ಪ್ರತಿಭೆ ಹೊರತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿ

ಹಲಗೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗುಲ್ನಾಜ್ ಭಾನು, ಸಿ.ಲತಾ, ಪುಟ್ಟಸ್ವಾಮಿಗೌಡ, ಕುಳ್ಳಯ್ಯ, ಪುಟ್ಟರಾಜು, ಜಿ.ಎಸ್. ಕೃಷ್ಣ ಇದ್ದರು.
ಹಲಗೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗುಲ್ನಾಜ್ ಭಾನು, ಸಿ.ಲತಾ, ಪುಟ್ಟಸ್ವಾಮಿಗೌಡ, ಕುಳ್ಳಯ್ಯ, ಪುಟ್ಟರಾಜು, ಜಿ.ಎಸ್. ಕೃಷ್ಣ ಇದ್ದರು.
Published on
ಹಲಗೂರು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯಲು ಪಠ್ಯ ಮುಖ್ಯ. ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲೆ, ಸಂಗೀತ, ನೃತ್ಯದಂತಹ ಸುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಪ್ರತಿಭಾ ಕಾರಂಜಿ ವೇದಿಕೆಗಳು ಸಹಕಾರಿಯಾಗಲಿವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಲ್ನಾಜ್ ಭಾನು ಅಭಿಪ್ರಾಯಪಟ್ಟರು.
ಹಲಗೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಅವರಣದಲ್ಲಿರುವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಕಾರ್ಯಕ್ರಮ-2025 ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಎಲ್ಲ ಶಾಲೆಗಳಲ್ಲಿ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮಾರಗೌಡನಹಳ್ಳಿ ಶಾಲೆಯ ಮುಖ್ಯಶಿಕ್ಷಕ ಬೋರೇಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಸಹ ಮಗುವಿನ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಪಠ್ಯೇತರ ಚಟುವಟಿಕೆ ಪ್ರದರ್ಶನ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಶಿಕ್ಷಕ, ಉಪನ್ಯಾಸಕ, ವಿಜ್ಞಾನಿಗಳು, ವೈದ್ಯ, ಸಮಾಜ ಸೇವಕ ಆಗಬಹುದು. ಹಿಂಜರಿಕೆ ಬೇಡ. ಪ್ರತಿಭೆಯನ್ನು ಪ್ರದರ್ಶನ ಮಾಡಿ ಎಂದು ಕರೆ ನೀಡಿದರು.
ಸರ್ಕಾರಿ ನೌಕರ ಸಂಘದ ತಾಲೂಕು ಗೌರವ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ವಿದ್ಯಾರ್ಥಿಗಳು ಬೌದ್ಧಿಕ ಜ್ಞಾನ ಹೆಚ್ಚಿಸುವ ಜತೆಗೆ ನಿಮ್ಮಲ್ಲಿರುವ ಇತರ ಕೌಶಲಗಳನ್ನು ಜಗತ್ತಿಗೆ ಪ್ರದರ್ಶಿಸಬೇಕು. ಸ್ಪರ್ಧೆಗಳಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದರು.
ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಲಗೂರು ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಕಂಠಪಾಠ, ಧಾರ್ಮಿಕ ಪಠಣ, ಕಥೆ ಹೇಳುವಿಕೆ, ಅಭಿನಯ, ಭಕ್ತಿ ಗೀತೆ, ಛದ್ಮವೇಷ, ಆಶುಭಾಷಣ, ಮಿಮಿಕ್ರಿ, ದೇಶಭಕ್ತಿ ಗೀತೆ, ಚಿತ್ರಕಲೆ, ಪ್ರಬಂಧ ರಚನೆ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು.
ಗ್ರಾಪಂ ಉಪಾಧ್ಯಕ್ಷೆ ಸಿ.ಲತಾ, ಮುಖ್ಯಶಿಕ್ಷಕ ಕುಳ್ಳಯ್ಯ, ಬೋರೇಗೌಡ, ಸಿಆರ್‌ಪಿ ಪುಟ್ಟರಾಜು, ಜಿ.ಎಸ್.ಕೃಷ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು..
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net