ಮೇವಿಗೂ ತಟ್ಟಿದ್ದ ಬರದ ಬವಣೆ

ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಹಳ್ಳಿ ಗ್ರಾಮದಲ್ಲಿ ಮೇವಿನ ಕೊರತೆಯಿಂದ ಬಡಕಲಾಗಿರುವ ಹಸುಗಳು.
ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಹಳ್ಳಿ ಗ್ರಾಮದಲ್ಲಿ ಮೇವಿನ ಕೊರತೆಯಿಂದ ಬಡಕಲಾಗಿರುವ ಹಸುಗಳು.
Published on

ಪ್ರಮುಖ ಮುಖ್ಯಾಂಶಗಳು

  • ದಿನದಿಂದ ದಿನಕ್ಕೆ ಮೇವಿನ ಕೊರತೆ
  • ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿ

ಗುಂಡ್ಲುಪೇಟೆ:

ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಮೇವಿನ ಕೊರತೆ ಉಲ್ಬಣಿಸುತ್ತಿದ್ದು, ಕಾಡಂಚಿನ ಗ್ರಾಮಗಳಲ್ಲಿ ಅದರಲ್ಲಿಯೂ ಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಹೈನುಗಾರರಿಗೆ ಸವಾಲಾಗಿ ಪರಿಣಮಿಸಿದೆ.

