ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರೃ ಕಲ್ಪಿಸಿದ ಮಹಾನ್ ಚೇತನ

 ಮಣಿಗೆರೆ ಗ್ರಾಮದಲ್ಲಿ ಜೈಭೀಮ್ ಬಾಯ್ಸ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಿದರು.
ಮಣಿಗೆರೆ ಗ್ರಾಮದಲ್ಲಿ ಜೈಭೀಮ್ ಬಾಯ್ಸ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಶಾಸಕ ಕದಲೂರು ಉದಯ್ ಉದ್ಘಾಟಿಸಿದರು.
Published on

ಕೆ.ಎಂ.ದೊಡ್ಡಿ: ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಾನು ಶಾಸಕನಾಗಿದ್ದು ಅದೇ ರೀತಿ ಸಮಾಜದಲ್ಲಿ ಒಬ್ಬ ಕಟ್ಟ ಕಡೆಯ ವ್ಯಕ್ತಿಗಳಿಗೂ ಹಕ್ಕುಗಳು ಮತ್ತು ಸ್ವಾತಂತ್ರ್ಯ ಕಲ್ಪಿಸಿದ ಮಹಾನ್ ಚೇತನ ಎಂದು ಶಾಸಕ ಕದಲೂರು ಉದಯ್ ಬಣ್ಣಿಸಿದರು.

ಸಮೀಪದ ಮಣಿಗೆರೆ ಗ್ರಾಮದಲ್ಲಿ ಜೈಭೀಮ್ ಬಾಯ್ಸ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜ್ಞಾನದಿಂದ ನೀಡಿದ ದೇಶದ ಸರ್ವಶ್ರೇಷ್ಠ ಗ್ರಂಥ ಭಾರತ ಸಂವಿಧಾನದಡಿ ಎಲ್ಲ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವವನ್ನು ಒದಗಿಸಿ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತರ ಮತ್ತು ಅಸ್ಪಶ್ಯರ ದನಿಯಾಗಿ ಅವರಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿದ ಧೀಮಂತ ನಾಯಕ. ಅನ್ಯಾಯ, ಅಸಮಾನತೆ ಹಾಗೂ ಜಾತಿ ತಾರತಮ್ಯದ ಕೀಳು ವ್ಯವಸ್ಥೆಯ ವಿರುದ್ಧದ ಎಲ್ಲ ಚಳವಳಿಗಳಿಗೂ ಅವರ ಚಿಂತನೆಗಳು ಸ್ಫೂರ್ತಿಯಾಗಿದೆ ಎಂದರು.

ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮಿಜಿ ಮಾತನಾಡಿ, ದೇಶಕ್ಕೆ ಸಂವಿಧಾನ ಮೂಲಕ ಭದ್ರ ಬುನಾದಿ ಹಾಕಿಕೊಟ್ಟ ವಿಶ್ವದ ಜ್ಞಾನಸೂರ್ಯ ಡಾ.ಬಿ.ಆರ್ ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಸಂವಿಧಾನದ ಅಡಿ ಸ್ವಾಭಿಮಾನವನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಸಂಘಟಿತರಾಗಿ ಜೀವನ ಸಾಗಿಸೋಣ ಎಂದು ತಿಳಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಿ ಹಾಗೂ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕರ್ನಾಟಕ ರಾಜ್ಯ ಮಾಜಿ ಸೈನಿಕ ಸಂಘದ ಗೌರವಾಧ್ಯಕ್ಷ ಸಿಪಾಯಿ ಶ್ರೀನಿವಾಸ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್, ಬ್ಲಾಕ್ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಜಾಗೃತಿ ಸಮಿತಿ ಸದಸ್ಯ ಎಸ್.ಚಿದಂಬರಮೂರ್ತಿ, ಡಾ.ಅರ್ಜುನ್‌ಕುಮಾರ್, ಮಣಿಗೆರೆ ಗ್ರಾಮದ ಮುಖಂಡರಾದ ಎಂ.ಎಸ್.ಕರುಣ, ಪದ್ಮೇಶ್, ದೇವರಾಜು, ವೆಂಕಟೇಶ್, ಶ್ರೀನಿವಾಸ್, ಕೆ.ಹೊಂಬಯ್ಯ, ಪುಟ್ಟಲಿಂಗಯ್ಯ, ರಾಜು, ಗುಡಿಗೆರೆ ರಾಘವೇಂದ್ರ, ಬಸವರಾಜು, ಅಂಬರಹಳ್ಳಿ

ಸ್ವಾಮಿ ಸೇರಿದಂತೆ ಜೈ ಭೀಮ್ ಬಾಯ್ಸ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net