ಬದಲಾದ ಆಡಳಿತದ ಚಹರೆ: ರಾಜಕೀಯ ವ್ಯವಹಾರಗಳ ಸಮಿತಿ ರಚನೆ, ಸಿಎಂ ಡಿಕೆಶಿ ಹೊಸ ಛಾಪು! CM DK Shivakumar

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ( CM DK Shivakumar )
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ( CM DK Shivakumar )
Published on
ಬೆಂಗಳೂರು: ಆಡಳಿತ ಚುಕ್ಕಾಣಿ ಹಿಡಿದು ಇಪ್ಪತ್ತನಾಲ್ಕು ದಿನಗಳನ್ನು ಪೂರೈಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆ, ತೀರ್ವನಗಳು, ಭವಿಷ್ಯದ ಲೆಕ್ಕಾಚಾರಗಳು ಸದ್ಯ ರಾಜಕೀಯ ಪಡಸಾಲೆಯಲ್ಲಿ ಹೊಸ ವಿಶ್ಲೇಷಣೆಗಳಿಗೆ ಮುನ್ನುಡಿ ಬರೆದಿದೆ. ಆಡಳಿತದ ಹಂತದಲ್ಲಿ ಹೊಸತನವನ್ನು ತರುವ ಹಾಗೂ ಸಾರ್ವಜನಿಕರಲ್ಲಿ ಸಾಂಸ್ಥಿಕ ಭರವಸೆ ಮರುಸ್ಥಾಪಿಸುವ ಪ್ರಯತ್ನಗಳು ತೆರೆಮರೆಯಲ್ಲಿ ಚುರುಕುಗೊಂಡಿವೆ.
ಕೇವಲ ಘೊಷಣೆಗಳ ಆರ್ಭಟಕ್ಕೆ ಅಥವಾ ಪುನರಪಿ ಟೀಕೆಗೆ ಸೀಮಿತವಾದ ತಂತ್ರಕ್ಕೆ ಮೊರೆಹೋಗದೆ, ಸರ್ಕಾರದ ಕಾರ್ಯಾಚರಣೆಯ ಸಾಂಪ್ರದಾಯಿಕ ವರಸೆಯನ್ನು ಆಮೂಲಾಗ್ರವಾಗಿ ಬದಲಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವುದು ಭವಿಷ್ಯದ ಸ್ಥಿತ್ಯಂತರದ ದಿಕ್ಸೂಚಿಯಂತೆ ಕಾಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದ್ದ ಸಂಘರ್ಷಾತ್ಮಕ ರಾಜಕಾರಣಕ್ಕೆ ಸದ್ದಿಲ್ಲದೆ ಬ್ರೇಕ್ ಹಾಕಿರುವುದು ಇಲ್ಲಿ ಎದ್ದು ಕಾಣುವ ಪ್ರಮುಖ ಬದಲಾವಣೆ. ಕೇಂದ್ರ ಸರ್ಕಾರದೊಂದಿಗೆ ಅಥವಾ ನೆರೆಹೊರೆಯ ರಾಜ್ಯಗಳ ಜತೆ ಅನಗತ್ಯ ಹಗ್ಗಜಗ್ಗಾಟಕ್ಕೆ ಇಳಿಯದೆ, ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ವಿಶ್ವಾಸದ ಸೇತು ನಿರ್ವಿುಸುವ ಲೆಕ್ಕಾಚಾರ ಹೊಸ ಮುಖ್ಯಮಂತ್ರಿಯವರದ್ದಾಗಿದೆ. ಇದಕ್ಕೆ ಒಂದಷ್ಟು ಹಸಿ ಉದಾಹರಣೆಗಳೂ ಕಂಡುಬಂದಿವೆ. ಸಂಘರ್ಷದಿಂದ ರಾಜ್ಯದ ಹಿತಾಸಕ್ತಿಗಳು ಬಲಿಯಾಗುವುದಕ್ಕಿಂತ, ಮಾತುಕತೆಯ ಮುತ್ಸದ್ದಿತನದಿಂದ ರಾಜ್ಯದ ನ್ಯಾಯಸಮ್ಮತ ಅಪೇಕ್ಷೆಗಳನ್ನು ಈಡೇರಿಸಿಕೊಳ್ಳುವ ಪ್ರಾಯೋಗಿಕ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ ಎಂಬ ವಿಶ್ಲೇಷಣೆಗಳಿವೆ.

