ತಾಲೂಕಿನ ಲಿಂಗಾಪುರ ಗ್ರಾಮದ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪರಿವಾರ ದೈವಗಳ ಸಿರಿ ಸಿಂಗಾರ ನೇಮೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು
Published on:
Copied
Follow Us
ಬೇಲೂರು: ತಾಲೂಕಿನ ಅರೇಹಳ್ಳಿ ಸಮೀಪದ ಲಿಂಗಾಪುರ ಗ್ರಾಮದ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಳೆದ ಶನಿವಾರದಿಂದ ಪ್ರಾರಂಭವಾದ ಶ್ರೀ ಬಬ್ಬುಸ್ವಾಮಿ, ತನ್ನಿ ಮಾನಿಗ, ಶ್ರೀಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರ ನೇಮೋತ್ಸವವು ಮಂಗಳವಾರ ಬೆಳಗಿನ ಜಾವದವರೆಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ತಾಲೂಕಿನ ಲಿಂಗಾಪುರ ಗ್ರಾಮದಲ್ಲಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ವಾರ್ಷಿಕ ಸಿರಿ ಸಿಂಗಾರದ ನೇಮೋತ್ಸವವನ್ನು ನೋಡಲು ಹಾಸನ ಜಿಲ್ಲೆ ಸೇರಿದಂತೆ ಮಂಗಳೂರು, ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಹಾಗೂ ನಾನಾ ಭಾಗಗಳಿಂದ ಸಹಸ್ರಾರು ದೈವರಾಧಕರು ಮೂರು ದಿನಗಳ ಕಾಲ ನಡೆದ ನಡೆದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಚಿವ ಬಿ.ಶಿವರಾಂ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಸೇರಿದಂತೆ ಗಣ್ಯರು ಸಿರಿ ಸಿಂಗಾರ ನೇಮೋತ್ಸವಕ್ಕೆ ಸಾಕ್ಷಿಯಾದರು.
ಪರಿವಾರ ದೈವಗಳ ಸಿರಿ ಸಿಂಗಾರ ನೇಮೋತ್ಸವವು ಕಳೆದ ಶನಿವಾರ ಬೆಳಗ್ಗೆ ಕಲತ ಕಂಬೆರ್ಲು, ಶ್ರೀ ಚಾಮುಂಡೇಶ್ವರಿ, ರಾಹು, ತನ್ನಿಮಾನಿಗ, ಶ್ರೀ ಬಬ್ಬುಸ್ವಾಮಿಯ ದರ್ಶನ ಸೇವೆಯ ಮೂಲಕ ಪ್ರಾರಂಭವಾಯಿತು. ಭಾನುವಾರ ಬೆಳಗ್ಗೆ ಗಜ ಕಂಬ ಸ್ಥಾಪನೆ, ಮಧ್ಯಾಹ್ನ ಚಪ್ಪರ ಏರುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರೆಯಿತು,
ಅಂದು ಸಂಜೆ ಭಜನಾ ಕಾರ್ಯಕ್ರಮವು ಕೆಲ ಸಮಯ ಭಕ್ತರ ದೈವಿಕ ಶಕ್ತಿಗೆ ಚೈತನ್ಯ ನೀಡಿತು. ಅಲ್ಲಿಂದ ಪ್ರತಿನಿತ್ಯವೂ ನೆರೆದಿದ್ದ ಭಕ್ತರಿಗೆ ಉಪಾಹಾರ, ಅನ್ನಸಂತರ್ಪಣೆ ಭರದಿಂದ ಸಾಗಿತ್ತು. ಭಾನುವಾರ ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ಆದಿಮಾಯ ತನ್ನಿ ಮಾನಿಗ ದೇವಿಯ ನೇಮೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು, ಈ ವೇಳೆ ತನ್ನಿಮಾನಿಗ ದೇವಿಗೆ ನೂರಾರು ಭಕ್ತರು ಹೂವಿನ ಸರಮಾಲೆ ಹಾಕಲು ಮುಗಿಬಿದ್ದ ಸನ್ನಿವೇಶ ದೈವ ಭಕ್ತಿಯ ಪರಾಕಾಷ್ಠೆಯನ್ನು ಎತ್ತಿ ತೋರಿಸುವಂತಿತ್ತು.
