ಅನುಕಂಪದ ಗೆಲುವು ಉಳಿಸಿಕೊಳ್ಳುವ ಸವಾಲ್ !

ಉಮೇಶ ಮೇಟಿ.
ಉಮೇಶ ಮೇಟಿ.
Published on
ಅಶೋಕ ಶೆಟ್ಟರ, ಬಾಗಲಕೋಟೆ:
ಬಾಗಲಕೋಟೆ ಕ್ಷೇತ್ರದಲ್ಲಿ ಶಾಸಕ ಎಚ್.ವೈ.ಮೇಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆದು ಅವರ ಪುತ್ರ ಉಮೇಶ ಮೇಟಿ ಅವರು ಕ್ಷೇತ್ರದ ಇತಿಹಾಸದಲ್ಲೆ ಅತಿ ಹೆಚ್ಚು ಅಂತರದ ಗೆಲುವು ಪಡೆದಿದ್ದಾರೆ.
ಹಾಲಿ ಶಾಸಕರ ನಿಧನದ ಬಳಿಕ ನಡೆಯುವ ಉಪ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್ ನೀಡಿದಾಗ ಸಹಜವಾಗಿಯೇ ಅನುಕಂಪ ಕಂಡು ಬರುತ್ತದೆ. ಅದೇನಾದರೂ ಆಡಳಿತ ಪಕ್ಷದ ಶಾಸಕರ ಕ್ಷೇತ್ರವಾಗಿದ್ದರೆ ಅನುಕಂಪದ ಜೊತೆಗೆ ಅಽಕಾರ, ಹಣ, ಜಾತಿಬಲ ಎಲ್ಲ ಪ್ರಯೋಗಗಳು ನಡೆದು, ಭಾರಿ ಅಂತರದ ಗೆಲುವು ಸಿಗುತ್ತದೆ. ಅದಕ್ಕೆ ತಾಜಾ ಉದಾಹರಣೆ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆ.
ಕಣ್ಣೀರಿಗೆ ಕರಗಿ ಭಾರಿ ಬೆಂಬಲ ನೀಡುವ ಮತದಾರ ಪ್ರಭು ಅದರ ಜೊತೆಗೆ ಅಭ್ಯರ್ಥಿಗೆ ಎಚ್ಚರಿಕೆ ಸಂದೇಶವನ್ನು ನೀಡಿರುತ್ತಾನೆ. ಗೆದ್ದವರು ಸ್ವಲ್ಪ ಎಡವಿದರೂ ಮರು ಚುನಾವಣೆಯಲ್ಲಿ ಅನುಕಂಪ ಮರೆಯಾಗಿ ಸೋಲಿನ ಸುಳಿಗೆ ಸಿಲುಕುವ ಅಪಾಯ ಇದ್ದೇ ಇರುತ್ತದೆ. ಅದಕ್ಕೂ ಸಹ ಜಿಲ್ಲೆಯಲ್ಲಿ ಉದಾಹರಣೆಗಳಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು ೯ ಉಪ ಚುನಾವಣೆಗಳು ನಡೆದಿದ್ದು, ಇದರಲ್ಲಿ ಐದು ಉಪ ಚುನಾವಣೆಗಳು ಶಾಸಕರು ನಿಧನರಾದ ಹಿನ್ನೆಲೆಯಲ್ಲಿ ನಡೆದಿರುವಂತವು. ಆ ಐದರಲ್ಲಿ ಮೂರು ಚುನಾವಣೆಗಳಲ್ಲಿ ನಿಧನರಾದ ಶಾಸಕರ ಕುಟುಂಬದವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದು, ಅನುಕಂಪ ಮತ್ತು ಸರ್ಕಾರದ ಬಲದೊಂದಿಗೆ ಉಪ ಕದನ ಎದುರಿಸಿ ಸುಲಭವಾಗಿ ಗೆಲುವಿನ ದಡ ಮುಟ್ಟಿದ್ದಾರೆ. ಉಪ ಚುನಾವಣೆಯಲ್ಲಿ ಭಾರಿ ಗೆಲುವು ನೀಡಿದ್ದ ಮತದಾರ ಪ್ರಭುಗಳು ಬಳಿಕ ಎದುರಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರಿ ಮುನ್ನಡೆಯನ್ನು ತೆಗೆದೊಗೆದು ಸೋಲಿನ ರುಚಿ ತೋರಿಸಿದ್ದು ಇದೆ.