ಸವಾಲು-ಅನಿವಾರ್ಯತೆ

ರಾಜ್ಯದ ಆರ್ಥಿಕ ಪರಿಸ್ಥಿತಿಯ ಇತಿಮಿತಿಗಳನ್ನು ಅರಿತುಕೊಂಡು ಮುನ್ನಡೆಯುವುದು ಸದ್ಯದ ಅನಿವಾರ್ಯತೆ ಮತ್ತು ಸವಾಲು. ಬೊಕ್ಕಸಕ್ಕೆ ಹೊರೆಯಾಗದಂತೆ, ಅದೇ ಸಮಯದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿ ತಲುಪುವಂತಹ ಜನಕಲ್ಯಾಣ ಯೋಜನೆಗಳನ್ನು ರೂಪಿಸಲು ತಜ್ಞರ ಮಟ್ಟದಲ್ಲಿ ಸಮಾಲೋಚನೆಗಳು ಆರಂಭವಾಗಿವೆ. ಯಾವುದೇ ತೀರ್ಮಾನ ಕೈಗೊಳ್ಳುವಾಗಲೂ ರಾಜ್ಯದ ದೀರ್ಘಾವಧಿ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಎಚ್ಚರ ವಹಿಸುತ್ತಿರುವುದು ಆಡಳಿತಕ್ಕೆ ಹೊಸ ಪಕ್ವತೆಯನ್ನು ತಂದುಕೊಟ್ಟಿದೆ. ಈ ಮೂಲಕ ಆರ್ಥಿಕ ಶಿಸ್ತು ಮತ್ತು ಜನಪ್ರಿಯತೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಗಂಭೀರ ಪ್ರಯತ್ನ ನಡೆದಿದೆ.

ಮಹತ್ವದ ನಿರ್ಧಾರಗಳು

1. ಏಕಪಕ್ಷೀಯ ತೀರ್ವನಗಳಿಗೆ ಆಸ್ಪದ ನೀಡದೆ ‘ರಾಜಕೀಯ ವ್ಯವಹಾರಗಳ ಸಮಿತಿ’ಯನ್ನು ರಚಿಸಲು ಸರ್ಕಾರ ಮುಂದಾಗಿರುವುದು ಒಂದು ಪ್ರಜಾಪ್ರಭುತ್ವದ ಆಶಾದಾಯಕ ನಡೆ. ಯಾವುದೇ ಪ್ರಮುಖ ಆಡಳಿತಾತ್ಮಕ ಅಥವಾ ನೀತಿ ನಿರ್ಧಾರಗಳನ್ನು ಪ್ರಕಟಿಸುವ ಮುನ್ನ ಈ ಸಮಿತಿಯಲ್ಲಿ ಸುದೀರ್ಘವಾಗಿ ರ್ಚಚಿಸಿ, ಸಾಧಕ- ಬಾಧಕಗಳನ್ನು ತೂಗಿ ನೋಡಿಯೇ ಅಂತಿಮಗೊಳಿಸುವ ಪದ್ಧತಿ ಜಾರಿಗೆ ಬರುತ್ತಿದೆ. ಇದು ಸರ್ಕಾರದ ಒಳಗೆ ಭಿನ್ನಾಭಿಪ್ರಾಯಗಳನ್ನು ತಡೆಯುವುದಲ್ಲದೆ, ಸಾಮೂಹಿಕ ನಾಯಕತ್ವದ ಸಂದೇಶವನ್ನು ರವಾನಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ನೆರವಾಗುವ ಸಾಧ್ಯತೆ ಇದೆ.
