ವರ್ಷ ಸರಾಸರಿ 25 ರಿಂದ 30 ಸಾವಿರ ದೂರುಗಳು ದಾಖಲಾಗುತ್ತವೆ. ಒಂದು ವರ್ಷ ಮಾತ್ರ 36 ಸಾವಿರ ದೂರುಗಳು ಆಯೋಗಕ್ಕೆ ಬಂದಿದ್ದು ಇಲ್ಲಿಯ ತನಕ ಇರುವ ದಾಖಲೆ. ಪ್ರತಿ ನಿತ್ಯ ಕಚೇರಿಗೆ 40 ರಿಂದ 60 ದೂರುಗಳು ಬಂದೇ ಬರುತ್ತವೆ. ರಜಾ ದಿನಗಳನ್ನು ಹೊರತುಪಡಿಸಿ, ಪ್ರತಿನಿತ್ಯವೂ ದೂರು ದಾಖಲಾಗುತ್ತಲೇ ಇರುತ್ತವೆ.
ಐವರು ಪತ್ರಕರ್ತರು ತಂದ ಚಲನೆ:
ಮಾಹಿತಿ ಆಯೋಗಕ್ಕೆ ಪತ್ರಕರ್ತರಾದ ರುದ್ರಣ್ಣ ಹರ್ತಿಕೋಟೆ, ರಾಜಶೇಖರ್, ಬದ್ರುದ್ದೀನ್, ವೆಂಕಟಸಿಂಗ್, ಮಹೇಶ್ ವಾಳ್ವೇಕರ್ ಅವರುಗಳು ನೇಮಕಗೊಂಡ ಬಳಿಕ ಆಯೋಗಕ್ಕೆ ಸ್ವಲ್ಪ ಚಲನೆ ಪಡೆದುಕೊಂಡಿದೆ. ಸುದ್ದಿ ಮನೆಯಿಂದಲೇ ಬಂದ ಮಮತಾ ಬಿ.ಆರ್. ಸೇರಿದಂತೆ ಎಲ್ಲಾ ಆಯುಕ್ತರು ಕ್ರೀಯಾಶೀಲವಾಗಿದ್ದಾರೆ. ಆದರೆ, ಮುಖ್ಯ ಆಯುಕ್ತರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರ ನೇಮಕವಾಗುವುದು ಮಾತ್ರ ಬಾಕಿ ಇದೆ.
ಬಾಕಿ ಪ್ರಕರಣ 55 ಸಾವಿರ
ಮಾಹಿತಿ ಆಯೋಗದಲ್ಲಿ 10 ಕೋರ್ಟ್‌ಗಳಲ್ಲಿ ಪ್ರಕರಣ ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಮುಖ್ಯ ಮಾಹಿತಿ ಆಯುಕ್ತರಿಂದ ಹಿಡಿದು, ರಾಜ್ಯ ಮಾಹಿತಿ ಆಯುಕ್ತರ ತನಕ ಎಲ್ಲರೂ ಪ್ರಕರಣಗಳ ವಿಚಾರಣೆ ನಡೆಸುತ್ತಾರೆ. ಆದರೂ ಆಯೋಗದಲ್ಲಿ ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯೇ 35 ಸಾವಿರ ಇದೆ.
ಪಾರದರ್ಶಕತೆ ತರಲು ಕ್ರಮ
ಮಾಹಿತಿ ಆಯೋಗದಲ್ಲಿ ದಾಖಲಾಗುವ ಪ್ರಕರಣಗಳನ್ನು ಹಂಚಿಕೆ ಮಾಡುವ ಬಗ್ಗೆ ಸ್ಪಷ್ಟತೆಗಳು ಇರಲಿಲ್ಲ. ಈಗ ಪಾರದರ್ಶಕತೆ ಆಧಾರದ ಮೇಲೆ ಕಂಪ್ಯೂಟರ್ ಮೂಲಕ 11 ಜನ ಮಾಹಿತಿ ಆಯುಕ್ತರಿಗೂ ಪ್ರಕರಣಗಳು ಹಂಚಿಕೆ ಆಗುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಹಾಗಾಗಿ ಕೆಲ ಆಯುಕ್ತರು, ತಮಗೆ ಇಂಥದ್ದೆ ಪ್ರಕರಣ ಬೇಕು ಎಂದು ಪಡೆದು ವಿಚಾರಣೆ ನಡೆಸುವ ಅವಕಾಶಕ್ಕೆ ತಡೆಯೊಡ್ಡಿದಂತಾಗಿದ್ದು, ಪಾರದರ್ಶಕತೆಗೆ ಮಾನ್ಯತೆ ದೊರೆತಿದೆ.
ನಿಯಮಾವಳಿ ಏನು?
ಮಾಹಿತಿ ಆಯೋಗದ ಸೆಕ್ಷನ್ 6(1) ಪ್ರಕಾರ ಯಾರೇ ಮಾಹಿತಿ ಕೇಳಿದರೂ ಅದನ್ನು 30 ದಿನಗಳೊಳಗೆ ನೀಡಬೇಕು. ಒಂದು ವೇಳೆ ಸಂಬಂದಿಸಿದವರು ಈ ಬಗ್ಗೆ ಮಾಹಿತಿ ನೀಡದೆ ಇದ್ದರೆ ಅವರ ಮೇಲ್ಪಟ್ಟ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶವಿದೆ. ಅಲ್ಲಿಯೂ ಮಾಹಿತಿ ಸಿಗದೆ ಇದ್ದಲ್ಲಿ ಮಾಹಿತಿ ಆಯೋಗಕ್ಕೆ ದೂರು ದಾಖಲಿಸಬಹುದು.
*ಮಾಹಿತಿ ಹಕ್ಕು ಆಯೋಗ ಅಂದರೆ ಸರ್ಕಾರ ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಆಯೋಗ ಬೇಕೋ? ಬೇಡವೋ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ. ಮೊದಲು ಇಲ್ಲಿರುವ ನೌಕರರನ್ನು ಖಾಯಂ ಮಾಡಬೇಕು.
-ಸಂತ್ರಸ್ತ ನೌಕರರು, ಮಾಹಿತಿ ಹಕ್ಕು ಆಯೋಗ, ಬೆಂಗಳೂರು.

*ಮಾಹಿತಿ ಹಕ್ಕು ಆಯೋಗಕ್ಕೆ ಈ ಹಿಂದೆಯೇ ಖಾಯಂ ನೌಕರರು ನೇಮಕವಾಗಬೇಕಾಗಿತ್ತು. ಯಾಕೆ ಆಗಲಿಲ್ಲ ಎನ್ನುವುದು ಗೊತ್ತಿಲ್ಲ. ಸಿ ಆಂಡ್ ಆರ್ ರೂಲ್ಸ್ ಕೂಡ ಮಾಡಿಲ್ಲ. ಹಾಗಾಗಿ ಹೊರ ಗುತ್ತಿಗೆ ಮೇಲೆ ನೇಮಕಗೊಂಡಿರುವ ನೌಕರರನ್ನು ಆಧರಿಸಿಯೇ ಆಯೋಗ ನಡೆಯಬೇಕಾಗಿದೆ. ಸಿ ಆಂಡ್ ಆರ್ ರೂಲ್ಸ್ ಮಾಡಲು ಸಿದ್ಧತೆ ನಡೆದಿದ್ದು, ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು.

-ಹೆಸರು ಹೇಳಿಕೊಳ್ಳಲು ಇಚ್ಛಿಸದ ಮಾಹಿತಿ ಆಯುಕ್ತರು. ಬೆಂಗಳೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net