ಅಲ್ಲದೆ ಸೋಮವಾರ ಮಧ್ಯಾಹ್ನ ಉರಿ ಬಿಸಿಲಲ್ಲೂ ಶ್ರೀ ಚಾಮುಂಡೇಶ್ವರಿ ಅಮ್ಮ ಮತ್ತು ಪರಿವಾರ ದೈವಗಳಾದ ರಾಹು ಗುಳಿಗ ಹಾಗೂ ಕತ್ತಲೆ ಖಾನ ಗುಳಿಗದ ನೇಮೋತ್ಸವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ನಂತರ ರಾತ್ರಿ ಜುಮಾದಿ ಬಂಟ ದೈವಗಳ ನೇಮೋತ್ಸವದ ಮೂಲಕ ಗ್ರಾಮದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಪೂಜಾ ಕೋಲೋತ್ಸವ ನೆರವೇರಿತು.
ತಾಲೂಕಿನ ಲಿಂಗಾಪುರ ಗ್ರಾಮದ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪ್ರಾರಂಭವಾದ ಶ್ರೀ ಬಬ್ಬುಸ್ವಾಮಿ, ತನ್ನಿ ಮಾನಿಗ, ಶ್ರೀ ಚಾಮುಂಡೇಶ್ವರಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರ ನೇಮೋತ್ಸವವು ದೇಗುಲ ಸಮಿತಿ, ಗ್ರಾಮದ ಮುಖಂಡರು ಹಾಗೂ ಸೇವಾರ್ಥದಾರರ ನೇತೃತ್ವದಲ್ಲಿ ನೆರವೇರಿತು.
ಕರಾವಳಿಯ ಪರಂಪರೆ ಮಲೆನಾಡಿನಲ್ಲೂ!: ರಾಜ್ಯದಲ್ಲಿಯೇ ದೈವಾರಾಧನೆಯ ಪ್ರಸಿದ್ಧ ಸ್ಥಳ ತುಳು ನಾಡದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪರಂಪರೆಯ ಪ್ರತೀಕ ದೈವಿಕ ಶಕ್ತಿ, ಕಾರಣಿಕ ಮತ್ತು ಭಕ್ತಿಯ ಸಂಕೇತವಾದ ದೈವಗಳ ನೇಮೋತ್ಸವವು ನಿರಂತರ ನಡೆಯುವುದು ಸರ್ವೇ ಸಾಮಾನ್ಯ. ಆದರೆ ಹೆಚ್ಚಾಗಿ ದೇವರ ಆರಾಧನೆ ಮಾಡುವ ಮಲೆನಾಡು ಭಾಗವಾದ ಹಾಸನ ಜಿಲ್ಲೆಯಲ್ಲಿ ದೈವಾರಾಧನೆಯ ನೆಲೆಯಾಗಿರುವ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿರುವುದು ವಿಶೇಷ. ಇಲ್ಲಿ ನೂರಾರು ವರ್ಷಗಳಿಂದ ದೈವಾರಾಧನೆ ಮಾಡುತ್ತಾ ಆಗಿಂದಾಗೆ ಸಿರಿ ಸಿಂಗಾರ ನೇಮೋತ್ಸವವನ್ನು ನಡೆಸುತ್ತಾ ಬಂದಿರುವುದು ವಿಶೇಷವಾಗಿದೆ, ಅಲ್ಲದೆ ವರ್ಷದ ಹಿಂದೆ ಶಿಥಿಲಾವಸ್ಥೆ ತಲುಪಿದ್ದ ದೇವರ ಗುಡಿಯನ್ನು ನೂತನ ಶಿಲಾಮಯ ದೈವಸ್ಥಾವನ್ನಾಗಿಸಿ ಹೆಚ್ಚಿನ ದೈವಶಕ್ತಿ ಪಡೆದು ಕೊಂಡತಾಗಿದೆ. ಆದ್ದರಿಂದಲೇ ಈ ಭಾಗದಲ್ಲಿ ಅಪರೂಪಕ್ಕೆ ನಡೆಯುವ ನೇಮೋತ್ಸವಕ್ಕೆ ಈ ಭಾಗದ ಸುತ್ತಮುತ್ತಲಿನ ಸಹಸ್ರಾರು ದೈವ ಭಕ್ತರು ಬಣ್ಣ ಹಚ್ಚಿ, ಸಿರಿ ಸಿಂಗಾರ ಮಾಡಿ, ವಾದ್ಯ ಘೋಷದೊಂದಿಗೆ ನರ್ತಿಸಿ, ಭಕ್ತರ ಕಷ್ಟಗಳಿಗೆ ಪರಿಹಾರ ನೀಡುವ ಆಚರಣೆಯನ್ನು ಆಚರಿಸಲಾಗುತ್ತದೆ. ಇದನ್ನು ನೋಡಲು ಹಾಗೂ ದೈವ ಕೃಪೆಗೆ ಪಾತ್ರರಾಗಲು ಹೆಚ್ಚಿನ ಭಕ್ತರು ಬರುತ್ತಿರುವುದು ವಿಶೇಷವಾಗಿದೆ.