ಒಂದೇ ವರ್ಷದೊಳಗೆ ಗೌರಮ್ಮ ಕಾಶಪ್ಪನವರ ಸೋಲು :
ಹುನಗುಂದ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಕಂಡು ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್.ಆರ್.ಕಾಶಪ್ಪನವರ ನಿಧನದಿಂದ ೨೦೦೩ರಲ್ಲಿ ಉಪ ಚುನಾವಣೆ ನಡೆಯಿತು. ಆಗ ಜಿಲ್ಲೆಯಲ್ಲಿ ಮೊದಲ ಭಾರಿಗೆ ಕಾಂಗ್ರೆಸ್ ಪಕ್ಷ ನಿಧನರಾದ ಶಾಸಕರ ಕುಟುಂಬಕ್ಕೆ ಟಿಕೆಟ್ ನೀಡಿತ್ತು. ಎಸ್.ಆರ್.ಕಾಶಪ್ಪನವರ ಪತ್ನಿ ಗೌರಮ್ಮ ಕಾಶಪ್ಪನವರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.
೧೯೯೯ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್.ಆರ್.ಕಾಶಪ್ಪನವರ ಶೇ.೩೭.೮ರಂತೆ ಒಟ್ಟು ೨೯,೩೦೭ ಮತಗಳನ್ನು ಪಡೆದು ಎದುರಾಳಿ ಜೆಡಿಯು ಅಭ್ಯರ್ಥಿ ಜಿ.ಪಿ.ಪಾಟೀಲ ವಿರುದ್ಧ ಕೇವಲ ೯೩೬ ಮತಗಳ ಅಂತರದಲ್ಲಿ (ಶೇ.೧.೨೭) ಪ್ರಯಾಸದ ಗೆಲುವು ಕಂಡಿದ್ದರು. ಅವರ ನಿಧನದ ಬಳಿಕ ನಡೆದ ೨೦೦೩ರ ಉಪ ಚುನಾವಣೆಯಲ್ಲಿ ಗೌರಮ್ಮ ಕಾಶಪ್ಪನವರ ಶೇ. ೩೫.೩೪ರಂತೆ ಒಟ್ಟು ೩೧,೦೧೪ ಮತ ಪಡೆದು ಬಿಜೆಪಿ ಅಭ್ಯರ್ಥಿ ಪಿ.ಎಂ.ಸAಗನಗೌಡ ವಿರುದ್ಧ ೧೦,೨೯೭(ಶೇ.೧೦.೬೫) ಮತಗಳ ಅಂತರದ ಭರ್ಜರಿ ಗೆಲುವು ಕಂಡಿದ್ದರು. ಆಗ ಅಽಕಾರದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಇತ್ತು.
ಅದಾದ ಮರುವರ್ಷವೇ ನಡೆದ ೨೦೦೪ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಗೌರಮ್ಮ ಕಾಶಪ್ಪನವರ ಅವರಿಗೆ ಟಿಕೆಟ್ ನೀಡಿದ್ದರೂ ಅವರು ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಆಗ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ ಅವರು ಶೇ. ೫೦.೯ ರಷ್ಟು ಅಂದರೆ ೫೦,೬೧೭ ಮತಗಳನ್ನು ಪಡೆದು ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯನ್ನು ೧೮,೧೯೩(ಶೇ.೨೦.೭೧) ಮತಗಳ ಅಂತರದಲ್ಲಿ ಸೋಲಿಸಿದ್ದರು.
