ಕರ್ನಾಟಕದಿಂದ ಬ್ಲಾಕ್‌ಮೇಲ್ ಮಾಡಿ ನೀರು ಹರಿಸಿಕೊಳ್ಳುತ್ತಿರುವ ತಮಿಳುನಾಡು ವರ್ತನೆ ವಿರುದ್ಧ ಕರವೇ ಅಪ್ಪುಸೇನೆ ಶುಕ್ರವಾರ ಹೆಚ್ಚುವರಿ ತಹಸೀಲ್ದಾರ್ ಎಸ್.ಕೆ.ಜಗನ್ನಾಥ್, ಶಿರಸ್ತೇದಾರ್ ಸಿ.ಆರ್.ರವಿಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಅಪ್ಪುಸೇನೆ ಅಧ್ಯಕ್ಷ ಆರ್.ವಿಜಯ್‌ಕುಮಾರ್ ಮಾತನಾಡಿ, ರಾಜ್ಯದ ಪಾಲಿನ ನೀರು ಉಳಿಸಿಕೊಳ್ಳುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಜವಾಬ್ದಾರಿ ಜತೆಗೆ ಜಾಣತನ ಪ್ರದರ್ಶಿಸಲಿ ಎಂದು ಹೇಳಿದರು.
ರಾಜ್ಯದಲ್ಲಿ ಉಗಮನವಾಗುವ ನದಿಗಳು ಆಳವಾದ ಗಿರಿಕಂದರಗಳಲ್ಲಿ ಜನಿಸಿ, ಮಟ್ಟಸ ಪ್ರದೇಶವಾದ ತಮಿಳುನಾಡಿಗೆ ಹರಿಯುವ ಪರಿಣಾಮ ಅಲ್ಲಿ ನೀರು ಭೂಮಿಯಲ್ಲಿ ಇಂಗಲು ಅವಕಾಶವಿದ್ದು, ಅಲ್ಲಿ ಕೈ ಪಂಪಗಳ ಮೂಲಕ ಕೊಳವೆಬಾವಿಯಿಂದ ನೀರೆತ್ತಿದರೆ ನಮ್ಮಲ್ಲಿ ಒಂದೂವರೆ ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗದಂತಾಗಿದೆ. ನಮ್ಮ ರಾಜ್ಯದ ಶಿಂಷಾ, ಆರ್ಕಾವತಿ, ಹೇಮಾವತಿ, ಕಾವೇರಿ ನೀರು ಬಿಳಿಗೂಡಿನ ಮೂಲಕ ತಮಿಳುನಾಡಿಗೆ ಹರಿಯುತ್ತೆ. ಮುಖ್ಯವಾಗಿ ಮೋಯರ್ ನದಿ ನೀರು ಮೇಕೆದಾಟು ಮೂಲಕ ತಮಿಳುನಾಡಿಗೆ ಹರಿದರೂ ಈ ನೀರಿನ ಅಳತೆ ಪ್ರಮಾಣ ಪರಿಗಣಿಸುತ್ತಿಲ್ಲ ಎಂದರು.
ರಾಜ್ಯದಲ್ಲಿ ವರ್ಷಕ್ಕೆ ಒಂದು ಬೆಳೆ ಬೆಳದರೆ. ತಮಿಳುನಾಡಿನಲ್ಲಿ ಸಾಂಬಾ, ಕುರುವೈ, ನವರೈ ತಳಿಯ 3 ಬೆಳೆ ಬೆಳೆಯುತ್ತಾರೆ. ಜತೆಗೆ ಹಿಂಗಾರು ಮಳೆ ಕರ್ನಾಟಕದಲ್ಲಿ ಸೆಪ್ಟೆಂಬರ್‌ಗೆ ಅಂತ್ಯವಾದರೆ ತಮಿಳುನಾಡಿನಲ್ಲಿ ಡಿಸೆಂಬರ್, ಜನವರಿವರೆಗೂ ಇರುತ್ತದೆ. ಅಲ್ಲಿನ ಭೂಮಿ ನದಿಮುಖವಾಗಿ ಸಮತಟ್ಟಾಗಿದ್ದು, ಜಲಾನಯನ ಪ್ರದೇಶ ಮೆಕ್ಕಲು ಮಣ್ಣಿನಿಂದ ಕೂಡಿ ಫಲವತ್ತಾಗಿದ್ದು, ನೀರಿನ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದರು.
ರಾಜ್ಯದಲ್ಲಿ ಒಂದು ಬೆಳೆಗೂ ನೀರಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳೇ ಘೋಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಲಭ್ಯವಿರುವ ನೀರನ್ನು ಎಲ್ಲ ಕೆರೆ-ಕಟ್ಟೆಗಳಿಗೆ ಹರಿಸಿದರೆ, ಅಂತರ್ಜಲಮಟ್ಟ ಸುಧಾರಿಸಿ, ಜನ, ಜಾನುವಾರುಗಳು ನೀರಿನ ಅಭಾವದಿಂದ ಬಳಲುವುದು ತಪ್ಪುತ್ತದೆ. ಇಲ್ಲವಾದಲ್ಲಿ ಕಾವೇರಿ ಟ್ರಿಬ್ಯೂನಲ್ ಮತ್ತು ನ್ಯಾಯಾಲಯದ ಆದೇಶಾನುಸಾರ ನಮ್ಮ ಪಾಲಿನ ನೀರು ನಿರಾಯಾಸವಾಗಿ ತಮಿಳುನಾಡಿಗೆ ಹರಿಯುತ್ತೆ. ಇದಕ್ಕೆ ಅವಕಾಶ ನೀಡದಂತೆ ಮುಖ್ಯಮಂತ್ರಿಗಳ ಜವಾಬ್ದಾರಿ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ-ನೀರು, ನಮ್ಮ-ಹಕ್ಕಿಗಾಗಿ ಹೋರಾಟ ಅನಿವಾರ್ಯ ಎಂದರು.