ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಹೊಡೆಯುವಂತಿಲ್ಲ| High court

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ ಎಚ್ಚರಿಕೆ
  • ಪ್ರಕರಣ ರದ್ದುಕೋರಿದ ಶಿಕ್ಷಕಿಯ ಅರ್ಜಿ ವಿಚಾರಣೆ
ಬೆಂಗಳೂರು: ಶಾಲೆಯಲ್ಲಿ ಮಕ್ಕಳಿಗೆ ಥಳಿಸಲು ಅಥವಾ ಒದೆಯಲು ಶಿಕ್ಷಕರಿಗೆ ಅವಕಾಶವಿಲ್ಲ. ಯಾವುದೇ ಶಿಕ್ಷಕರು ಅದನ್ನು ಮಾಡಬಾರದು ಎಂದು ಹೈಕೋರ್ಟ್​ ಹೇಳಿದೆ.
ವಿದ್ಯಾರ್ಥಿನಿಯೊಬ್ಬಳಿಗೆ ಹಲ್ಲೆ ಮಾಡಿದ ಆರೋಪದಲ್ಲಿ ತಮ್ಮ ಮೇಲೆ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಂಗಳೂರು ಮೂಲದ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಬಂದಾಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಗುವಿಗೆ ಯಾಕೆ ಥಳಿಸಿದಿರಿ ಎಂದು ಪ್ರಶ್ನಿಸಿತು. ಮಕ್ಕಳಿಗೆ ಥಳಿಸುವ ಅಧಿಕಾರ ಯಾವುದೇ ಶಿಕ್ಷಕರಿಗೆ ಇಲ್ಲ. ಅಂತವರನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದಿತು. 
ಅರ್ಜಿದಾರರ ಪರ ವಕೀಲರು ಸಮಜಾಯಿಷಿ ನೀಡಲು ಮುಂದಾದರಾದರೂ, ಅದನ್ನು ಆಲಿಸದ ನ್ಯಾಯಪೀಠ ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. 

ಪ್ರಕರಣದ ಹಿನ್ನೆಲೆ:

6 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳ ತಾಯಿ ನೀಡಿದ ದೂರಿನ ಆಧಾರದಲ್ಲಿ ಮಂಗಳೂರಿನ ಸುರತ್ಕಲ್​ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಹಿಂದೊಮ್ಮೆ ಇದೇ ಶಿಕ್ಷಕಿಯು ವಿದ್ಯಾರ್ಥಿನಿಗೆ ಹೊಡೆದಿದ್ದು, ಈ ಬಗ್ಗೆ ಬಾಲಕಿಯ ತಾಯಿಯು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿರುತ್ತಾರೆ. ಆ ಬಗ್ಗೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಮಾತುಕತೆ ನಡೆಸಿ ವಿಷಯವನ್ನು ಅಲ್ಲಿಗೆ ಮುಗಿಸಿರುತ್ತಾರೆ. ಆದಾದ ನಂತರವೂ ಜ. 30ರಂದು ಶಿಕ್ಷಕಿಯು ತನ್ನ ಮಗಳಿಗೆ ಮತ್ತೊಮ್ಮೆ ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ತಾಯಿ, ಈ ವಿಷಯವನ್ನು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದ್ದರು. ಇದನ್ನು ಆಡಳಿತ ಮಂಡಳಿಯ ಸದಸ್ಯರೊಬ್ಬರು ನಿರಾಕರಿಸಿದ್ದರೂ, ಸಹಪಾಠಿ ವಿದ್ಯಾರ್ಥಿನಿಯಲ್ಲಿ ವಿಚಾರಿಸಿದಾಗ ಆಕೆ ಅದನ್ನು ಒಪ್ಪಿಕೊಂಡಿದ್ದಳು. ಈ ಆಧಾರದಲ್ಲಿ ಶಿಕ್ಷಕಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿತ್ತು. ಈ ಆಧಾರದಲ್ಲಿ ಪೊಲೀಸರು ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನು ರದ್ದುಗೊಳಿಸವಂತೆ ಕೋರಿ ಶಿಕ್ಷಕಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net