2. ಸಂಪನ್ಮೂಲದ ಸದ್ಬಳಕೆಗೆ ಹೊಸ ದಾರಿ ಎಂದರೆ ರಾಜ್ಯದಲ್ಲಿ ವಾರ್ಷಿಕವಾಗಿ ಲಭ್ಯವಾಗುವ ಸುಮಾರು 7800 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತದ ಸಿಎಸ್​ಆರ್ (ಕಾರ್ಪೆರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿ. ಈವರೆಗೆ ಕಣ್ಣಿಗೆ ಕಾಣದಂತೆ ಚದುರಿ ಹೋಗುತ್ತಿದ್ದ ಈ ಹಣವನ್ನು ಈಗ ಕಟ್ಟುನಿಟ್ಟಾದ ಮತ್ತು ಸರಿಯಾದ ಮಾರ್ಗದಲ್ಲಿ ಬಳಕೆ ಮಾಡಿಕೊಳ್ಳಲು ನೀಲನಕ್ಷೆ ಸಿದ್ಧವಾಗುತ್ತಿದೆ. ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಮೂಲಸೌಕರ್ಯದಂತಹ ಪ್ರಮುಖ ವಲಯಗಳಿಗೆ ಈ ನಿಧಿಯನ್ನು ವ್ಯವಸ್ಥಿತವಾಗಿ ಹರಿಸುವ ಮೂಲಕ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ. ಪ್ರತಿ ಮೂರು ಗ್ರಾಮ ಪಂಚಾಯಿತಿಗೆ ಒಂದರಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಹೊಣೆಯನ್ನು ಖಾಸಗಿ ಕಂಪನಿಗಳಿಗೆ ನೀಡುವ ಮೂಲಕ ಇಡೀ ರಾಜ್ಯದುದ್ದಕ್ಕೂ ಸಿಎಸ್​ಆರ್ ನಿಧಿ ಹಂಚಿಕೆಗೂ ವ್ಯವಸ್ಥಿತ ರೂಪುರೇಷೆಯೊಂದು ಸಿದ್ಧವಾಗುತ್ತಿದೆ.
3. ನಗರಾಭಿವೃದ್ಧಿ ಮತ್ತು ಕೈಗಾರಿಕಾ ಪ್ರಗತಿಗೆ ಭೂಸ್ವಾಧೀನ ಪ್ರಕ್ರಿಯೆ ದೊಡ್ಡ ತಲೆನೋವಾಗಿರುವಾಗ, ಅದಕ್ಕೆ ಪರ್ಯಾಯವಾಗಿ ದೂರದೃಷ್ಟಿಯ ಲೆಕ್ಕಾಚಾರದಲ್ಲಿ ‘ಲ್ಯಾಂಡ್ ಪುಲಿಂಗ್ ಪಾಲಿಸಿ’ (ಭೂಮಿ ಒಟ್ಟುಗೂಡಿಸುವಿಕೆ ನೀತಿ) ರಚನೆಗೆ ಮುಂದಾಗಲಾಗಿದೆ. ರೈತರಿಂದ ಅಥವಾ ಜಮೀನು ಮಾಲೀಕರಿಂದ ಬಲವಂತವಾಗಿ ಭೂಮಿ ಕಸಿದುಕೊಳ್ಳುವ ಬದಲು, ಅವರನ್ನು ಅಭಿವೃದ್ಧಿಯ ಪಾಲುದಾರರನ್ನಾಗಿ ಮಾಡುವ ಈ ನೀತಿ ಜಾರಿಗೆ ಬಂದರೆ ಉದ್ಯಮ ಮತ್ತು ಕೃಷಿ ವಲಯಗಳ ನಡುವಿನ ಘರ್ಷಣೆ ತಪ್ಪುತ್ತದೆ. ಇದು ರಾಜ್ಯದ ಮೂಲಸೌಕರ್ಯ ಯೋಜನೆಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.
