ನಾಯಕತ್ವ ಕುರಿತು ಹೈಕಮಾಂಡ್ ನೋಡಿಕೊಳ್ಳುತ್ತದೆ-congress

ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ
Published on
ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ಅನಗತ್ಯವಾಗಿ ನಾಯಕತ್ವ ಕುರಿತು ಚರ್ಚೆ ನಡೆಯುತ್ತಿದೆ. ನಾಯಕತ್ವ ವಿಚಾರದ ಕುರಿತು ನಮ್ಮ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರು ವರದಿಗಾರರ ಕೂಟ, ಕಬ್ಬನ್‌ಪಾರ್ಕ್ ಆವರಣದ ರಾಜ್ಯ ಲಾನ್ ಟೆನ್ನಿಸ್ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸುವರ್ಣ ಮಹೋತ್ಸವ ಡೈರೆಕ್ಟರಿ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿನಿತ್ಯ ನಾಯಕತ್ವ ಬದಲಾವಣೆ ಕುರಿತು ಹೆಚ್ಚು ಚರ್ಚಿಯಾಗುತ್ತಿದೆ. ಹಾಗಾಗಿ, ನಾಯಕತ್ವ ಬದಲಾವಣೆ ಎಂಬುದು ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು. ನಾಡಿನ ಅಭಿವೃದ್ಧಿ ಕಡೆ ಗಮನ ಹರಿಸುವುದು ಎಲ್ಲರ ಕರ್ತವ್ಯ. ವ್ಯವಸ್ಥೆಯಲ್ಲಿ ಈಗ ಯಾವುದೂ ಹಿಂದಿನಂತಿಲ್ಲ. ಸಾಕಷ್ಟು ಬದಲಾವಣೆಗಳಾಗಿವೆ. ರಾಜಕೀಯ,ಮಾಧ್ಯಮ ಕ್ಷೇತ್ರದ ಸೇರಿ ಸಮಾಜದ ಎಲ್ಲ ಅಂಗಗಳಲ್ಲೂ ಬದಲಾವಣೆಯಾಗಿದೆ. ವ್ಯವಸ್ಥೆ ಸುಗಮವಾಗಿ ಸಾಗಲು ಹೀಗೆ ಕೆಲಸ ಮಾಡಬೇಕಿತ್ತು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಅಂದುಕೊಳ್ಳುವುದೇ ಬೇರೆ, ಪರಿಸ್ಥಿತಿಯೇ ಬೇರೆಯಾಗಿದೆ ಎಂದು ಸಚಿವರು ವಿಷಾದ ವ್ಯಕ್ತಪಡಿಸಿದರು.
ಮಾಧ್ಯಮ ರಂಗಕ್ಕೆ ಚೈತನ್ಯ ಅಗತ್ಯ:
ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮಾತನಾಡಿ, ಮಾಧ್ಯಮ ರಂಗಕ್ಕೆ ಭವಿಷ್ಯವಿಲ್ಲ ಎಂದು ಹಲವರು ಹೇಳುತ್ತಾರೆ. ಆದರೆ, ಎಲ್ಲಿಯವರೆಗೆ ಕುತೂಹಲ ಮತ್ತು ಸತ್ಯಶೋಧನೆಯ ಮನಸ್ಸು ಇರುತ್ತದೋ ಅಲ್ಲಿಯವರೆಗೆ ಮಾಧ್ಯಮ ರಂಗ ಅಸ್ತಿತ್ವದಲ್ಲಿರುತ್ತದೆ. ಪ್ರಸ್ತುತ ಮಾಧ್ಯಮ ರಂಗದಲ್ಲಿ ಪಲ್ಲಟಗಳಾಗಿರುವುದು ನಿಜ. ಇದನ್ನು ನೋಡಿದರೆ ವಿಷಾದವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮಾಧ್ಯಮ ರಂಗಕ್ಕೆ ಚೈತನ್ಯ ನೀಡುವ ಕಾರ್ಯ ಮಾಧ್ಯಮ ಸಂಘಟನೆಗಳಿಂದ ಆಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕೂಟದ ಸಂಸ್ಥಾಪಕ ಸದಸ್ಯ ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತರಾದ ಎಂ.ಸಿದ್ದರಾಜು, ಅ.ಮ. ಸುರೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಕೆ.ಗೋಪಾಲಯ್ಯ, ಉದ್ಯಮಿ ಸ್ಟಾರ್ ಚಂದ್ರು, ಡಿ.ಎಸ್.ಮ್ಯಾಕ್ಸ್ ಸಂಸ್ಥೆ ಮುಖ್ಯಸ್ಥ ದಯಾನಂದ್, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎಂ.ಸಿದ್ಧರಾಜು, ಸದಾಶಿವ ಶೆಣೈ, ಕೂಟದ ಅಧ್ಯಕ್ಷ ಆರ್.ಟಿ. ವಿಠ್ಠಲಮೂರ್ತಿ, ಪ್ರಧಾನ ಕಾರ್ಯದರ್ಶಿ ಎಚ್.ವಿ.ಕಿರಣ್, ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net