ಪಕ್ಷನಿಷ್ಠನಿಗೊಲಿದ ಮಂತ್ರಿ ಭಾಗ್ಯ

ಡಾ.ಅಜಯಸಿಂಗ್​
ಡಾ.ಅಜಯಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಡಿ.ಕೆ.ಶಿವಕುಮಾರ್​ ಸಂಪುಟದಲ್ಲಿ ಸ್ಥಾನ ಪಡೆದ ಜೇವರ್ಗಿ ಶಾಸಕ ಡಾ.ಅಜಯಸಿಂಗ್​
  • ಕಲಬುರಗಿ ಜೋಡೆತ್ತುಗಳ ಪರ್ವ ಶುರು
 ಕಲಬುರಗಿ: ಜೇವರ್ಗಿ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಒತ್ತು ನೀಡಿ ತಂದೆಯಂತೆ ಸಹನೆ ಮೈಗೂಡಿಸಿಕೊಂಡು, ಸದಾ ಜನರೊಂದಿಗೆ ನಗುಮೊಗದಿಂದಲೇ ಮಾತನಾಡುವ ಡಾ.ಅಜಯ ಧರ್ಮಸಿಂಗ್​ ಅವರಿಗೆ ವರಿಷ್ಠರು ಮಂತ್ರಿ ಭಾಗ್ಯ ನೀಡುವ ಮೂಲಕ ಕಾಂಗ್ರೆಸ್​ ನಿಷ್ಠನಿಗೆ ಮಣೆ ಹಾಕಿದ್ದಾರೆ. ಇದರೊಂದಿಗೆ ಡಿ.ಕೆ. ಶಿವಕುಮಾರ್​ ಸರ್ಕಾರದಲ್ಲಿ ಜಿಲ್ಲೆಯ ಸಚಿವರ ಸಂಖ್ಯೆ 3ಕ್ಕೇರುವ ಮೂಲಕ ತೊಗರಿನಾಡು ರಾಜಕೀಯ ಶಕ್ತಿ ಕೇಂದ್ರ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.
ರಾಜಕಾರಣದಲ್ಲಿ ಕಲಬುರಗಿಯ ಜೋಡೆತ್ತು (ಲವ-ಕುಶ) ಎಂದೇ ಖ್ಯಾತಿ ಪಡೆದಿರುವ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್​ ಅವರಂತೆ ಈಗ ಡಾ.ಅಜಯಸಿಂಗ್​ ಮತ್ತು ಪ್ರಿಯಾಂಕ್​ ಖರ್ಗೆ ಅವರನ್ನು ಜೋಡೆತ್ತುಗಳೆಂದೇ ಬಿಂಬಿಸಲಾಗುತ್ತದೆ. ಇದರೊಂದಿಗೆ ಕರುನಾಡಿನ ರಾಜಕೀಯದಲ್ಲಿ ಈ ಜೋಡಿ ಮೋಡಿ ಮಾಡಲಿದೆ. ಜತೆಗೆ ಹೊಸ ಪ್ರಗತಿಯ ಮನ್ವಂತರ ಶುರುವಾಗಲಿದೆ ಎಂಬ ನಿರೀಕ್ಷೆ ಕೈಪಡೆಯಲ್ಲಿ ಮೂಡಿಸಿದೆ.
ರಾಜಕೀಯದಲ್ಲಿ ಬೆಳೆಯಬೇಕೆಂದರೆ ಅವಕಾಶಕ್ಕಾಗಿ ಕಾಯಬೇಕು ಎಂಬ ಮಾಜಿ ಸಿಎಂ ಧರ್ಮಸಿಂಗ್​ ಮಾತಿನಂತೆ ಪಕ್ಷದ ವರಿಷ್ಠರು, ಹಿರಿಯ ನಾಯಕರ ಸಲಹೆಯಂತೆ ಹೆಜ್ಜೆ ಇಡುತ್ತಿರುವ ಡಾ.ಅಜಯಸಿಂಗ್​ ಸಚಿವರಾಗುವ ಮೂಲಕ ಮುಖ್ಯಮಂತ್ರಿ ಕಂಡ ಜೇವರ್ಗಿ ಕ್ಷೇತ್ರಕ್ಕೆ ಎರಡು ದಶಕದ ಬಳಿಕ ಮಂತ್ರಿ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆಗೆ ಸಂಪುಟದಲ್ಲಿ ಅತಿ ಹೆಚ್ಚಿನ ಸ್ಥಾನ ಕೊಟ್ಟಂತಾಗಿದೆ. 
