ರಾಜ್ಯದಲ್ಲಿ ಪ್ರಸಕ್ತ 82.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ-8248-lakh-hectares crop

 ಮುಂಗಾರು ಹಂಗಾಮು
ಮುಂಗಾರು ಹಂಗಾಮು
Published on
ಬೆಂಗಳೂರು: ಮಳೆ ಕೊರತೆಯ ಆತಂಕದ ನಡುವೆಯೂ ಈ ವರ್ಷ ಕೃಷಿ ಇಲಾಖೆ, ಮುಂಗಾರು ಹಂಗಾಮಿನಲ್ಲಿ 82.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಗೆ ಯೋಜನೆ ಹಾಕಿಕೊಂಡಿದೆ. ಜತೆಗೆ, 150 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಹೊಂದಿದೆ.
ಪೂರ್ವ ಮುಂಗಾರು ಹಂಗಾಮಿನಲ್ಲಿ 2.78 ಲಕ್ಷ ಹೆಕ್ಟೇರ್ ಗುರಿಗೆ ಅನುಗುಣವಾಗಿ 28,900 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿದೆ. ರಾಜ್ಯದಲ್ಲಿ ಮುಂಗಾರು ಆಗಮಿಸಿ 2 ವಾರ ಸಮೀಪಿಸುತ್ತಿದ್ದು, ಆರಂಭದಲ್ಲೇ ಮಳೆ ಕೊರತೆಯಾಗಿದೆ. ಪ್ರಸ್ತುತ ಮಾನ್ಸೂನ್ ದುರ್ಬಲಗೊಂಡರೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ನಾಲ್ಕೈದು ದಿನಗಳಿಂದ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕೃಷಿ ಚಟುವಟಿಕೆ ಇನ್ನಷ್ಟು ಬಿರುಸುಗೊಂಡಿದೆ.
4.71 ಲಕ್ಷ ಕ್ವಿಂಟಾಲ್ ವಿವಿಧ ಬಿತ್ತನೆ ಬೀಜಗಳ ಬೇಡಿಕೆ ಇದ್ದು, 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ. ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಅಂದಾಜಿಸಲಾಗಿದೆ. ರಾಜ್ಯದಲ್ಲಿ ಮೇ 11ರವರೆಗೆ 3.56 ಲಕ್ಷ ಮೆ.ಟನ್ ಮಾರಾಟವಾಗಿದೆ. 11.76 ಲಕ್ಷ ಮೆ.ಟನ್ ದಾಸ್ತಾನು ಇದೆ ಎಂದು ಇಲಾಖೆ ನೀಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
60.32 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಮೆಕ್ಕೆಜೋಳ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳು, ಹುಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ವಿವಿಧ ಬೀಜಗಳ ಬಿತ್ತನೆ ಗುರಿ ಹೊಂದಲಾಗಿದೆ. 10.28 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿಮ ಸಜ್ಜೆ, ಗೋಧಿ ಮತ್ತು 11.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಮಟಕಿ ಸೇರಿ ದ್ವಿದಳ ಧಾನ್ಯ ಹಾಗೂ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾಸಿವೆ, ಕುಸುಬೆ, ಅಗಸೆ ಸೇರಿ ಇತರ ಎಣ್ಣೆಕಾಳು ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದೆ. 
ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ, ಕೊಡಗು, ಬೆಂ.ಗ್ರಾಮಾಂತರ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ದಕ್ಷಿಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ ಭತ್ತ, ರಾಗಿ ಮತ್ತು ಮೆಕ್ಕಜೋಳ ಸೇರಿ ವಿವಿಧ ಬೆಳೆಗಳ ಬಿತ್ತನೆ ಶುರುವಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂಧೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಅಗಸೆ, ಹತ್ತಿ, ಕಬ್ಬು ಸೇರಿ ವಿವಿಧ ಬೆಳೆಗಳ ಬೀಜ ಬಿತ್ತನೆಗೆ ರೈತರು ತೊಡಗಿದ್ದಾರೆ. 
ಕರಾವಳಿಯಲ್ಲಿ ಮಳೆ ಬಿರುಸು
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಭಾನುವಾರ ಎರಡೂ ಜಿಲ್ಲೆಗಳ ವಿವಿಧೆಡೆ ಉತ್ತಮ ಮಳೆಯಾಗಿದೆ.  ಮಂಗಳೂರು ನಗರ, ಉಳ್ಳಾಲ, ಮೂಲ್ಕಿಯಲ್ಲಿ ಬೆಳಗ್ಗೆಯಿಂದಲೇ ಗುಡುಗು ಸಹಿತ ಬಿರುಸಿನ ಮಳೆಯಾಗಿದ್ದು, ಮಧ್ಯಾಹ್ನ ಬಳಿಕ ಇಳಿಮುಖವಾಗಿತ್ತು. ಬೆಳ್ತಂಗಡಿ, ಸುಳ್ಯ, ಪುತ್ತೂರು ಹಾಗೂ ಬಂಟ್ವಾಳ ತಾಲೂಕು ಸುತ್ತಮುತ್ತ ಬಿಟ್ಟುಬಿಟ್ಟು ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ 14.8 ಮಿ.ಮೀ., ಉಡುಪಿಯಲ್ಲಿ 32.09 ಮಿ.ಮೀ. ಸರಾಸರಿ ಮಳೆಯಾಗಿದೆ. 
ಇನ್ನೂ 2 ದಿನ ಮಳೆ:
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು, ಬೆಂ.ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ತುಮಕೂರಿನಲ್ಲಿ ಜೂ.15ರಂದು ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಕೊಡಗು, ಹಾಸನದಲ್ಲಿ ಜೂ.16ರಂದು ಯೆಲ್ಲೋ ಅಲರ್ಟ್ ಇರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net