

ಪ್ರಮುಖ ಮುಖ್ಯಾಂಶಗಳು
ಮಹಾಲಿಂಗಪುರ: ಪಟ್ಟಣದ ಶ್ರೀ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜಗದ್ಗುರು ಸಿದ್ಧಾರೂಢರ 97ನೇ ಪುಣ್ಯಾರಾಧನೆ ನಿಮಿತ್ತ 44ನೇ ವರ್ಷದ ಜಲರಥೋತ್ಸವಕ್ಕೆ ಶನಿವಾರ ಸಂಜೆ ಅಲಂಕೃತ ರಥದಲ್ಲಿನ ಸಿದ್ಧಾರೂಢರ ಮೂರ್ತಿಗೆ ನಗರ ಭೂಮಾಪನ ಅಧಿಕಾರಿ ಅಶೋಕ ನಾಯಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ತೆಪ್ಪೋತ್ಸವ ನಿಮಿತ್ತ ಬೆಳಗ್ಗೆ 8ಕ್ಕೆ ಸಿದ್ಧಾರೂಢರ ಮೂರ್ತಿಗೆ ಅಭಿಷೇಕ, 10 ಗಂಟೆಗೆ ಪುರಸಭೆ ಮಾಜಿ ಸದಸ್ಯೆ ಸವಿತಾ ಹುರಕಡ್ಲಿ ಅವರಿಂದ ಮುತ್ತೈದೆಯರಿಗೆ ಉಡಿ ತುಂಬುವುದು, ನಂತರ ಹಿಪ್ಪರಗಿ, ಖಾನಟ್ಟಿ, ಬುದ್ನಿ ಪಿಡಿ, ಸಂಗಾನಟ್ಟಿ ಗ್ರಾಮಗಳ ಭಜನಾ ಮೇಳದವರಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.
ತೆಪ್ಪೋತ್ಸವ ಸಮಾರಂಭದ ಸಾನ್ನಿಧ್ಯವನ್ನು ಸಹಜಾನಂದ ಸ್ವಾಮೀಜಿ, ಅಧ್ಯಕ್ಷತೆ ಘಟಪ್ರಭಾ ಭೀಮಾನಂದ ಸ್ವಾಮೀಜಿ ವಹಿಸಿದ್ದರು. ಆಶ್ರಮದ ಉತ್ತರಾಧಿಕಾರಿ ಸೋಮನಾಥ ಸ್ವಾಮೀಜಿ ಸಮ್ಮುಖ ಸ್ಥಾನ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರನ್ನಬೆಳಗಲಿ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು, ಕೋಲೂರಿನ ಮಲ್ಲಪ್ಪ ಪೂಜಾರಿ ಶರಣರು, ಮಲ್ಲೇಶಪ್ಪ ಕಟಗಿ ಶರಣರು, ಚಿಕ್ಕಪಡಸಲಗಿ ಅಕ್ಕಮಹಾದೇವಿ, ಸ್ಥಳೀಯ ವಿದ್ಯಾವತಿತಾಯಿ, ಗದಗದ ಮುಕ್ತಾತಾಯಿ, ರೋಣ ಶಿವಚೇತನಾತಾಯಿ, ಚಿಕ್ಕಲಕಿ ಕಲಾವತಿ ಹಿರೇಮಠ, ಘಟಪ್ರಭಾ ಕಾತ್ಯಾಯಿನಿತಾಯಿ, ಹೊಸಕೋಟಿ ರತ್ನಮ್ಮಾತಾಯಿ, ಹುಣಶ್ಯಾಳದ ಚಂದ್ರಕಲಾತಾಯಿ, ಭಂಟನೂರಿನ ನೇತ್ರಾವತಿತಾಯಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಭಾಗವಹಿಸಿದ್ದರು.
ವಿಶಾಲವಾದ ಕೆರೆಯಲ್ಲಿ ಜರುಗಿದ ಜಲ ರಥೋತ್ಸವದಲ್ಲಿ ಅಪಾರ ಭಕ್ತಾಧಿಗಳಿಂದ ಸಿದ್ಧಾರೂಢ ಮಹಾರಾಜಕೀ ಜೈ, ಸಿದ್ಧಾರೂಢರ ಜೋಳಗಿ-ಜಗತ್ತಿಗೆಲ್ಲ ಹೋಳಗಿ ಎಂಬ ಜಯಘೋಷಗಳು ಮೊಳಗಿದವು. ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯ ತೆಪ್ಪೋತ್ಸವದ ನಂತರ ಉತ್ತರ ಕರ್ನಾಟಕದಲ್ಲಿ ಜರುಗುವ ಎರಡನೇ ದೊಡ್ಡ ತೆಪ್ಪೋತ್ಸವ ಇದಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಭಕ್ತರು ಆಗಮಿಸಿ ರಥೋತ್ಸವಕ್ಕೆ ನಿಂಬೆಹಣ್ಣು, ಉತ್ತತ್ತಿ, ಹೂ, ಬೆಂಡ, ಬತ್ತಾಸಗಳನ್ನು ಹಾರಿಸಿ ಜಲರಥೋತ್ಸವ ವೀಕ್ಷಿಸಿದರು.
ಸಿದ್ಧಾರೂಢ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಡಾ. ಬಿ.ಡಿ. ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚೇತನ ಹಾದಿಮನಿ, ಬಸವರಾಜ ಢಪಳಾಪುರ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹಾಂತೇಶ ಘಟ್ನಟ್ಟಿ, ಜಿ.ಎಸ್. ಬರಗಿ, ಮನೋಹರ ಶಿರೋಳ, ಎಸ್.ಕೆ. ಗಿಂಡೆ, ಮಹಾಲಿಂಗಪ್ಪ ಕರೆಹೊನ್ನ, ಸಿದ್ದು ಧಡೂತಿ ಇತರರಿದ್ದರು.