ತುರುವೇಕೆರೆ:ತಾಲೂಕಿನ ಸುಪ್ರಸಿದ್ಧ ಮಾದಿಹಳ್ಳಿಯ ಶ್ರೀ ಹುತ್ತ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಮಾ.19ರಂದು ಅದ್ದೂರಿಯಾಗಿ ನೆರವೇರಲಿದೆ.
ಅಂದು ಬೆಳಗ್ಗೆಯಿಂದಲೇ ಗಣಪತಿ ಸ್ಥಾಪನೆ, ಜ್ಯೋತಿ ಸ್ಥಾಪನೆ, ಧ್ವಜಾರೋಹಣ, ಉತ್ಸವ ಮೂರ್ತಿಯ ದೇವಾಲಯ ಪ್ರವೇಶ, ಗಂಗಾಸ್ನಾನ, ಅಷ್ಟೋತ್ತರ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನದ ನಂತರ ಲಿಂಗವೀರರ ಕುಣಿತ, ಸೋಮನ ಕುಣಿತ ನಡೆಯಲಿದೆ. ರಾತ್ರಿ 8.30ರಿಂದ ಅಮೋಘ ಮದ್ದುಗುಂಡುಗಳ ಪ್ರದರ್ಶನ ಆಯೋಜಿಸಲಾಗಿದೆ.
ಬೆಳಗ್ಗೆ 5.30ರಿಂದ ರಾತ್ರಿ 11 ಗಂಟೆಯವರೆಗೂ ಶ್ರೀ ಹುತ್ತುಸಿದ್ದೇಶ್ವರ ಸ್ವಾಮಿಯವರ ದರ್ಶನ ಇರಲಿದೆ. ಈ ಸನ್ನಿಧಾನಕ್ಕೆ ಬರುವ ಭಕ್ತರಿಗೆ ಪಾನಕ ಮತ್ತು ಕೋಸಂಬರಿಯ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಸುಮಾರು 1 ಕಿ.ಮೀ ದೂರದಲ್ಲಿ ವಾಹನ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾದಿಹಳ್ಳಿಯ ಹೈಸ್ಕೂಲ್, ಪುಟ್ಟಮಾದಿಹಳ್ಳಿ, ಬದರಿಕಾಶ್ರಮದ ಕಡೆಯಿಂದ ಬರುವವರಿಗೆ ಎರಡು ಎಕರೆ ಪ್ರದೇಶದಲ್ಲಿ ವಾಹನಗಳಿಗೆ ನಿಲ್ಲಲು ಅವಕಾಶ ಮಾಡಲಾಗಿದೆ ಎಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.