ಹನೂರು ಭಾಗದಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದ್ದು, ಕೆಲವು ಗ್ರಾಮಗಳಲ್ಲಿ ಸಾವಿರ ಅಡಿ ಬೋರ್ ಕೊರೆದರೂ ನೀರು ಸಿಗುತ್ತಿಲ್ಲ. ಇದರಿಂದ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹಾಗಾಗಿ ಬೇಸಿಗೆಯಲ್ಲಿ ನೀರಿನ ಅಭಾವವನ್ನು ನೀಗಿಸುವುದೇ ಎಲ್ಲರಿಗೂ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಮಾರ್ಟಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಮುಂದಿನ 3 ತಿಂಗಳವರೆಗೆ ಗ್ರಾಮಗಳಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಪ್ರತಿಯೊಬ್ಬರೂ ಅಗತ್ಯ ಮುತುವರ್ಜಿ ವಹಿಸಬೇಕಿರುವುದು ಪ್ರಸ್ತುತ ದಿನಗಳಲ್ಲಿ ಅಗತ್ಯವೂ, ಅನಿವಾರ್ಯವೂ ಆಗಿದೆ. ನೀರಿನ ಸಮಸ್ಯೆ ಉದ್ಭವಿಸಿರುವ ಗ್ರಾಮಗಳಲ್ಲಿ ಖಾಸಗಿ ಜಮೀನಿನ ಪಂಪ್‌ಸೆಟ್‌ನಿಂದ ನೀರು ಪೂರೈಸಲು ಅಗತ್ಯ ಕ್ರಮವಹಿಸಬೇಕು. ಅಗತ್ಯವಿರುವೆಡೆ ಬೋರ್ ಕೊರೆಸಬೇಕು. ಜತೆಗೆ ಟ್ಯಾಂಕರ್ ಮೂಲಕ ನಿರೋದಗಿಸಬೇಕು. ಇನ್ನು ಕೌದಳ್ಳಿ, ದಿನ್ನಳ್ಳಿ, ಮಾರ್ಟಳ್ಳಿ, ಹೂಗ್ಯಂ, ರಾಮಾಪುರ, ಶೆಟ್ಟಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಪಂ ಅಧಿಕಾರಿಗಳು 3 ತಿಂಗಳವರೆಗೆ ಟ್ಯಾಂಕರ್‌ಅನ್ನು ಬಾಡಿಗೆ ಪಡೆದು ನೀರು ಸಂಗ್ರಹಿಸಿ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಇರಿಸಬೇಕು. ಗ್ರಾಮಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಎದುರಾದ ಕೂಡಲೇ ನೀರು ಪೂರೈಸಬೇಕು. ಇದು ಸೋಮವಾರದಿಂದ ಕಾರ್ಯರೂಪಕ್ಕೆ ಬರಬೇಕು. ಇದಕ್ಕೆ ಅಗತ್ಯ ಕ್ರಮವಹಿಸುವಂತೆ ತಾಪಂ ಇಒ ಉಮೇಶ್ ಅವರಿಗೆ ಸೂಚಿಸಿದರು.