ಮಹನೀಯರ ತ್ಯಾಗದ ಫಲದಿಂದ ರಾಜ್ಯೋದಯ

 ಅರಸೀಕೆರೆ ನಗರದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಡಾಲಿ ಧನಂಜಯ್ ಬ್ರಿಗೇಡ್ ವತಿಯಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನಟ ಡಾಲಿ ಧನಂಜಯ್, ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಶೇಖರಪ್ಪ, ಚಂದ್ರಶೇಖರ್, ಬಿಳಿಚೌಡಯ್ಯ, ಗಂಗಾಧರ್ ಇತರರಿದ್ದಾರೆ.
ಅರಸೀಕೆರೆ ನಗರದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಡಾಲಿ ಧನಂಜಯ್ ಬ್ರಿಗೇಡ್ ವತಿಯಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನಟ ಡಾಲಿ ಧನಂಜಯ್, ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಶೇಖರಪ್ಪ, ಚಂದ್ರಶೇಖರ್, ಬಿಳಿಚೌಡಯ್ಯ, ಗಂಗಾಧರ್ ಇತರರಿದ್ದಾರೆ.
Published on
ಅರಸೀಕೆರೆ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಮೊದಲ ಆದ್ಯತೆಯಾಗಬೇಕಿದೆ ಎಂದು ನಟ ಡಾಲಿ ಧನಂಜಯ್ ಹೇಳಿದರು.

ನಗರದ ಬಸವರಾಜೇಂದ್ರ ಪ್ರೌಢಶಾಲಾ ಆವರಣದಲ್ಲಿ ಡಾಲಿ ಧನಂಜಯ್ ಬ್ರಿಗೇಡ್ ವತಿಯಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅತ್ಯಂತ ಶ್ರೀಮಂತ ಭಾಷೆಗಳ ಪೈಕಿ ಕನ್ನಡಕ್ಕೆ ಅಗ್ರಸ್ಥಾನವಿದೆ ಏನ್ನುವುದೇ ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆದ ಹೋರಾಟವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಲವು ಮಹನೀಯರ ತ್ಯಾಗದ ಫಲವಾಗಿ ರಾಜ್ಯದ ಉದಯವಾಗಿದೆ. ತನ್ನದೇ ವಿಶೇಷತೆ ಹೊಂದಿರುವ ಭಾಷೆಯ ಹಿರಿಮೆ, ಗರಿಮೆಯನ್ನು ಪರಸರಿಸುವ ಕೆಲಸವನ್ನು ಕನ್ನಡ ಪರ ಸಂಘಟನೆಗಳು ಮಾಡಿಕೊಂಡು ಬರುತ್ತಿವೆ. ಜನ್ಮ ಪಡೆದ ಕರ್ಮಭೂಮಿ, ಕಲಿತ ಭಾಷೆ ಹಾಗೂ ಜೀವನಾಡಿಯಾಗಿರುವ ಜಲವನ್ನು ರಕ್ಷಿಸುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು ಎಂದು ಹೇಳಿದರು.

ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಜತೆಗೆ ವ್ಯಾಪಾರ-ವಹಿವಾಟು ಕೇಂದ್ರವಾಗಿ ಗುರುತಿಸಿಕೊಂಡಿರುವ ಅರಸೀಕೆರೆ ನಗರದಲ್ಲಿ ಸುಸಜ್ಜಿತ ಸಿನಿಮಾ ಚಿತ್ರಮಂದಿರ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಪ್ರೇಕ್ಷಕರ ಹಿತ ಮನಗಂಡು ಆಧುನಿಕ ಶೈಲಿಯ ವಿನೂತನ ಚಿತ್ರಮಂದಿರ ನಿರ್ಮಿಸುವ ಸಂಕಲ್ಪ ಮಾಡಿದ್ದೇನೆ. ಜನರನ್ನು ಸಿನಿಮಾ ವೀಕ್ಷಿಸಲು ಥಿಯೇಟರ್‌ಗಳತ್ತ ಸೆಳೆಯುವ ಕೆಲಸ ನಡೆಯಬೇಕು. ಪಾಲಕರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ದಾಖಲಿಸಿ ಶತಮಾನಗಳಿಂದ ನಡೆದು ಬಂದಿರುವ ಪರಂಪರೆ ಉಳಿವಿಗೆ ಕಂಕಣಬದ್ಧರಾಗಿ ಕೆಲಸ ಮಾಡಬೇಕಿದೆ ಎಂದು ವ್ಯಾಸಂಗದ ಅವಧಿಯ ಕ್ಷಣಗಳನ್ನು ಮೆಲುಕು ಹಾಕಿದರು.

ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು. ಚಿಕ್ಕ ಹಳ್ಳಿಯಲ್ಲಿ ಜನಿಸಿದ ಯುವಕ ಧನಂಜಯ್ ಹಿರಿಯ ಕಲಾವಿದ ದೊಡ್ಡಣ್ಣ ರೀತಿ ಸಿನಿಮಾ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎನ್ನುವ ಆಶಯ ನಮ್ಮೆಲ್ಲರದ್ದಾಗಿದೆ. ಮುಂಬರುವ ದಿನಗಳಲ್ಲಿ ಅರಸೀ ಉತ್ಸವ ಆಯೋಜಿಸಿ ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನು ಗೌರವಿಸುವ ಜತೆಗೆ ನಾಡು, ನುಡಿ ಹಾಗೂ ಸಂಸ್ಕೃತಿ ಹಿರಿಮೆಯನ್ನು ಪಸರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಘೋಷಿಸಿದರು.

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಡಾ.ಶಿವಕುಮಾರ್, ವೈದ್ಯ ಡಾ.ನಾಗಭೂಷಣ್ ಒಳಗೊಂಡಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ನಿರ್ಮಾಪಕ ಕಾಳೆನಹಳ್ಳಿ ಅಡವಿಸ್ವಾಮಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ನಿರ್ದೇಶಕ ಹೊಸೂರು ಗಂಗಾಧರ್, ಜಿಪಂ ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ನಗರಸಭೆ ಮಾಜಿ ಅಧ್ಯಕ್ಷ ಸಮೀವುಲ್ಲಾ, ನೊಳಂಬ ಲಿಂಗಾಯತ ಸಂಘದ ಉಪ ಸಮಿತಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ಡಾಲಿ ಧನಂಜಯ್ ಬ್ರಿಗೇಡ್ ಅಧ್ಯಕ್ಷ ಅಂಬರೀಶ್, ಉಪಾಧ್ಯಕ್ಷ ಜಿತೇಂದ್ರ, ಸಹಕಾರ್ಯದರ್ಶಿ ಸಿದ್ದರಾಮೇಶ್ , ಸಂಘಟನಾ ಕಾರ್ಯದರ್ಶಿ ಸ್ವರೂಪ್ ಕೃಷ್ಣ , ಖಜಾಂಚಿ ರಮೇಶ್, ನಿರ್ದೇಶಕರಾದ ಮೆಡಿಕಲ್ ಸ್ವಾಮಿ ಭರತ್ , ಸತೀಶ್ ,ಕಾಟೀಕೆರೆ ಸುನಿಲ್, ವಿನಯ್ , ಹೇಮಾ ಲಿಂಗೇಗೌಡ ರೋಹಿತ್, ಜಯಣ್ಣ, ತಾಪಂ ಮಾಜಿ ಸದಸ್ಯರಾದ ಕಾಂತರಾಜ್, ಶೇಖರನಾಯ್ಕ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net