ತಂದೆ ಧರ್ಮಸಿಂಗ್​ ಗರಡಿಯಲ್ಲಿ ಬೆಳೆದಿರುವ ಡಾ.ಅಜಯಸಿಂಗ್​ 2013, 2018 ಮತ್ತು 2023ರಲ್ಲಿ ಸತತ ಮೂರು ಸಲ  ಜೇವರ್ಗಿ ಕ್ಷೇತ್ರದಿಂದ ಭರ್ಜರಿಯಾಗಿ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದಾರೆ. ಅತಿ ಕಡಿಮೆ ಜನಸಂಖ್ಯೆಯ ರಜಪೂತ ಸಮುದಾಯದರಾದರೂ ಲಿಂಗಾಯತ, ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ ಸೇರಿ ಎಲ್ಲ ಸಮಾಜದವರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಮತ್ತು ಸಹನಶೀಲ ಗುಣ ಅವರಲ್ಲಿದೆ. ಅಂತಲೇ ಅಳೆದು ತೂಗಿ ಹೈಕಮಾಂಡ್​ ಅವಕಾಶ ಕಲ್ಪಿಸಿದೆ. ಧರ್ಮಸಿಂಗ್​ ಅವರಂತೆ ಅಜಾತಶತ್ರು ಎಂದೇ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದು ಗಮನಾರ್ಹ.
ಮೊದಲ ಸಲ ವಿಧಾನಸಭೆ ಪ್ರವೇಶಿಸಿದಾಗಲೇ ಸಚಿವ ಸ್ಥಾನಕ್ಕೆ ಡಾ.ಅಜಯಸಿಂಗ್​ ಹೆಸರು ರೇಸ್​ನಲ್ಲಿತ್ತು. ಕೊನೇ ಳಿಗೆಯಲ್ಲಿ ಎರಡ್ಮೂರು ಸಲ ಅವಕಾಶ ತಪ್ಪಿದ್ದರೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಬದಲಿಗೆ ಪಕ್ಷದಲ್ಲಿ ಮಾಗುತ್ತಲೇ ಬಂದರು. ಅನುಭವಗಳಿಂದ ಮತ್ತಷ್ಟು ಗಟ್ಟಿಯಾದರು. ವರಿಷ್ಠರ ಸೂಚನೆಯಂತೆ ತೆಲಂಗಾಣ, ಆಂಧ್ರ, ಕೇರಳ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸಂಟಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವ ಮೂಲಕ ಗಮನ ಸೆಳೆದಿದ್ದರು. ಹೈಕಮಾಂಡ್​ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ದೂರದೃಷ್ಟಿ ಹಾಗೂ ಎಲ್ಲ ಜಾತಿ ಜನಾಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಪರಿಗಣಿಸಿ ಪಕ್ಷ ಮಂತ್ರಿ ಸ್ಥಾನ ನೀಡಿದೆ. 