ದಾಖಲೆ ಗೆಲುವು ಕಂಡಿದ್ದ ಆನಂದ ನ್ಯಾಮಗೌಡ ಸಹ ಸೋತರು:
ಇನ್ನು ೨೦೧೮ರ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದಲ್ಲಿ ಸತತ ೨ನೇ ಸಲ ಗೆಲುವು ಕಂಡಿದ್ದ ಶಾಸಕ ಸಿದ್ದು ನ್ಯಾಮಗೌಡ ಅವರು ಸರ್ಕಾರ ರಚನೆಗೂ ಮುನ್ನವೆ ಅಪಘಾತದಲ್ಲಿ ನಿಧನ ಹೊಂದಿದರು. ಬಳಿಕ ಅದೇ ವರ್ಷ ನವಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತು. ಆಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಽಕಾರದಲ್ಲಿ ಇತ್ತು.
ಸಿದ್ದು ನ್ಯಾಮಗೌಡ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ವಿರುದ್ಧ ಕೇವಲ ೨೭೯೫ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಸಿದ್ದು ನ್ಯಾಮಗೌಡ ೪೯,೨೪೫(ಶೇ.೩೨.೦೬) ಮತ ಪಡೆದಿದ್ದರೆ ಕುಲಕರ್ಣಿ ಅವರು ೪೬,೪೫೦(ಶೇ.೩೦.೨೪) ಉಳಿದ ಶೇ.೩೭.೭೦ ರಷ್ಟು ಮತಗಳು ಇತರಿಗೆ ಹಂಚಿಹೋಗಿದ್ದವು.
ಸಿದ್ದು ನ್ಯಾಮಗೌಡ ನಿಧನದ ಬಳಿಕ ೬ ತಿಂಗಳ ಅಂತರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಅನುಕಂಪದ ಅಲೆ ಎದ್ದು ಕಂಡಿತು. ಸರ್ಕಾರದ ಬಲವೂ ಆನಂದ ನ್ಯಾಮಗೌಡ ಬೆನ್ನಿಗೆ ಇತ್ತು. ಹೀಗಾಗಿ ಅವರು ದಾಖಲೆಯ ೯೭,೦೧೭(ಶೇ.೬೨.೦೭) ಮತಗಳನ್ನು ಪಡೆದರೆ ಬಿಜೆಪಿಯ ಶ್ರೀಕಾಂತ ಕುಲಕರ್ಣಿ ಅವರು ೫೭,೫೩೭(ಶೇ. ೩೬.೮೧) ಪಡೆದರು. ಉಪ ಚುನಾವಣೆ ನೇರ ಹಣಾಹಣಿಯಲ್ಲಿ ನಡೆದಿದ್ದರಿಂದ ಆನಂದ ಅವರ ಗೆಲುವಿನ ಅಂತರ ಭರ್ತಿ ೩೯,೪೮೦ ಆಗಿತ್ತು. ಶೇ.೨೫.೨೬ ರಷ್ಟು ಅಽಕ ಮತಗಳು ಬಂದಿದ್ದವು.
ಅಷ್ಟೊAದು ಅಂತರದಲ್ಲಿ ಗೆದ್ದಿದ್ದ ಆನಂದ ನ್ಯಾಮಗೌಡ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಗುಡಗುಂಟಿ ಅವರ ವಿರುದ್ಧ ಹಿಂದಿನ ದಾಖಲೆ ಅಂತರ ಕಳೆದೋಗಿ ೪೭೧೬(ಶೇ.೨.೮೧) ಅಂತರದಲ್ಲಿ ಸೋಲು ಕಾಣಬೇಕಾಯಿತು. ಬಿಜೆಪಿ ಅಭ್ಯರ್ಥಿ ೮೧,೯೩೭(ಶೇ|೪೮.೮೬) ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ೭೭,೨೨೧(ಶೇ.೪೬.೦೫) ಮತ ಪಡೆದು ಸೋಲು ಒಪ್ಪಿಕೊಂಡರು.
