ಬೆಂಗ್ಳೂರಲ್ಲಿ ಆಟೋ ದರ ಮತ್ತೆ ದುಬಾರಿ: ಆ್ಯಪ್‌ನಲ್ಲಿ ನಿಗದಿಗಿಂತ 3 ಪಟ್ಟು ಅಧಿಕ ದರ ವಸೂಲಿ- Auto fares in Bengaluru are expensive again

ಆ್ಯಪ್​​ನಲ್ಲಿ 5.2 ಕಿಮೀಗೆ 202 ರೂ.ವರೆಗೆ ದರ ನಮೂದು
ಆ್ಯಪ್​​ನಲ್ಲಿ 5.2 ಕಿಮೀಗೆ 202 ರೂ.ವರೆಗೆ ದರ ನಮೂದು
Published on

ಬೆಂಗಳೂರು: ರಾಜಧಾನಿಯಲ್ಲಿ ಆಟೋ ದರ ಮತ್ತೆ ದುಬಾರಿ ಆಗಿದೆ.

ಬೈಕ್ ಟ್ಯಾಕ್ಸಿಗಳ ಮೇಲಿನ ಸಂಪೂರ್ಣ ನಿಷೇಧ ತೆರವುಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸರ್ಕಾರವು, ಬೈಕ್ ಟ್ಯಾಕ್ಸಿಗಳು ಕಡಿಮೆ ಸುರಕ್ಷತಾ ಮಾನದಂಡ ಹೊಂದಿವೆ.

ಹೆಚ್ಚಿನ ಅಪಘಾತದ ಅಪಾಯವಿದೆ ಮತ್ತು ಇವು ಸಾರ್ವಜನಿಕ ಸಾರಿಗೆ ವಾಹನಗಳಲ್ಲ ಎಂದು ತಿಳಿಸಿದೆ. ಇದರ ಬೆನ್ನಲ್ಲೇ ವೈಟ್ ಬೋರ್ಡ್ ಹೊಂದಿರುವ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಬಳಕೆಯ ಬೈಕ್ ಟ್ಯಾಕ್ಸಿಗಳಾಗಿ ನಡೆಸುತ್ತಿರುವವರ ವಿರುದ್ಧ ಸಾರಿಗೆ ಇಲಾಖೆ ಕ್ರಮ ತೆಗೆದುಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಓಲಾ, ಊಬರ್, ರ‌್ಯಾಪಿಡೋ ಹಾಗೂ ‘ನಮ್ಮ ಯಾತ್ರಿ’ ಸೇರಿ ಇತ್ಯಾದಿ ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು, ಸರ್ಕಾರ ನಿಗದಿಪಡಿಸಿದ್ದ ದರಗಿಂತ 2-3 ಪಟ್ಟು ಅಧಿಕವಾಗಿ ಪ್ರಯಾಣಿಕರಿಂದ ಸುಲಿಗೆ ಮಾಡುತ್ತಿವೆ. ಪೀಕ್ ಅವರ್‌ನಲ್ಲಿ ಇನ್ನಷ್ಟು ಯದ್ವಾತದ್ವಾ ದರ ವಸೂಲಿ ಮಾಡುತ್ತಿವೆ.