ಕ್ಷೇತ್ರದ ಜನರ ಆರೋಗ್ಯ ರಕ್ಷಕ

ಡಾ.ಅಜಯ ಧರ್ಮಸಿಂಗ್​ ಸಂಘಟನಾ ಚತುರ. ಜತೆಗೆ ಜನರ ನಾಡಿಮಿಡಿತ ಬಲ್ಲ ವೈದ್ಯ. ವಿದ್ಯಾರ್ಥಿ ಕಾಂಗ್ರೆಸ್​ನಿಂದಲೇ ಸಂಟನೆ ಕೆಲಸ ಆರಂಭಿಸಿದರು. 1999-2009ವರೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿಯಾಗಿ, 2004ರಲ್ಲಿ ಕೆಪಿಸಿಸಿ ಸದಸ್ಯರಾದರು. 2008ರಲ್ಲಿ ಮೊದಲ ಸಲ ರಾಜ್ಯ ಯುವ ಕಾಂಗ್ರೆಸ್​ ಚುನಾವಣೆ ನೇತೃತ್ವ ವಹಿಸಿದ್ದ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್​ ಗಾಂಧಿ ಜತೆ ರಾಜ್ಯಾದ್ಯಂತ ಪ್ರವಾಸ ಮಾಡಿದರು. 2013ರ ಚುನಾವಣೆಯಲ್ಲಿ ಜೇವರ್ಗಿ ಕ್ಷೇತ್ರದಿಂದ 36,700 ಮತಗಳ ಅಂತರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಬಳಿಕ ಹಿಂತಿರುಗಿ ನೋಡದೆ ಸತತ ಮೂರು ಸಲ ಗೆಲ್ಲುವ ಮೂಲಕ ಹ್ಯಾಟ್ರಿಕ್​ ಹೀರೊ ಎನಿಸಿದರು. ಪ್ರಸ್ತುತ ಕೆಕೆಆರ್​ಡಿಬಿ ಅಧ್ಯಕ್ಷ. ವಿಧಾನಸಭೆ ಹಕ್ಕುಚ್ಯುತಿ ಸಮಿತಿ, ಹಿಂದುಳಿದ ವರ್ಗಗಳ ಸಮಿತಿ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕ್ರೀಡಾಪಟು ಸಹ ಆಗಿರುವ ಅವರು ಟೆನ್​ಪಿನ್​ ಬೌಲಿಂಗ್​ ಫೆಡರೇಷನ್​ ಆಫ್​ ಇಂಡಿಯಾ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಹೆಸರಿನಲ್ಲಿ ಫೌಂಡೇಷನ್​ ಆರಂಭಿಸಿ ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳಲ್ಲಿ ನಿರಂತರ ಉಚಿತ ಆರೋಗ್ಯ ಶಿಬಿರ ನಡೆಸಿ ಆರೋಗ್ಯ ರಕ್ಷಕರಾಗಿದ್ದಾರೆ. ಅಲ್ಲದೆ ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯ ತೊಡಗಿಸಿಕೊಂಡಿದ್ದಾರೆ.
"

ಪಕ್ಷದ ಹೈಕಮಾಂಡ್​ ಹಾಗೂ ಹಿರಿಯ ನಾಯಕರು ಸಚಿವ ಸ್ಥಾನ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸುವೆ. ವರಿಷ್ಠರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕಾಂಗ್ರೆಸ್​ಗೆ ಇನ್ನಷ್ಟು ಹೆಸರು ತರಲು ಪ್ರಯತ್ನಿಸುವೆ. ಜೇವರ್ಗಿ-ಯಡ್ರಾಮಿ ತಾಲೂಕು ಜನರ ಪ್ರೀತಿಗೆ ಸಂದ ಗೌರವ ಇದಾಗಿದೆ.

— > ಡಾ.ಅಜಯ ಧರ್ಮಸಿಂಗ್​ ನೂತನ ಸಚಿವ

"

ಧರ್ಮಸಿಂಗ್​ ಮುಖ್ಯಮಂತ್ರಿಯಾದ ನಂತರ ಜೇವರ್ಗಿ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಲಭಿಸಿರಲಿಲ್ಲ. ಈಗ ಡಾ.ಅಜಯಸಿಂಗ್​ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕ್ಷೇತ್ರಕ್ಕೆ ಆದ್ಯತೆ ನೀಡಿದಂತಾಗಿದೆ. ಎಲ್ಲ ಮಠಾಧೀಶರ ಪರವಾಗಿ ಶುಭಾಶಯ ಹೇಳುವೆ. ಜತೆಗೆ ಸಿಕ್ಕ ಅವಕಾಶ ಬಳಸಿಕೊಂಡು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಿ.

— > ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಸೊನ್ನ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net