ಬಾಗಲಕೋಟೆ : ೫೮೭೮ ರಿಂದ ೨೨೩೩೨ಕ್ಕೆ ಏರಿದ ಅಂತರ :
ಸದ್ಯ ಮುಕ್ತಾಯಗೊಂಡಿರುವ ಬಾಗಲಕೋಟೆ ಉಪ ಚುನಾವಣೆಯಲ್ಲೂ ಸಹ ಎಚ್.ವೈ.ಮೇಟಿ ಅವರ ಪುತ್ರ ಉಮೇಶಗೆ ಕಾಂಗ್ರೆಸ್ ಮಣೆ ಹಾಕಿತ್ತು. ಗ್ರಾಮೀಣ ಭಾಗದಲ್ಲಿ ಕಂಡು ಅನುಕಂಪದ ಅಲೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ವಿಶೇಷ ಕಾಳಜಿ ಹಾಗೂ ಸರ್ಕಾರದ ಪ್ರತಿಷ್ಠೆ ಎಲ್ಲವೂ ಸೇರಿಕೊಂಡು ಉಮೇಶ ಮೇಟಿ ಕ್ಷೇತ್ರದಲ್ಲಿ ದಾಖಲೆಯ ೨೨೩೩೨((ಶೇ. ೧೨.೫೧) ಅಂತರದಲ್ಲಿ ಗೆಲುವು ಕಂಡಿದ್ದಾರೆ.
೨೦೨೩ರಲ್ಲಿ ಎಚ್.ವೈ.ಮೇಟಿ ಅವರು ೭೯,೩೩೬(ಶೇ.೪೬.೫೭) ಮತಗಳನ್ನು ಪಡೆದಿದ್ದರೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ೭೩,೪೫೮ (ಶೇ.೪೩) ಮತ ಗಳಿಸಿದ್ದರು. ಆಗ ಗೆಲುವಿನ ಅಂತರ ೫೮೭೮(ಶೇ.೩.೪೫) ಇತ್ತು. ಅದೇ ಉಪ ಚುನಾವಣೆಯಲ್ಲಿ ಉಮೇಶ ಅವರು ೯೮,೯೧೯(ಶೇ.೫೫.೪೧) ಮತ ಪಡೆದಿದ್ದರೆ ಬಿಜೆಪಿಯ ವೀರಣ್ಣ ಚರಂತಿಮಠ ಅವರು ೭೬,೫೮೭(ಶೇ.೪೨.೯) ರಷ್ಟು ಮತ ಪಡೆದಿದ್ದಾರೆ.
ಸದ್ಯ ಉಪ ಚುನಾವಣೆ ಮುಗಿದಿದೆ. ಸಾರ್ವತ್ರಿಕ ಚುನಾವಣೆಗೆ ಇನ್ನು ಎರಡು ವರ್ಷವಷ್ಟೆ ಬಾಕಿ ಇದೆ. ಹೀಗಾಗಿ ಕಾಂಗ್ರೆಸ್‌ನ ಉಮೇಶ ಮೇಟಿ ಅವರ ಎದುರು ಈ ಗೆಲುವು ರಕ್ಷಿಸಿಕೊಳ್ಳುವ ದೊಡ್ಡ ಸವಾಲ್ ಇದೆ. ಚುನಾವಣೆಯಲ್ಲಿ ಅವರು ಸೇರಿದಂತೆ ಸಿಎಂ, ಸಚಿವರು ಸೇರಿದಂತೆ ಪಕ್ಷದ ಮುಖಂಡರು ನೀಡಿರುವ ಭರವಸೆಗಳನ್ನು ಪೂರ್ಣಗೊಳಿಸುವ ಸವಾಲ್ ಅಂತೂ ಉಮೇಶ ಮೇಲಿದೆ. ಇದರ ಮೇಲೆ ಅವರ ಮುಂದಿನ ಚುನಾವಣೆ ಭವಿಷ್ಯ ಅಡಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net