ಈ ನಡುವೆ ಮೇಕೆಗಳು ಹಾಗೂ ಹಸು ಎತ್ತುಗಳಿಗೆ ಸಮರ್ಪಕ ಮೇವು ಪೂರೈಸಲು ಸಾಧ್ಯವಾಗದ ಕಾರಣ ಅವುಗಳನ್ನು ತೆರಕಣಾಂಬಿ ಸಂತೆಗೆ ಕೊಂಡೊಯ್ದು ಅಡ್ಡಾದಿಡ್ಡಿ ಬೆಲೆಯಲ್ಲಿ ಮಾರುತ್ತಿದ್ದಾರೆ. ಎರಡು ವರ್ಷಗಳಿಂದ ಮಳೆಬೀಳದ ಕಾರಣ ಕೆರೆಕಟ್ಟೆಗಳಿಗೆ ನೀರು ಹರಿಯದೆ ಬತ್ತಿವೆ. ರೈತರು ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಮೇವಿಗೂ ತತ್ವಾರ ಉಂಟಾಗಿದೆ. ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸದ ಪರಿಣಾಮ ದಿನೇ ದಿನೆ ಅಂತರ್ಜಲಮಟ್ಟ ಕುಸಿಯುತ್ತಿದೆ. ತಾಲೂಕಿನಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರಗಾಲ ಎದುರಾಗಿದೆ. ಮಳೆಬಿದ್ದಿದ್ದರೆ ಉಳುಮೆ ಕಾರ್ಯಕ್ಕೆ ಬಳಕೆಯಾಗುತ್ತಿದ್ದ ಎತ್ತುಗಳಿಗೂ ಕೆಲಸ ಇಲ್ಲದಂತಾಗಿರುವುದರಿಂದ ಅವುಗಳನ್ನು ಸಾಕುವುದು ರೈತರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ.
ಬಂಡೀಪುರ ಅರಣ್ಯದೊಳಗೆ ಜಾನುವಾರು ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದ ಪರಿಣಾಮ ಕಾಡಂಚಿನ ಗ್ರಾಮಗಳ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಬಫರ್ ವಲಯದ ಗುಡ್ಡಗಳಲ್ಲಿಯೂ ಹುಲಿ ಚಿರತೆಗಳ ಕಾಟ ಹೆಚ್ಚಾಗಿದ್ದರಿಂದ ಅಲ್ಲಿನ ಹಸು-ಕರುಗಳನ್ನು ಮೇಯಿಸಲು ಸಾಧ್ಯವಿಲ್ಲದಂತಾಗಿದ್ದು, ಆಹಾರ ಕೊರತೆಯಿಂದ ಅವು ದಿನೇ ದಿನೆ ಕೃಶವಾಗುತ್ತಿವೆ. ಇದರಿಂದ ಮಳೆಗಾಲದಲ್ಲಿ ಚಿಗುರುವ ಹುಲ್ಲುಸೊಪ್ಪುಗಳನ್ನು ತಿಂದು ಬದುಕುವ ಆಡು ಮೇಕೆಗಳಿಗೂ ಮೇವು ದೊರಕದೆ ಕುರಿಗಾಹಿಗಳು ಪರದಾಡುತ್ತಿದ್ದಾರೆ.
ಇನ್ನು ಹಾಲು ಕರೆಯುವ ರಾಸುಗಳಿಗೆ ನೀಡಲು ಹೈನುಗಾರರು ನೆರೆ ತಾಲೂಕುಗಳಿಂದ ಮುಸುಕಿನ ಜೋಳದ ಮೇವು, ಜೋಳದಕಡ್ಡಿ ಕಂತೆ ಹಾಗೂ ಭತ್ತದ ಹುಲ್ಲಿನ ಪಿಂಡಿಗಳನ್ನು ಖರೀದಿಸುತ್ತಿದ್ದಾರೆ. ಆದರೆ ಸಣ್ಣಪುಟ್ಟ ಕರುಗಳು, ಹಾಲು ಕೊಡದೆ ಬಡಕಲಾದ ಹಸುಗಳು ಉಳುಮೆ ಮಾಡಲು ಸಾಧ್ಯವಾಗದ ಎತ್ತುಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ ರಾಸುಗಳನ್ನು ಕಸಾಯಿಖಾನೆಯವರೇ ಖರೀದಿಸಿ ಗೂಡ್ಸ್ ಆಟೋಗಳಲ್ಲಿ ತುಂಬಿಕೊಂಡು ಟಾರ್ಪಲ್ ಮುಚ್ಚಿ ಸಾಗಿಸುತ್ತಿದ್ದಾರೆ. ಹಸು ಕರುಗಳನ್ನು ಸಾಕಲು ಮೇವಿನ ಅಭಾವವಿರುವುದರಿಂದ ಇತರ ರೈತರೂ ಅವುಗಳ ಖರೀದಿಗೆ ಮುಂದಾಗುತ್ತಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಎತ್ತುಗಳನ್ನು ಅಡ್ದಾ ದಿಡ್ಡಿ ಬೆಲೆಗೆ ಖರೀದಿಸುತ್ತಿದ್ದಾರೆ.
ಇಷ್ಟಾದರೂ ಜಿಲ್ಲಾಡಳಿತ ಜಾನುವಾರುಗಳ ಮೇವಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇತ್ತೀಚೆಗೆ ಸರ್ಕಾರದಲ್ಲಿ ಪಶುಸಂಗೋಪನಾ ಇಲಾಖೆಯ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ (ಸ್ವ) ಕ್ಷೇತ್ರದಲ್ಲಿಯೇ ಜಾನುವಾರುಗಳ ಮೇವಿಗೆ ತೊಂದರೆಯಾಗಿದ್ದರೂ ಜಿಲ್ಲಾಡಳಿತ ಮೇವು ಪೂರೈಸಲು ವಿಫಲವಾಗಿರುವ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ನೀರಾವರಿ ಜಮೀನುಗಳಲ್ಲಿ ಕೆಲವರು ಸ್ವಲ್ಪ ಪ್ರಮಾಣದಲ್ಲಿ ಮೇವು ಬೆಳೆಯುತ್ತಿದ್ದಾರೆ. ಆದರೆ ಮಧ್ಯವರ್ತಿಗಳು ಅಧಿಕ ಲಾಭ ಪಡೆಯಬೇಕೆಂಬ ಉದ್ದೇಶದಿಂದ ರೈತರು ಕಷ್ಟಪಟ್ಟು ಬೆಳದ ಮೇವನ್ನು ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಸಾಗಿಸಲು ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಮೇವಿಗೆ ಅಷ್ಟು ಪ್ರಮಾಣದ ಹಣ ಕೊಡಲು ಸಾಧ್ಯವಾಗದ ಸ್ಥಳೀಯರ ಜಾನುವಾರುಗಳಿಗೆ ಮೇವಿನ ಕೊರತೆಯಾಗುತ್ತಿದೆ.