ದರ ನಮೂದಿಸಿ ಸುಲಿಗೆ ಮಾಡುತ್ತಿರುವ ಬಗ್ಗೆ ಸಾರಿಗೆ ಇಲಾಖೆ , ಕೆಲವೊಮ್ಮೆ ಎಚ್ಚರಿಕೆ ನೀಡಿದ್ದಾಗ ಅಗ್ರಿಗೇಟರ್ ಕಂಪನಿಗಳು ಒಂದರೆಡು ದಿನ ಮಾತ್ರ ಸರ್ಕಾರ ನಿಗದಿಪಡಿಸಿದ ದರವನ್ನು ನಮೂದಿಸುತ್ತಿವೆ. ಬಳಿಕ, ನಿಗದಿತ ದರಗಿಂತ 2 ಪಟ್ಟು ಅಧಿಕವಾಗಿ ನಮೂದಿಸಿ ವಸೂಲಿ ಮಾಡುತ್ತಿವೆ. ಈ ದಂಧೆಯು ನಿರಂತರವಾಗಿ ನಡೆಯುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಕಡಿವಾಣ ಹಾಕಲು ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಸಿಲಿಕಾನ್ ಸಿಟಿಯಲ್ಲಿ ಅಂದಾಜು 3 ಲಕ್ಷಕ್ಕೂ ಅಧಿಕ ಆಟೋಗಳಿವೆ. ಆ್ಯಪ್ ಆಧಾರಿತ ಸೇವೆಗೆ ಸರ್ಕಾರ ಅನುಮತಿ ಕೊಟ್ಟಿದೆ. ಆ್ಯಪ್‌ನಲ್ಲಿ ಬುಕಿಂಗ್ ಸೇವೆ ಒದಗಿಸುವ ಅಗ್ರಿಗೇಟರ್ ಕಂಪನಿಗಳಿಗೆ ಇಂತಿಷ್ಟು ದರ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಓಲಾ, ಊಬರ್, ರ‌್ಯಾಪಿಡೋ, ಹಾಗೂ ‘ನಮ್ಮ ಯಾತ್ರಿ’ ಸೇರಿ ಇತ್ಯಾದಿ ಅಗ್ರಿಗೇಟರ್ ಆ್ಯಪ್‌ಗಳಲ್ಲಿ ಪ್ರಯಾಣಿಕರಿಗೆ ಬುಕಿಂಗ್ ಸೇವೆ ಕಲ್ಪಿಸುತ್ತಿವೆ. ಚಾಲಕರು ದುಬಾರಿ ಬೆಲೆ ಕೇಳುವುದು ಮತ್ತು ನಿಗದಿತ ಸ್ಥಳಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ರಾಜಧಾನಿಯ ಬಹುತೇಕ ಜನರು ಆ್ಯಪ್‌ನಲ್ಲಿ ಆಟೋರಿಕ್ಷಾ ಬುಕಿಂಗ್ ಮಾಡುತ್ತಾರೆ. ಆ್ಯಪ್ ಆಧಾರಿತ ಸೇವೆ ಚೆನ್ನಾಗಿದ್ದರೂ ಪರಿಸ್ಥಿತಿಯ ಲಾಭ ಪಡೆದು ನಿಯಮಬಾಹಿರವಾಗಿ ಅಗ್ರಿಗೇಟರ್ ಕಂಪನಿಗಳು, ದರ ವಸೂಲಿ ಮಾಡುವ ಮೂಲಕ ಅಡ್ಡದಾರಿಯಲ್ಲಿ ಕೋಟ್ಯಂತರ ರೂ. ಹಣ ಮಾಡಿಕೊಳ್ಳುತ್ತಿವೆ.
3 ಕಿಮೀಗೆ 120-150 ವಸೂಲಿ
ಪ್ರತಿನಿತ್ಯ ಆ್ಯಪ್ ಆಧಾರಿತ ಆಟೋಗಳ ಚಾಲಕರು ಹಾಗೂ ಪ್ರಯಾಣಿಕರ ನಡುವೆ ಒಂದಿಲ್ಲೊಂದು ಕಾರಣಕ್ಕೆ ವಾಗ್ವಾದ ನಡೆಯುತ್ತಿವೆ. ಕೆಲವೊಮ್ಮೆ ಚಾಲಕರು ಪ್ರಯಾಣಿಕರ ಜೊತೆ ದುಂಡಾವರ್ತನೆ ತೋರುತ್ತಿರುವ ಘಟನೆಗಳು ಅಗಾಗ್ಗೆ ನಡೆಯುತ್ತಿವೆ. ಪಿಕ್ ಅವರ್ ಅಥವಾ ಮಳೆ ಬಂದಾಗ ಆ್ಯಪ್‌ನಲ್ಲಿ ನಿಗದಿಗಿಂತ 3 ಪಟ್ಟು ಅಧಿಕ ದರ ತೋರಿಸುತ್ತದೆ. ಕೆಲವೊಮ್ಮೆ ಬುಕಿಂಗ್ ಮಾಡಿದಾಗ 200 ರೂ.ಅಸುಪಾಸಿನಲ್ಲಿ ತೋರಿಸುವ ದರ, ಆಟೋ ಇಳಿದಾಗ 230-250 ರೂ.