ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕೈವಾರ ತಾತಯ್ಯ ಜಯಂತಿಯಲ್ಲಿ ತೂಬಗೆರೆ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೃಷ್ಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಟಿ.ವಿ.ವೆಂಕಟೇಶ್, ರಾಮಕೃಷ್ಣ, ತೂಬಗೆರೆ ಸರ್ಕಾರಿ ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಹನುಮಂತ್ ರಾಜು, ಯುವ ಮುಖಂಡರಾದ ವಿಕಾಸ್, ಉಮೇಶ್, ನವೀನ್, ಸಿ.ಎಂ.ಕೃಷ್ಣಪ್ಪ, ರಾಘವೇಂದ್ರ, ಅರುಣ್ ಕುಮಾರ್, ಅವಲಪ್ಪ, ಕಾಚಹಳ್ಳಿ ವೆಂಕಟಪ್ಪ ಇದ್ದರು.
ತೂಬಗೆರೆ : ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ ಕೈವಾರ ತಾತಯ್ಯ. ಅವರ ತತ್ವ ಪದಗಳು ಮನುಕುಲಕ್ಕೆ ಮಾದರಿ ಎಂದು ಕೆಪಿಸಿಸಿ ಸದಸ್ಯ ಎಸ್.ಆರ್. ಮುನಿರಾಜು ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಬಸ್ ನಿಲ್ದಾಣ ಬಳಿ ಬಲಿಜ ಸಂಘದಿಂದ ಆಯೋಜಿಸಿದ್ದ ಕೈವಾರ ತಾತಯ್ಯ ಯೋಗಿ ನಾರೇಯಣ ಜಯಂತಿಯಲ್ಲಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು ಮಾತನಾಡಿ, ಇಡೀ ವಿಶ್ವಕ್ಕೆ ಆಧ್ಯಾತ್ಮಿಕ ಸಂದೇಶ ಸಾರಿದ ಕಾಲಜ್ಞಾನ, ಅವರು ನೀಡಿದ ಉಪದೇಶ ಪ್ರತಿ ವ್ಯಕ್ತಿಗೆ ಸನ್ಮಾರ್ಗದ ಪಥವಾಗಬೇಕು. ಇಂತಹ ಮಹನೀಯರು ನಮಗೆ ನೀಡಿರುವ ಸಂದೇಶಗಳನ್ನು ಪಾಲನೆ ಮಾಡಬೇಕು. ಅವರ ಆದರ್ಶ, ಸಿದ್ಧಾಂತವನ್ನು ಎಲ್ಲರ ಜೀವನದಲ್ಲಿ ಅನುಸರಿಸುವಂತೆ ಆಗಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಬಿಜೆಪಿ ಘಟಕದ ಕಾರ್ಯದರ್ಶಿ ಪ್ರತಾಪ್ ಮಾತನಾಡಿ, ಯೋಗಿ ನಾರೇಯಣ ಅವರು ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ತತ್ವಪದ ರಚಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರಿಗೆ ಆಧ್ಯಾತ್ಮದ ದಾರಿ ತೋರಿಸಿದ ಸೂಫಿಗಳು, ಪರಂಪರೆ ಮುಂದುವರಿಸಿ ಸಮಾಜದಲ್ಲಿ ಬದುಕು ಕಟ್ಟಿಕೊಳ್ಳುವ ಕುರಿತು ದಾರಿ ತೋರಿದ್ದಾರೆ ಎಂದರು.
ನಿವೃತ್ತ ಉಪ ತಹಸೀಲ್ದಾರ್ ವೆಂಕಟರಮಣಪ್ಪ ಮಾತನಾಡಿ, ಅನೇಕ ಮಹಾನ್ ಪುರುಷರು, ಸಾಧು ಸಂತರು, ಸಮಾಜದ ಏಳಿಗೆಗಾಗಿ ಶ್ರಮಿಸಿದ್ದಾರೆ. ವಚನ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಯೋಗಿ ನಾರೇಯಣ ಯತೀಂದ್ರ ಅವರೂ ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ ಬದಲಾವಣೆಗೆ ಶ್ರಮಿಸಿದ್ದಾರೆ ಎಂದರು.