ಕೆಐಐಟಿ ಆಯೋಜಿಸಿದ್ದ ಎಫ್‌ಐವಿಬಿ ವಲ್ಡ್‌ಬೀಚ್ ವಾಲಿಬಾಲ್ ಪ್ರೊ ಟೂರ್ನಮೆಂಟ್ ಮುಕ್ತಾಯ.

ಪದಕ ವಿಜೇತರನ್ನು ಸನ್ಮಾನಿಸಿದ ಡಾ. ಅಚ್ಯುತ ಸಮಂತ
ಪದಕ ವಿಜೇತರನ್ನು ಸನ್ಮಾನಿಸಿದ ಡಾ. ಅಚ್ಯುತ ಸಮಂತ
Published on
ಭುವನೇಶ್ವರ: ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರೀಯಲ್ ಟೆಕ್ನಾಲಜಿ (ಕೆಐಐಟಿ) ಡೀಮ್ಡ್ ವಿಶ್ವವಿದ್ಯಾಲಯದ ದ್ಯುತಿ ಚಂದ್ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಎಫ್‌ಐವಿಬಿ ವರ್ಲ್ಡ್ ಬೀಚ್ ಪ್ರೊ ವಾಲಿಬಾಲ್ ಟೂರ್ನಮೆಂಟ್ ಭಾನುವಾರ ರಾತ್ರಿ ಮುಕ್ತಾಯಗೊಂಡಿತು.
ಮಾರ್ಚ್ 4 ರಿಂದ ಐದು ದಿನಗಳ ಕಾಲ ನಡೆದ ಟೂರ್ನಮೆಂಟ್‌ನಲ್ಲಿ 52 ದೇಶಗಳ 83 ತಂಡಗಳು ಮತ್ತು 300 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ಮೂಲಕ ಕ್ರೀಡಾಕೂಟದಲ್ಲಿ ಪ್ರಪಂಚದ ಅಥ್ಲೀಟ್‌ಗಳು ಸಮಾಗಮಗೊಂಡಿದ್ದು ವಿಶೇಷವಾಗಿತ್ತು.
ಅಂತಿಮ ದಿನದ ಆರಂಭದಲ್ಲಿ ಮಹಿಳಾ ಮತ್ತು ಪುರುಷರ ತಂಡಗಳು ಕಂಚಿಗಾಗಿ ಪೈಪೋಟಿ ನಡೆಸಿದ್ದು ಕಂಡು ಬಂತು. ನಂತರ ದಿನದ ಅಂತ್ಯದಲ್ಲಿ ಪುರುಷರ ತಂಡಗಳು ಚಿನ್ನದ ಪದಕಕ್ಕಾಗಿ ಸೆಣೆಸಾಟ ನಡೆಸಿದವು. ಇನ್ನೂ ಮಹಿಳೆಯರ ಫೈನಲ್‌ನಲ್ಲಿ ಯುಎಸ್‌ಎ ಮತ್ತು ಜಪಾನ್ ತಂಡಗಳು ಹಾಗೂ ಪುರುಷರ ಫೈನಲ್‌ನಲ್ಲಿ ಜೆಕ್ ಗಣರಾಜ್ಯ ಮತ್ತು ಬೆಲ್ಜಿಯಂ ನಡುವೆ ಉತ್ತಮ ಪೈಪೋಟಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಕೆಐಐಟಿ, ಕೆಐಎಸ್‌ಎಸ್ ಹಾಗೂ ಕೆಐಎಂಎಸ್‌ನ ಸಂಸ್ಥಾಪಕರು, ವಾಲಿಬಾಲ್ ಫೌಂಡೇಶನ್‌ನ (ಊಐ್ಖಆ) ಕಾರ್ಯಕಾರಿ ಮಂಡಳಿಯ ಸದಸ್ಯರು, ಭಾರತೀಯ ವಾಲಿಬಾಲ್ ಫೆಡರೇಶನ್‌ನ ಮುಖ್ಯ ಪೋಷಕರು ಮತ್ತು ಒಡಿಶಾ ವಾಲಿಬಾಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ. ಅಚ್ಯುತ ಸಮಂತ ಅವರು ಸ್ವಾಗತ ಮತ್ತು ಅಭಿನಂದನಾ ಭಾಷಣ ಮಾಡಿದರು.
ಎಫ್‌ಐವಿಬಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ವಿಜೇತ ತಂಡಗಳನ್ನು ಅಭಿನಂದಿಸಿದರು. ಒಡಿಶಾ ರಾಜ್ಯಪಾಲರಾದ ಡಾ. ಹರಿಬಾಬು ಕಂಭಂಪತಿ ಅವರ ಸಂದೇಶವನ್ನು ಸಮಾರಂಭದಲ್ಲಿ ವಾಚಿಸಲಾಯಿತು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರು ಮತ್ತು ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವೀಯ ಅವರ ವಿಡಿಯೊ ಸಂದೇಶವನ್ನು ಪ್ರದರ್ಶನ ಮಾಡಲಾಯಿತು.
