ರೂಪನಗುಡಿ ಗ್ರಾಮದಲ್ಲಿ ಆಯೋಜಿಸಿದ್ದ ಖೇತ್ ಬಚಾವೋ ಅಭಿಯಾನ ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿ ಡಾ.ಎಸ್.ರವಿ ಮಾತನಾಡಿದರು. ವಿಜ್ಞಾನಿ ಡಾ.ಪಿ.ನವೀನ್ ಕುಮಾರ್, ಕೃಷಿ ಇಲಾಖೆಯ ಅಧಿಕಾರಿಗಳಾದ ಗಾಯಿತ್ರಿ, ಜಂಬಣ್ಣ, ಆತ್ಮ ಯೋಜನೆಯ ಉಪನಿರ್ದೇಶಕಿ ಕವಿತಾ, ಜಿಪಂ ಮಾಜಿ ಅಧ್ಯಕ್ಷ ನಾಗರಾಜು ಇದ್ದರು.
ಬಳ್ಳಾರಿ:ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣು ಕೃಷಿಗೆ ಉಪಯುಕ್ತ ಸೂಕ್ಷ್ಮ ಜೀವಿಗಳನ್ನು ಕಳೆದುಕೊಂಡು ಗಟ್ಟಿಯಾಗುತ್ತಿರುವುದು ಕೃಷಿ ವಲಯಕ್ಕೆ ಮಾರಕವಾಗಿದೆ ಎಂದು ಹಗರಿ ಐಸಿಎಆರ್ ಕೇಂದ್ರದ ಮಣ್ಣು ವಿಜ್ಞಾನಿ ಡಾ.ಎಸ್.ರವಿ ಹೇಳಿದರು.
ರೂಪನಗುಡಿ ಗ್ರಾಮದಲ್ಲಿ ಕೃಷಿ ಭೂಮಿಗಳ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿ ಕುರಿತು ಬುಧವಾರ ಆಯೋಜಿಸಿದ್ದ ಖೇತ್ ಬಚಾವೋ ಅಭಿಯಾನದಲ್ಲಿ ಮಾತನಾಡಿದರು. ಮಣ್ಣಿನಲ್ಲಿ 14 ಅತ್ಯಗತ್ಯ ಪೋಷಕಾಂಶಗಳು ಇರುತ್ತವೆ.
ರೈತರು ಜಮೀನಿನ ಮಣ್ಣನ್ನು ಕಡ್ಡಾಯವಾಗಿ ಪರೀಕ್ಷಿಸಿ, ಅದರಲ್ಲಿ ಯಾವ ಪೋಷಕಾಂಶಗಳ ಕೊರತೆಯಿದೆ ಎಂಬುದನ್ನು ಅರಿತು, ಅದಕ್ಕೆ ತಕ್ಕಂತೆ ಗೊಬ್ಬರಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಸ್ತರಣೆ ವಿಜ್ಞಾನಿ ಡಾ.ಪಿ.ನವೀನ್ ಕುಮಾರ್ ಮಾತನಾಡಿ, ರೈತರು ನಕಲಿ ಬಿತ್ತನೆಬೀಜ ಮತ್ತು ರಾಸಾಯನಿಕಗಳ ವಿಚಾರದಲ್ಲಿ ಮೋಸ ಹೋಗುತ್ತಿರುವುದು ಹೆಚ್ಚಾಗುತ್ತಿದೆ.
ಇದನ್ನು ತಡೆಯಲು ರೈತರು ಖರೀದಿಸುವ ಬಿತ್ತನೆಬೀಜ, ಗೊಬ್ಬರ ಹಾಗೂ ರಾಸಾಯನಿಕಗಳಿಗೆ ಕಡ್ಡಾಯವಾಗಿ ಅಧಿಕೃತ ರಸೀದಿ ಪಡೆದುಕೊಳ್ಳಬೇಕು ಎಂದರು.