ತೆಲಂಗಾಣ, ಕರ್ನಾಟಕ ಗಡಿ ವಿವಾದ ಬಗೆಹರಿಸಿ

 ಗಡಿ ವಿವಾದ ಬಗೆಹರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಮನವಿಪತ್ರ ಸಲ್ಲಿಸಿದರು.
ಗಡಿ ವಿವಾದ ಬಗೆಹರಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಮನವಿಪತ್ರ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕ ಡಾ.ಜಾಧವ್​ ಮನವಿ
 ಚಿಂಚೋಳಿ : ಶಾದಿಪುರ ಗ್ರಾಮದ ಸರ್ವೇ ನಂ. 126, 127 ಹಾಗೂ 173ರಲ್ಲಿ 188 ಎಕರೆ ಭೂಮಿ ಫಲಾನುಭವಿಗಳಾದ ಭೂರಹಿತ ಕೃಷಿ ಕಾರ್ಮಿಕರು ಮತ್ತು ಮಾಜಿ ಸೈನಿಕರಿಗೆ 2002ರಲ್ಲಿ ಮಂಜೂರು ಮಾಡಿದ್ದು, ಆದರೆ ಹಸ್ತಾಂತರ ಮಾಡಲು ಗಡಿ ಸಮಸ್ಯೆ ಎದುರಾಗಿದೆ. ಕೂಡಲೇ ಗಡಿ ವಿವಾದ ಬಗೆಹರಿಸಿ, ಕರ್ನಾಟಕ ಮತ್ತು ತೆಲಂಗಾಣದ ಮಧ್ಯೆ ಸಮನ್ವಯ ಸಾಧಿಸಿ ಸರ್ವೇ ಮಾಡಿಸಲು ಕ್ರಮಕೈಗೊಳ್ಳುವಂತೆ ಶಾಸಕ ಡಾ. ಅವಿನಾಶ ಜಾಧವ್​ ಮನವಿ ಮಾಡಿದರು.
ಈ ಕುರಿತು ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಮನವಿಪತ್ರ ಸಲ್ಲಿಸಿದ್ದು, ಶಾದಿಪುರದಲ್ಲಿ 188 ಎಕರೆ ಭೂಮಿಯನ್ನು ಭೂ ಸುಧಾರಣಾ ಕಾಯ್ದೆಯಡಿ 59 ಮಂದಿ ಭೂ ರಹಿತ ಕೃಷಿ ಕಾರ್ಮಿಕರಿಗೆ ಮತ್ತು ಮಾಜಿ ಸೈನಿಕರಿಗೆ ಮಂಜೂರಾಗಿದೆ. ಭೂ ಮಂಜೂರಾತಿ ಆಧರಿಸಿ ಈ ಭೂಮಿಯನ್ನು 2002ರಲ್ಲಿಯೇ 59 ಭೂರಹಿತ ಬಡ ರೈತರ ಹೆಸರಿನಲ್ಲಿ ಪಹಣಿ ಮಾಡಲಾಗಿದೆ. ಆದರೆ ಕಳೆದ 24 ವರ್ಷಗಳಿಂದ ಈ ರೈತರಿಗೆ ಭೂಮಿಯ ವಾಸ್ತವಿಕ ಸ್ವಾಧಿನ ದೊರೆತಿಲ್ಲ. ಈ ಹಿಂದೆಯೇ ಜಿಲ್ಲಾಧಿಕಾರಿಗಳು ಗಡಿ ವಿವಾದವನ್ನು ಬಗೆಹರಿಸಲು ಕರ್ನಾಟಕ ಮತ್ತು ತೆಲಂಗಾಣ ಅಧಿಕಾರಿಗಳ ಜಂಟಿ ಸರ್ವೇಗೆ ಪತ್ರ ಬರೆದಿದ್ದರೂ ಒಮ್ಮೆ ಉಭಯ ರಾಜ್ಯಗಳ ನಡುವೆ ಜಂಟಿ ಸರ್ವೇಯೂ ನಡೆದಿದೆ. ಆಗ ತೆಲಂಗಾಣದವರಿಗೆ ಇದು ಕರ್ನಾಟಕದ ಜಮೀನು. ಇದರಲ್ಲಿ ನಮ್ಮ ರಾಜ್ಯದ ಜಮೀನು ಇಲ್ಲವೆಂದು ತಿಳಿದು ಅಳತೆ ಮುಂದೂಡಿದ್ದಾರೆ ಎಂದು ಮನವರಿಕೆ ಮಾಡಿದ್ದಾರೆ.
ಇದರಿಂದ 25 ವರ್ಷಗಳಿಂದ ಸ್ವಂತ ಭೂಮಿ ಕನಸು ಹಾಗೆಯೇ ಉಳಿದಿದೆ. ಗಣಿ ಮಾಫಿಯಾದವರು ಅಧಿಕಾರಿಗಳೊಂದಿಗೆ ಭಾಗಿಯಾಗಿ ಕೃಷಿಗೆ ಯೋಗ್ಯವಾದ ಜಮೀನನ್ನು ನಿರಂತರವಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ. ಮಂಜೂರಾದ 59 ರೈತ ಕುಟುಂಬಗಳ ಪೈಕಿ ಕೇವಲ 7 ಕುಟುಂಬ ಮಾತ್ರ ಭೂಮಿಯ ಸ್ವಾಧಿನ ಹೊಂದಿದ್ದು, ಉಳಿದ 52 ಕುಟುಂಬಗಳು ಇಂದಿಗೂ ಭೂಮಿಯಿಂದ ವಂಚಿತರಾಗಿದ್ದಾರೆ. ಫಲಾನುಭವಿಗಳು ಭೂಮಿ ಉಳಿಸಿಕೊಳ್ಳಲು ಮಹಿಳೆಯರು, ಮಕ್ಕಳೊಂದಿಗೆ ಸ್ಥಳದಲ್ಲಿಯೇ ವಾರದಿಂದ ಧರಣಿ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ತೆಲಂಗಾಣ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಉಭಯ ರಾಜ್ಯಗಳ ಕಂದಾಯ ಮತ್ತು ಭೂ ದಾಖಲೆ ಇಲಾಖೆಗಳು ಮತ್ತು ಸರ್ವೇ ಆಫ್​ ಇಂಡಿಯಾ ಅಧಿಕಾರಿಗಳಿಂದ ಜಮೀನಿನ ಸರ್ವೇ ನಡೆಸಿ ಗಡಿ ಗುರುತಿಸಬೇಕು. ಜತೆಗೆ ಸದರಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬಡ ರೈತರ ಹಿತದೃಷ್ಟಿಯಿಂದ ಹಾಗೂ ಕರ್ನಾಟಕದ ಆಸ್ತಿಯನ್ನು ನೆರೆಯ ತೆಲಂಗಾಣದ ಜನರಿಂದ ಮತ್ತು ಗಣಿ ಮಾಫಿಯಾದವರಿಂದ ಉಳಿಸುವ ನಿಟ್ಟಿನಲ್ಲಿ ತಣ ಕ್ರಮ ಕೈಗೊಳ್ಳಬೇಕೆಂದು ಎಂದು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net