ಕೆಐಐಟಿ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಜ್ಞಾನ ರಂಜನ್ ಮೊಹಂತಿ ಮತ್ತು ಕೆಐಐಟಿಯ ಸಲಹೆಗಾರ (ಕ್ರೀಡೆ) ಉಪೇಂದ್ರ ಕುಮಾರ್ ಮೊಹಂತಿ, ಕೆಐಐಟಿ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸರಂಜಿತ್ ಸಿಂಗ್ ಮತ್ತು ನಟ ದೇಬಾಶಿಶ್ ಪಾತ್ರ ಅವರು ಪದಕಗಳನ್ನು ಪ್ರದಾನ ಮಾಡಿದರು. ಈ ವೇಳೆ ಚಾಂಪಿಯನ್‌ಶಿಪ್ ಅನ್ನು ಯಶಸ್ವಿಯಾಗಿಸಲು ಶ್ರಮಿಸಿದ ಪಂದ್ಯಾವಳಿಯ ತೀರ್ಪುಗಾರರು ಮತ್ತು ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ವಿಜೇತ ತಂಡಗಳು: ಮಹಿಳಾ ವಿಭಾಗದಲ್ಲಿ ಯುಎಸ್‌ಎ ಚಿನ್ನ ಪಡೆದರೆ, ಜಪಾನ್ ಬೆಳ್ಳಿ ಮತ್ತು ಯುಎಸ್‌ಎ ಕಂಚು ಗಳಿಸಿತು. ಪುರುಷರ ವಿಭಾಗದಲ್ಲಿ ಬೆಲ್ಜಿಯಂ ಚಿನ್ನ ಗೆದ್ದರೆ, ಜೆಕ್ ಗಣರಾಜ್ಯ ಬೆಳ್ಳಿ ಮತ್ತು ಇಸ್ರೇಲ್ ತಂಡಗಳು ಕಂಚು ಪಡೆದವು.
ವಿಜೇತರಿಗೆ ಡಾ. ಅಚ್ಯುತ ಸಮಂತ ಅಭಿನಂದನೆ
ಪದಕ ವಿಜೇತರನ್ನು ಸನ್ಮಾನಿಸಿ ಮಾತನಾಡಿದ ಡಾ. ಅಚ್ಯುತ ಸಮಂತ ನಮ್ಮ ಕ್ಯಾಂಪಸ್‌ನಲ್ಲಿ ಪ್ರಪಂಚದಾದ್ಯಂತದ ಕ್ರೀಡಾಪಟುಗಳು ಉತ್ತಮ ಉತ್ಸಾಹದಿಂದ ಸ್ಪರ್ಧಿಸುವುದನ್ನು ನೋಡುವುದು ಅದ್ಭುತವಾಗಿದೆ. ಕೆಐಐಟಿಯಲ್ಲಿ ಚಾಂಪಿಯನ್‌ಶಿಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದು ತುಂಬಾ ಸಂತೋಷ ನೀಡಿತು. ಈ ಚಾಂಪಿಯನ್‌ಶಿಪ್ ಯಶಸ್ಸಿಗೆ ಸಹಕರಿಸಿದ ಎಫ್‌ಐವಿಬಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಕೃತಜ್ಞತೆಗಳು ಎಂದು ಹೇಳಿದರು.
ಆತಿಥ್ಯ, ಸೌಲಭ್ಯ ಪ್ರಶಂಸಿಸಿದ ಅಥ್ಲೀಟ್‌ಗಳು, ಅಧಿಕಾರಿಗಳು
ಟೂರ್ನಮೆಂಟ್‌ಗೆ ಆಗಮಿಸಿದ್ದ ಕ್ರೀಡಾಪಟುಗಳು, ತೀರ್ಪುಗಾರರು ಮತ್ತು ಅಧಿಕಾರಿಗಳಿಗೆ ಕೆಐಐಟಿ ಕ್ರೀಡಾಸಂಕೀರ್ಣಗಳಲ್ಲಿ ವಸತಿ, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ವಿಶ್ವಮಟ್ಟದಲ್ಲಿ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿತ್ತು. ಈ ಎಲ್ಲಾ ಸೌಲಭ್ಯಗಳನ್ನು, ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಸಲು ಸೃಷ್ಟಿಸಿದ್ದ ವೃತ್ತಿಪರ ವಾತಾವರಣಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಯಿತು. ವಿಶ್ವ ದರ್ಜೆಯ ಕ್ರೀಡಾ ಮೂಲಸೌಕರ್ಯವನ್ನು ಆಟಗಾರರು ಮತ್ತು ಅಧಿಕಾರಿಗಳು ಈ ವೇಳೆ ಶ್ಲಾಘಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net