ವಿಜಯಪುರ ಮಹಾತ್ಮ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶರಣ ಸಾಹಿತ್ಯ ಪರಿಷತ್ನಿಂದ ಉಚಿತ ನೋಟ್ಪುಸ್ತಕ ವಿತರಿಸಲಾಯಿತು. ಎಚ್.ಎಸ್.ರುದ್ರೇಶಮೂರ್ತಿ, ಚಂದ್ರಶೇಖರ ಹಡಪದ, ಮ.ಸುರೇಶ್ಬಾಬು, ಸ್ವರ್ಣಗೌರಿ ಮತ್ತಿತರರು ಇದ್ದರು.
ವಿಜಯಪುರ : ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಬಡ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ ದಾಸೋಹ ನೀಡುವ ಮೂಲಕ ಮಹತ್ತರ ಕ್ರಾಂತಿ ಮಾಡಿದ್ದಾರೆ. ಅವರು ಸ್ಥಾಪಿಸಿದ ಜೆಎಸ್ಎಸ್ ವಿದ್ಯಾಪಿಠವು ಜಗತ್ತಿನಾದ್ಯಂತ ವಸತಿ ಹಾಗೂ ಶಿಕ್ಷಣ ನೀಡುವ ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಅವರ ತ್ಯಾಗ ಮತ್ತು ಕರುಣೆಯ ಹಾದಿ ನಮಗೆಲ್ಲರಿಗೂ ಅನುಕರಣೀಯ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್. ರುದ್ರೇಶಮೂರ್ತಿ ಹೇಳಿದರು.
ಪಟ್ಟಣದ ಮಹಾತ್ಮ ಪ್ರೌಢಶಾಲಾ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ ಹಾಗೂ ಸಾಮುರು ಸೇವಾ ಟ್ರಸ್ಟ್ನ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಷತ್ನ ಸಂಸ್ಥಾಪನಾ ದಿನಾಚರಣೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನು ಪರಿಷತ್ ಸ್ಥಾಪನೆಯಾದಾಗಿನಿಂದಲೂ ಶರಣರ ತತ್ವ ಮತ್ತು ವಚನ ಸಾಹಿತ್ಯದ ಜಾಗೃತಿಯನ್ನು ನಿರಂತರವಾಗಿ ಮೂಡಿಸುತ್ತ ಬಂದಿದೆ ಎಂದರು.
ಪರಿಷತ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಉತ್ತಮ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯ ಎಂದರು.
ತಾಲೂಕು ಅಧ್ಯಕ್ಷ ಮ. ಸುರೇಶ್ಬಾಬು ಮಾತನಾಡಿ, ಸತ್ಯ, ಪ್ರಾಮಾಣಿಕತೆ, ಗುರು&ಹಿರಿಯರಲ್ಲಿ ಗೌರವ ಹಾಗೂ ನೈತಿಕತೆಯನ್ನು ಬೆಳೆಸಿಕೊಂಡಾಗ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಜಿಲ್ಲಾ ಕದಳಿವೇದಿಕೆ ಅಧ್ಯೆ ಬಿ.ಸ್ವರ್ಣಗೌರಿ ಮಾತನಾಡಿ, ಶೋಷಿತ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಶ್ರೀ ರಾಜೇಂದ್ರ ಸ್ವಾಮೀಜಿ ಕೊಡುಗೆ ಅಪಾರ. ಅವರ ಹಾದಿಯಲ್ಲಿ ಸಂಸಂಸ್ಥೆಗಳು ಮಕ್ಕಳ ಶೈಕ್ಷಣಿಕ ಉನ್ನತಿಗೆ ಪೂರಕವಾಗಿ ಇಂತಹ ಸಮಾಜಸೇವಾ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.
ಕದಳಿ ವೇದಿಕೆ ಕಾರ್ಯದರ್ಶಿ ದೀಪಾ, ವಿಜಯಪುರ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಪವನ್, ಮಹಾತ್ಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಶಶಿಕಲಾ, ಶಿಕ್ಷಕರಾದ ರವಿ, ದೇವಪ್ಪ ಇದ್ದರು.