ಗೆ ಏರಿಕೆಯಾಗುತ್ತದೆ. ಚಾಲಕರು ಹೆಚ್ಚು ಮೊತ್ತದ ಕೇಳಿದ್ದ ಬಗ್ಗೆ ದೂರು ದಾಖಲಿಸಲು ಆ್ಯಪ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಬರೀ ಕಮಿಷನ್‌ಗಾಗಿ ಸೇವೆ ನೀಡುತ್ತಿರುವ ಅಗ್ರಿಗೇಟರ್ ಆ್ಯಪ್‌ಗಳು, ತಡವಾಗಿ ಆಟೋ ಬರಲಿದೆ ಎಂಬ ಕಾರಣಕ್ಕಾಗಿ ಟ್ರಿಪ್ ಕ್ಯಾನ್ಸಲ್ ಮಾಡಿದರೆ ಪ್ರಯಾಣಿಕರಿಗೆ 20 ರೂ. ದಂಡ ವಿಧಿಸುತ್ತಿವೆ. ಬುಕಿಂಗ್ ತೆಗೆದುಕೊಳ್ಳದಿದ್ದರೆ ಟಿಪ್ ಮೂಲಕ ಬುಕಿಂಗ್ ನೀಡುವ ಆ್ಯಪ್‌ಗಳು 2-3 ಕಿಮೀಗೆ ಬರೋಬ್ಬರಿ 120-150 ರೂ. ದರ ನಿಗದಿಪಡಿಸುತ್ತಿವೆ.
ಡಿಜಿಟಲ್ ಮೀಟರ್‌ಗೆ ಒಪ್ಪದ ಆಟೋದವರು:
ನಗರದಲ್ಲಿ ಓಡಾಡುವ ಆಟೋಗಳಿಗೆ ಮೀಟರ್ ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿ ಪ್ರತಿ ಎರಡು ಕಿಮೀ.ಗೆ 36 ರೂ.ದರ ನಿಗದಿಪಡಿಸಿದೆ. ಆದರೆ, ನಗರದಲ್ಲಿರುವ ಒಟ್ಟು ಆಟೋಗಳ ಪೈಕಿ ಶೇ.70 ಆಟೋಗಳು ಆ್ಯಪ್ ಆಧಾರಿತ ಸೇವೆ ನೀಡುತ್ತಿದ್ದು,ಡಿಜಿಟಲ್ ಮೀಟರ್ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಬಹುತೇಕ ಆಟೋಗಳಿಗೆ ಮೀಟರ್ ಇದ್ದರೂ ಹಾಕುತ್ತಿಲ್ಲ.ಕೆಲ ಆಟೋಗಳು ಮಾತ್ರ ಡಿಜಿಟಲ್ ಮೀಟರ್ ನಿಯಮ ಪಾಲಿಸುತ್ತಿವೆ. ಕೆಲ ಸಂದರ್ಭದಲ್ಲಿ ಮೀಟರ್ ಮೇಲೆ 10 ಅಥವಾ 20 ರೂ.ಕೇಳುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆ ಹೆಚ್ಚಿನ ಹಣ ಕೊಟ್ಟರೆ ಮಾತ್ರ ಆಟೋಗಳು ಬರಲಿವೆ. ಮನೆಗೆ ಹೋಗುವ ಧಾವಂತದಲ್ಲಿರುವ ಪ್ರಯಾಣಿಕರು ಅನಿವಾರ್ಯವಾಗಿ ಚಾಲಕರು ಕೇಳಿದಷ್ಟೂ ಹಣ ನೀಡಿ ಪ್ರಯಾಣಿಸುವ ಸ್ಥಿತಿ ಇದೆ.

ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಮನಬಂದಂತೆ ದರ ನಮೂದಿಸುತ್ತಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಬಹುತೇಕ ಆಟೋದವರು ನಿಗದಿತಕ್ಕಿಂತ ಹೆಚ್ಚು ಹಣ ಕೇಳುತ್ತಾರೆ. ಕೆಲವರು ಮಾತ್ರ ಮೀಟರ್ ಹಾಕುತ್ತಾರೆ.ಬೈಕ್ ಟ್ಯಾಕ್ಸಿಗೆ ಸಂಬಂಧಪಟ್ಟಂತೆ ಮಾನದಂಡ ಹೊರಡಿಸಬೇಕು.

ಚೇತನ್. ಪ್ರಯಾಣಿಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net