4. ಕೇಂದ್ರ ಸರ್ಕಾರದೊಂದಿಗೆ ದಿನಬೆಳಗಾದರೆ ಮಾಧ್ಯಮಗಳ ಮುಂದೆ ವಾಗ್ವಾದಕ್ಕಿಳಿಯುವ ಹಳಸಲು ವರಸೆಯನ್ನು ಕೈಬಿಟ್ಟು, ದೆಹಲಿ ಮಟ್ಟದಲ್ಲಿ ಸೌಹಾರ್ದಯುತ ಮಾತುಕತೆಯ ಮೂಲಕ ರಾಜ್ಯದ ಪಾಲನ್ನು ಪಡೆದುಕೊಳ್ಳುವ ರಾಜತಾಂತ್ರಿಕ ನಡೆಗೆ ಸಿಎಂ ಆದ್ಯತೆ ನೀಡಿದ್ದಾರೆ. ಅನುದಾನವನ್ನು ತರಲು ಕೇಂದ್ರದ ಸಚಿವರೊಂದಿಗೆ ಸಕಾರಾತ್ಮಕ ಬಾಂಧವ್ಯ ಇಟ್ಟುಕೊಳ್ಳುವುದು ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಅತ್ಯಂತ ಲಾಭದಾಯಕವೂ ಸರಿಯಾದದ್ದು ಎಂಬುದನ್ನು ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆನ್ನಲಾಗಿದೆ.
5. ಬೃಹತ್ ಯೋಜನೆಗಳ ಜತೆಜತೆಗೆ ಸಾಮಾನ್ಯ ಜನರನ್ನು ಕಾಡುತ್ತಿರುವ ದಿನನಿತ್ಯದ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಲು ಉದ್ದೇಶಿಸಲಾಗಿದೆ. ಉದಾಹರಣೆಗೆ, ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಿಸಿ ಮತ್ತು ಒಸಿ (ಆಕ್ಯುಪೆನ್ಸಿ ಸರ್ಟಿಫಿಕೇಟ್) ನಂತಹ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ಸರಳಗೊಳಿಸಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ತಳಮಟ್ಟದ ಸಣ್ಣ ಸಣ್ಣ ಸಮಸ್ಯೆಗಳನ್ನು ನೀಗಿಸುವುದರಿಂದ ಸರ್ಕಾರ ಜನಸಾಮಾನ್ಯರಿಗೆ ಹತ್ತಿರವಾಗುವ ಉದ್ದೇಶ ಕಾಣಿಸಿದೆ.
6. 2026-27ರ ಬಜೆಟ್ ಹೊರತಾಗಿ ಹೊಸ ಯೋಜನೆಗಳನ್ನು ತರಲು ನೂರು ದಿನಗಳ ವಿಷನ್ ಪ್ಲಾನ್ ಸಿದ್ಧವಾಗುತ್ತಿದೆ. ಇದು ಘೋಷಣೆಗೆ ಸೀಮಿತವಾಗದೇ ತಕ್ಷಣದಿಂದ ಅನುಷ್ಠಾನಕ್ಕೆ ತರುವ ಕೆಲಸವೂ ನಡೆದಿದೆ. ಉದಾಹರಣೆಗೆ ಉಚಿತ ಬಸ್ ಪಾಸ್ ಘೋಷಣೆ ಅನುಷ್ಠಾನಕ್ಕೆ ಬಂದಿದೆ, ಜನರ ಸಮಸ್ಯೆ ಆಲಿಸಲು ಹೊಸ ಇಲಾಖೆ ಸ್ಥಾಪಿಸುವ ತೀರ್ವನವೂ ಆದೇಶದಲ್ಲಿ ಬಂದಿದೆ. ಮುಂದಿನ ವಾರದಲ್ಲಿ ಭಾರತ್ ಜೋಡೋ ಯುವಕ ಸಂಘ ರಚನೆಗೆ ಪೂರ್ವಭಾವಿಯಾಗಿ 10 ರೂ. ಸ್ವೀಕರಿಸಿ ಯುವಕರ ನೋಂದಣಿಗೂ ಚಾಲನೆ ನೀಡಲಾಗುತ್ತಿದೆ. ಒಟ್ಟಾರೆ ಆಡಳಿತ ಯಂತ್ರವನ್ನು ವ್ಯವಸ್ಥಿತವಾಗಿ ಹಳಿಮೇಲೆ ತರುವ ಕಾರ್ಯ ತೆರೆಮರೆಯಲ್ಲಿ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net