ಎರಡು ವರ್ಷಗಳಿಂದ ಮಳೆಬೀಳದೆ ಜನಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರದಿಂದ ಯಾವುದೇ ನೆರವು ದೊರಕುತ್ತಿಲ್ಲ. ಕಳೆದ ಎರಡು ಮೂರು ತಿಂಗಳಿನಿಂದ ಜಾನುವಾರುಗಳ ಮೇವಿಗೆ ತುಂಬಾ ತೊಂದರೆಯಾಗಿದೆ. ಗ್ರಾಮಪಂಚಾಯಿತಿಗಳು ನಿರ್ಮಿಸಿರುವ ನೀರಿನ ತೊಟ್ಟಿ ಹೊರತು ಬೇರೆಲ್ಲೂ ಜಾನುವಾರುಗಳಿಗೆ ಕುಡಿಯುವ ನೀರು ದೊರಕುತ್ತಿಲ್ಲ. ಗುಡ್ಡದತ್ತ ಮೇಯಲು ಹೋಗುವ ರಾಸುಗಳಿಗೆ ಮೇವು ನೀರು ಸಿಗದೆ ಬಿಸಿಲಿನ ತಾಪಕ್ಕೆ ನಿತ್ರಾಣವಾಗಿ ಕುಸಿದುಬೀಳುತ್ತಿವೆ. ಇನ್ನಾದರೂ ಜಿಲ್ಲಾಡಳಿತ ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮಕೈಗೊಳ್ಳಬೇಕು.

ಸ್ವಾಮಪ್ಪ ಕಿಲಗೆರೆ ಗ್ರಾಮಸ್ಥ
ನೀರಾವರಿ ಹೊಂದಿರುವ ರೈತರಿಗೆ ಮೇವು ಬಿತ್ತನೆ, ಕಿರು ಪೊಟ್ಟಣ ವಿತರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿ 28 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ಮೇವಿನ ಬೀಜ ಖರೀದಿಸಿ ಈ ವಾರದಲ್ಲಿ ವಿತರಣೆ ಮಾಡುವ ಸಾಧ್ಯತೆಯಿದೆ. ಇದು ಮೇವಾಗಿ ದೊರಕಲು 45 ದಿನಗಳು ಬೇಕಾಗುತ್ತದೆ. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದ ನಂತರವಷ್ಟೇ ಮೇವು ಪೂರೈಕೆ, ನೆರೆ ರಾಜ್ಯಗಳಿಗೆ ಸಾಗಾಣಿಕೆ ತಡೆಗಟ್ಟಲು ಸಾಧ್ಯವಾಗುತ್ತದೆ. ಶನಿವಾರ ಜಿಲ್ಲಾ ಕೇಂದ್ರದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಗೋಶಾಲೆ ಸ್ಥಾಪನೆ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ಸದ್ಯ ಪ್ರತಿ ರಾಸಿಗೆ 5 ಕೆಜಿ ಆಹಾರ ನೀಡಿದರೆ ಮಾತ್ರ ಲಭ್ಯವಿರುವ ಮೇವು ಇನ್ನೂ ಹತ್ತು ಹನ್ನೆರಡು ವಾರಗಳಿಗೆ ಸಾಲುತ್ತದೆ. ಕಾಡಂಚಿನ ಗ್ರಾಮಗಳಲ್ಲಿಯೇ ಜಾನುವಾರುಗಳಿಗೆ ಹೆಚ್ಚಿನ ಕೊರತೆಯಾಗಿದೆ.
ಡಾ.ಮಾದೇಶ್ ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ
ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮಕೈಗೊಳ್ಳುವಂತೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದ್ದು ಮುಂದಿನ ವಾರದ ವೇಳೆಗೆ ಸರಬರಾಜು ಮಾಡಲಾಗುವುದು. ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net